ನವದೆಹಲಿ: ಚುನಾವಣಾ ಆಯೋಗದ ಅಕ್ರಮಗಳಿಗೆ ಸಂಬಂಧಿಸಿದಂತೆ ತನ್ನ ಬಳಿ ‘ಆಟಂ ಬಾಂಬ್’ ಇರುವುದಾಗಿ ಹೇಳುತ್ತಾ ಬಂದಿರುವ ಕಾಂಗ್ರೆಸ್, ಬೆಂಗಳೂರಿನಲ್ಲಿ ಮಂಗಳವಾರ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಆಯೋಗದ ಗಂಭೀರ ಅಕ್ರಮಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿದೆ.
‘ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಮಹದೇವಪುರ, ರಾಜಾಜಿನಗರ, ಗಾಂಧಿನಗರ ಸೇರಿ ಕೆಲವು ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರನ್ನು ಸೇರಿಸುವ/ತೆಗೆಯುವ ಕೆಲಸ ಮಾಡಲಾಗಿತ್ತು. ಬಿಜೆಪಿ ಗೆಲ್ಲಿಸಲು ಆಯೋಗ ಕಳೆದ ಚುನಾವಣೆಯಲ್ಲಿ ಹೀಗೆ ಮಾಡಿತ್ತು’ ಎಂದು ರಾಹುಲ್ ಹಾಗೂ ಕೆಲವು ಕಾಂಗ್ರೆಸ್ಸಿಗರು ಇತ್ತೀಚೆಗೆ ಆಪಾದಿಸಿದ್ದರು ಹಾಗೂ ಬೆಂಗಳೂರಲ್ಲಿ ಆ.5ರಂದು ಪ್ರತಿಭಟನೆ ನಡೆಸುವ ಘೋಷಣೆ ಮಾಡಿದ್ದರು.
ಭಾನುವಾರ ಈ ಬಗ್ಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮೂಲಕ (ಎಸ್‌ಐಆರ್) ಆಯೋಗ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಿ ಮಾಡಿಕೊಂಡಿದೆ. ಇದು ಆಯೋಗದ ಪಕ್ಷಪಾತವನ್ನು ತೋರಿಸುತ್ತಿದೆ. ಆ.5ರಂದು ಬೆಂಗಳೂರಿನಲ್ಲಿ ಪಕ್ಷವು ಆಯೋಗ ಎಸಗಿರುವ ಗಂಭೀರ ದುಷ್ಕೃತ್ಯಗಳನ್ನು ಬಹಿರಂಗಪಡಿಸಲಿದೆ’ ಎಂದರು.
‘ಆಯೋಗ ಬಿಡುಗಡೆ ಮಾಡಿದ ಬಿಹಾರದ ಕರಡು ಮತದಾರರ ಪಟ್ಟಿಯಿಂದ ಅನೇಕ ಮತದಾರರ ಹೆಸರು ಕೈಬಿಡಲಾಗಿದೆ. ಚುನಾವಣಾ ಆಯೋಗದಿಂದ ನಾವು ತಟಸ್ಥತೆ ನಿರೀಕ್ಷಿಸಿದ್ದೇವೆ. ಆದರೆ ಅದು ಹಾಗೆ ಮಾಡುತ್ತಿಲ್ಲ. ಇದರಿಂದ ನ್ಯಾಯಯುತ ಪ್ರಜಾಸತ್ತೆ ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆಗೆ ಆ.7ರಂದು ದಿಲ್ಲಿಯಲ್ಲಿ ಇಂಡಿಯಾ ಕೂಟ ನಾಯಕರ ಸಭೆ ನಡೆಯಲಿದೆ’ ಎಂದರು.
ಚುನಾವಣೆ ಆಯೋಗಕಚೇರಿಗೆ ಆ.8ರಂದು ಇಂಡಿಯಾ ಮೆರವಣಿಗೆ
ನವದೆಹಲಿ: ಬಿಹಾರ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಕಾರ್ಯತಂತ್ರ ರೂಪಿಸಲು ‘ಇಂಡಿಯಾ’ ಕೂಟ ನಾಯಕರು ಆ.7ರಂದು ಭೋಜನಕೂಟ ಆಯೋಜಿಸಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ‘ಇಂಡಿಯಾ’ ನಾಯಕರು ಆ.8ರಂದು ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ನಡೆಸಿ ದೂರು ಸಲ್ಲಿಸಲು ಯೋಚಿಸಿದ್ದಾರೆ ಎಂದು ಅವು ಹೇಳಿವೆ.