ಭಾರತ ‘ರಷ್ಯಾ ತೈಲ ಖರೀದಿ’ ನಿಲ್ಲಿಸಲ್ಲ : ಕೇಂದ್ರ ಸರ್ಕಾರ

KannadaprabhaNewsNetwork |  
Published : Aug 04, 2025, 12:30 AM ISTUpdated : Aug 04, 2025, 02:07 AM IST
ರಷ್ಯಾ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   ರಷ್ಯಾ ಜತೆ ವ್ಯಾಪಾರ ಮುಂದುವರಿಸಿದರೆ ದಂಡ ವಿಧಿಸುವುದಾಗಿ ಹಾಕಿರುವ ಬೆದರಿಕೆ ಹೊರತಾಗಿಯೂ, ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಉತ್ಪನ್ನಗಳ ಮೇಲೆ ಶೇ.25ರಷ್ಟು ತೆರಿಗೆ ಹಾಕುವುದಾಗಿ ಮಾಡಿರುವ ಘೋಷಣೆ ಮತ್ತು ರಷ್ಯಾ ಜತೆ ವ್ಯಾಪಾರ ಮುಂದುವರಿಸಿದರೆ ದಂಡ ವಿಧಿಸುವುದಾಗಿ ಹಾಕಿರುವ ಬೆದರಿಕೆ ಹೊರತಾಗಿಯೂ, ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

‘ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಆ.7ರಿಂದ ಭಾರತದಿಂದ ಆಮದಾಗುವ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೇ.25 ತೆರಿಗೆ ಹಾಕಲಾಗುವುದು. ಜತೆಗೆ ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ದಂಡವನ್ನೂ ವಿಧಿಸಲಾಗುವುದು’ ಎಂದು ಟ್ರಂಪ್‌ ಈಗಾಗಲೇ ಘೋಷಿಸಿದ್ದಾರೆ. ‘ಇಷ್ಟಾದರೂ ರಷ್ಯಾದಿಂದ ತೈಲ ಖರೀದಿಸುವ ಭಾರತದ ನೀತಿಯಲ್ಲಿ ತಕ್ಷಣಕ್ಕೆ ಯಾವುದೇ ಬದಲಾವಣೆ ಆಗುವುದಿಲ್ಲ. ರಷ್ಯಾ ಜತೆಗೆ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾತ್ರೋರಾತ್ರಿ ತೈಲ ಖರೀದಿ ಸ್ಥಗಿತಗೊಳಿಸುವುದು ಅಷ್ಟು ಸುಲಭವಲ್ಲ’ ಎಂದು ಮೂಲಗಳು ಹೇಳಿವೆ.

ರಷ್ಯಾದಿಂದ ಭಾರತದ ತೈಲ ಖರೀದಿಯನ್ನು ಸಮರ್ಥಿಸಿಕೊಂಡಿರುವ ಮೂಲಗಳು, ‘ಈ ಕ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ನಿಯಂತ್ರಣದಲ್ಲಿದೆ. ರಷ್ಯಾದ ಇಂಧನದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಹೊರತಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾಗಿಲ್ಲ. ಇದಕ್ಕೆ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದೇ ಕಾರಣ’ ಎಂದು ತಿಳಿಸಿವೆ.

ಶೇ.40ರಷ್ಟು ರಷ್ಯಾದಿಂದ ಆಮದು:

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾದ ಭಾರತವು, ರಷ್ಯಾದಿಂದ ಈ ವರ್ಷದ ಜನವರಿ-ಜೂನ್‌ನಲ್ಲಿ ದಿನಕ್ಕೆ ಸುಮಾರು 1.75 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲ ಆಮದು ಮಾಡಿಕೊಂಡಿದೆ. ಒಟ್ಟಾರೆ ಭಾರತದ ಶೇ.40ರಷ್ಟು ಕಚ್ಚಾ ತೈಲ ಆಮದಿಗೆ ರಷ್ಯಾವೇ ಮೂಲವಾಗಿದೆ.

ಇರಾನ್‌ ಮತ್ತು ವೆನುಜುವೆಲಾದ ಕಚ್ಚಾ ತೈಲದ ಮೇಲೆ ಪಾಶ್ಚಾತ್ಯ ದೇಶಗಳು ನೇರ ನಿರ್ಬಂಧ ಹೇರಿವೆ. ಆದರೆ ರಷ್ಯಾದ ತೈಲದ ಮೇಲೆ ನೇರವಾಗಿ ನಿರ್ಬಂಧ ಇಲ್ಲ. ಯುರೋಪಿಯನ್‌ ಯೂನಿಯನ್‌ ನಿಗದಿ ಮಾಡಿದಕ್ಕಿಂತ ಕಡಿಮೆ ದರಕ್ಕೆ ಭಾರತವು ರಷ್ಯಾದ ತೈಲವನ್ನು ಸಂಸ್ಕರಣೆ ಮಾಡುತ್ತದೆ.

ಅಮೆರಿಕದ ಒತ್ತಡಕ್ಕೆ ಮಣಿದರೆ ವೆಚ್ಚ ಭಾರಿ ಏರಿಕೆ

ಈ ನಡುವೆ, ಅಮೆರಿಕದ ಒತ್ತಾಯಕ್ಕೆ ಮಣಿದು ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಿದರೆ ಭಾರತದ ವಾರ್ಷಿಕ ತೈಲ ಆಮದು ವೆಚ್ಚ 78 ಸಾವಿರ ಕೋಟಿ ರು.ನಿಂದ 95 ಸಾವಿರ ಕೋಟಿ ರು.ಗೆ ಏರಿಕೆಯಾಗುವ ಸಾಧ್ಯತೆ ಇದೆ. ರಷ್ಯಾದಿಂದ ಪ್ರತಿ ಬ್ಯಾರೆಲ್‌ ತೈಲಕ್ಕೆ ಕನಿಷ್ಠ 5 ಡಾಲರ್‌ನಷ್ಟು ರಿಯಾಯಿತಿ ಸಿಗುತ್ತಿದೆ. ಒಂದು ವೇಳೆ ಬೇರೆ ದೇಶದಿಂದ ತೈಲ ಖರೀದಿ ಆರಂಭಿಸಿದರೆ ಭಾರತಕ್ಕೆ ಅದು ದುಬಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ