ಚೆನ್ನೈ: ನಿರೀಕ್ಷೆಯಂತೆ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲಿವೆ. ಚೆನ್ನೈಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದನ್ನು ಘೋಷಿಸಿದ್ದಾರೆ.ಮಾಜಿ ಸಿಎಂ, ಅಣ್ಣಾ ಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಬಿಜೆಪಿಯ ನಿರ್ಗಮಿತ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರೊಂದಿಗೆ ವೇದಿಕೆ ಹಂಚಿಕೊಂಡು, ಶಾ ಮಾತನಾಡಿದರು. ‘ಈ ಬಾರಿಯ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿ ಹಾಗೂ ತಮಿಳುನಾಡಿನಲ್ಲಿ ಪಳನಿಸ್ವಾಮಿಯವರ ನೇತೃತ್ವದಲ್ಲಿ ಎದುರಿಸಲಾಗಿವುದು’ ಎಂದು ಅವರು ಹೇಳಿದರು.
ಇದೇ ವೇಳೆ, 1998ರಲ್ಲಿ ಮಾಜಿ ಸಿಎಂ ಜಯಲಲಿತಾ ಅವರ ಮುಂದಾಳತ್ವದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿ, 39ರಲ್ಲಿ 30 ಲೋಕಸಭಾ ಸೀಟುಗಳನ್ನು ಗೆದ್ದದ್ದನ್ನು ಸ್ಮರಿಸಿದ ಶಾ, ‘ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಯಲಲಿತಾ ಅವರು ಒಟ್ಟಾಗಿ ಕೆಲಸ ಮಾಡಿದ್ದರು.ಆಗ ಪಕ್ಷ ಎನ್‌ಡಿಎ ಕೂಟದ ಭಾಗವಾಗಿತ್ತು, ಅಂತೆಯೇ, ಎನ್‌ಡಿಎ ಒಕ್ಕೂಟವು ತಮಿಳುನಾಡು ಚುನಾವಣೆಯನ್ನು ಖಂಡಿತವಾಗಿ ಗೆಲ್ಲಲಿದೆ ಎಂಬ ವಿಶ್ವಾಸವನ್ನೂ ಶಾ ವ್ಯಕ್ತಪಡಿಸಿದರು’ ಎಂದರು.
ಆದರೆ, ಅಣ್ಣಾಡಿಎಂಕೆ ಪಕ್ಷದ ಆಂತರಿಕ ವಿಷಯದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ವರ್ಷಗಳ ಹಿಂದೆ ಅಣ್ಣಾಡಿಎಂಕೆ-ಬಿಜೆಪಿ ಮೈತ್ರಿಯು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಪಳನಿಸ್ವಾಮಿ ಸಂಘರ್ಷದ ಕಾರಣ ಮುರಿದಬಿದ್ದಿತ್ತು. ಹೀಗಾಗಿಯೇ ಈ ಬಾರಿ ಅಣ್ಣಾಮಲೈರನ್ನು ಬದಲಿಸಿ ನೈನಾರ್ ನಾಗೇಂದ್ರನ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದೆ.
ತ.ನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ಆಯ್ಕೆ ಖಚಿತ
ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.ರಾಜ್ಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಾಗೇಂದ್ರನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರ ಹೆಸರನ್ನು ನಿರ್ಗಮಿತ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಕೇಂದ್ರ ಸಚಿವ ಎಲ್. ಮುರುಗನ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್, ಮಹಿಳಾ ಮೋರ್ಚಾ ಅಧ್ಯಕ್ಷರೂ ಆದ ಶಾಸಕಿ ವನತಿ ಶ್ರೀನಿವಾಸನ್ ಅವರು ಸೂಚಿಸಿದ್ದರು.
ಮೊದಲು ಅಣ್ಣಾಡಿಎಂಕೆ ಪಕ್ಷದಲ್ಲಿದ್ದ ನಾಗೇಂದ್ರನ್, ನಂತರ ಬಿಜೆಪಿ ಸೇರಿ ರಾಜ್ಯದ ಬಿಜೆಪಿ ಉಪಾಧ್ಯಕ್ಷರಾಗಿದ್ದರು.
ಅಣ್ಣಾಡಿಎಂಕೆ ಹಾಗೂ ಬಿಜೆಪಿ ಮೈತ್ರಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆ.ಅಣ್ಣಾಮಲೈ ಅವರು ತಾವು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲ್ಲ ಎಂದಿದ್ದರು. ಹೀಗಾಗಿ ನೈನಾರ್‌ರನ್ನು ಆಯ್ಕೆ ಮಾಡಲಾಗಿದೆ.
ಗುರುಮೂರ್ತಿ ಜತೆ ಶಾ ಭೇಟಿ:
ಈ ನಡುವೆ, ಚೆನ್ನೈನಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆರ್‌ಎಸ್‌ಎಸ್ ನಂಟಿನ ತುಘಲಕ್ ಪತ್ರಿಕೆಯ ಸಂಪಾದಕ ಎಸ್. ಗುರುಮೂರ್ತಿ ಅವರನ್ನು ಭೇಟಿ ಮಾಡಿದರು ಹಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ಕೆ. ಅಣ್ಣಾಮಲೈ ಶಾ ಅವರ ಜೊತೆಗಿದ್ದರು.