ಇವಿಎಂ ತಿರುಚಬಹುದು: ಮಸ್ಕ್‌ ನುಡಿ ಭಾರಿ ವಿವಾದ

KannadaprabhaNewsNetwork |  
Published : Jun 17, 2024, 01:33 AM ISTUpdated : Jun 17, 2024, 05:11 AM IST
elon musk 00.j

ಸಾರಾಂಶ

ಪೇಪರ್‌ ಬ್ಯಾಲೆಟ್‌ ಸೂಕ್ತ ಎಂದು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅಭಿಪ್ರಾಯ ಪಟ್ಟಿದ್ದು, ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾದರೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸಿದೆ.

ನವದೆಹಲಿ: ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ) ಹ್ಯಾಕ್‌ ಆಗುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಈ ಮುಂಚೆ ಜಾರಿಯಲ್ಲಿದ್ದ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆಯೇ ಸೂಕ್ತ’ ಎಂದು ವಿಶ್ವದ ನಂ.1 ಶ್ರೀಮಂತ, ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ನೀಡಿದ ಹೇಳಿಕೆಯೊಂದು ಭಾರತದಲ್ಲಿ ಬಿರುಗಾಳಿ ಎಬ್ಬಿಸಿದೆ.ಮಸ್ಕ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬೆಂಬಲಿಸಿದ್ದಾರೆ. ಆದರೆ ಇಂಥ ಹೇಳಿಕೆ ‘ಯಾರೂ ಸುರಕ್ಷಿತ ಡಿಜಿಟಲ್‌ ಹಾರ್ಡ್‌ವೇರ್‌ ಮಾಡಲು ಅಸಾಧ್ಯ ಎಂಬ ಅಭಿಪ್ರಾಯ ಸೃಷ್ಟಿಸಿದೆ’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿರುಗೇಟು ನೀಡಿದ್ದಾರೆ. ಜೊತೆಗೆ ಈ ವಿಷಯ ಮಸ್ಕ್‌ ಮತ್ತು ರಾಜೀವ್‌ ನಡುವೆ ಟ್ವೀಟರ್‌ನಲ್ಲಿ ಚರ್ಚೆಗೂ ನಾಂದಿ ಹಾಡಿದೆ.ಮಸ್ಕ್‌ ಹೀಗೆ ಹೇಳಲು ಕಾರಣ:

ಇತ್ತೀಚೆಗೆ ಪೋರ್ಟೊರಿಕೋ ದೇಶದಲ್ಲಿ ನಡೆದ ಚುನಾವಣೆ ವೇಳೆ ಸಾಫ್ಟ್‌ವೇರ್‌ ದೋಷದಿಂದಾಗಿ ಇವಿಎಂಗಳಲ್ಲಿ ಚಲಾವಣೆಯಾಗಿದ್ದ ಮತಗಳ ಎಣಿಕೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಆದರೆ ಪೇಪರ್‌ ಟ್ರಯಲ್‌ ಇದ್ದ ಕಾರಣ, ಅವುಗಳಲ್ಲಿನ ಮತಗಳನ್ನು ಆಧರಿಸಿ ಫಲಿತಾಂಶ ಘೋಷಣೆ ಮಾಡಲಾಗಿತ್ತು. ಈ ಇವಿಎಂಗಳನ್ನು ಅಮೆರಿಕದ ಕಂಪನಿಯೊಂದು ಪೂರೈಸಿತ್ತು. ಈ ವಿಷಯವೇ ಮಸ್ಕ್‌ ಅವರು ಇವಿಎಂ ಸಂದೇಹಿಸಲು ಕಾರಣವಾಗಿದೆ.ಮಸ್ಕ್‌ ಹೇಳಿದ್ದೇನು?:

ಇದೇ ವರ್ಷ ಅಮೆರಿಕದಲ್ಲೂ ಅಧ್ಯಕ್ಷೀಯ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದ ಮಸ್ಕ್‌ ‘ಪೋರ್ಟೊರಿಕೋದಲ್ಲಿ ನೂರಾರು ಇವಿಎಂ ಮಷಿನ್‌ಗಳಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್‌ ಪೇಪರ್‌ ಟ್ರಯಲ್‌ ಇದ್ದ ಕಾರಣ ಅವುಗಳ ಮತ ಎಣಿಸಿ ಅಕ್ರಮ ಸರಿಪಡಿಸಲಾಗಿದೆ. ಇವಿಎಂಗಳನ್ನು ಹ್ಯಾಕ್‌ ಮಾಡುವ ಅವಕಾಶ ಮತ್ತು ಅವುಗಳ ಮಾಹಿತಿಯನ್ನು ತಿರುಚುವ ಸಂಭವನೀಯ ಅವಕಾಶ ಇದ್ದೇ ಇದೆ. ಹೀಗಾಗಿ ಹಿಂದಿನಂತೆ ಪೇಪರ್‌ ಬ್ಯಾಲೆಟ್‌ ವ್ಯವಸ್ಥೆಗೆ ಮೊರೆ ಹೋಗುವುದು ಸೂಕ್ತ’ ಎಂದಿದ್ದಾರೆ.ರಾಹುಲ್‌, ಯಾದವ್‌ ದನಿ:

ಮಸ್ಕ್‌ ಅಭಿಪ್ರಾಯ ಬೆಂಬಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ‘ಭಾರತದಲ್ಲಿನ ಇವಿಎಂಗಳು ಬ್ಲ್ಯಾಕ್‌ ಬಾಕ್ಸ್‌ ಇದ್ದಂತೆ. ಯಾರಿಗೂ ಅದನ್ನು ಪರಿಶೀಲಿಸಲು ಬಿಡುವುದಿಲ್ಲ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ’ ಎಂದಿದ್ದಾರೆ.

ಇನ್ನೊಂದೆಡೆ, ‘ವಿಶ್ವದೆಲ್ಲೆಡೆಯ ತಾಂತ್ರಿಕ ತಜ್ಞರು ಇವಿಎಂಗಳ ಅಪಾಯದ ಕುರತು ಬಹಿರಂಗವಾಗಿಯೇ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ನಮ್ಮ ದೇಶದಲ್ಲಿನ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ಹಳೆಯ ಪದ್ಧತಿಯ ಮರು ಜಾರಿಗೆ ಮತ್ತೆ ನಾವು ಒತ್ತಾಯಿಸುತ್ತೇವೆ’ ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.ರಾಜೀವ್‌ ತಿರುಗೇಟು:

ಈ ನಡುವೆ ಮಸ್ಕ್‌ ಹೇಳಿಕೆಗೆ ತಿರುಗೇಟು ನೀಡಿರುವ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌, ‘ಮಸ್ಕ್‌ ಹೇಳಿಕೆ ಯಾರೂ ಸುರಕ್ಷಿತ ಡಿಜಿಟಲ್‌ ಸಾಧನ ಮಾಡಲು ಸಾಧ್ಯವೇ ಇಲ್ಲ ಎನ್ನವಂತಿದೆ. ಇದು ತಪ್ಪು. ಸುರಕ್ಷಿತ ಇವಿಎಂ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಉಚಿತವಾಗಿ ಪಾಠ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.ಜೊತೆಗೆ, ‘ಮಸ್ಕ್‌ ಹೇಳಿಕೆ ಅಮೆರಿಕದ ಇವಿಎಂಗಳಿಗೆ ಅನ್ವಯವಾಗಬಹುದು. ಏಕೆಂದರೆ ಅವರ ಇವಿಎಂ ಮಷಿನ್‌ಗಳು ಇಂಟರ್ನೆಟ್‌ ಕನೆಕ್ಟ್‌ ಆಗಿರುವ ವ್ಯವಸ್ಥೆ ಹೊಂದಿವೆ. ಆದರೆ ಭಾರತದ ಇವಿಎಂ ವ್ಯವಸ್ಥೆ ಸಂಪೂರ್ಣ ವಿಭಿನ್ನ. ಇಲ್ಲಿ ಅಂತರ್ಜಾಲ ಸೇರಿದಂತೆ ಯಾವುದೇ ಬಾಹ್ಯ ವ್ಯವಸ್ಥೆ ಜೊತೆ ಇವಿಎಂ ಸಂಪರ್ಕ ಹೊಂದಿರುವುದಿಲ್ಲ. ಇದರಲ್ಲಿನ ಪ್ರೋಗ್ರಾಮ್‌ಗಳನ್ನು ಬದಲಾಯಿಸಲು ಕೂಡಾ ಸಾಧ್ಯವಿಲ್ಲ. ಭಾರತದಂತೆ ಬೇರೆಯವರು ಕೂಡಾ ಇವಿಎಂ ತಯಾರಿಸಬಹುದು ಎಂದಿದ್ದಾರೆ.

ಆದರೆ ರಾಜೀವ್‌ ಹೇಳಿಕೆಗೂ ಪ್ರತಿಕ್ರಿಯೆ ನೀಡಿರುವ ಮಸ್ಕ್‌ ‘ಯಾವುದನ್ನು ಬೇಕಾದರೂ ಹ್ಯಾಕ್‌ ಮಾಡಬಹುದು’ ಎಂದಿದ್ದಾರೆ.ಇದಕ್ಕೆ ಮತ್ತೆ ತಿರುಗೇಟು ನೀಡಿರುವ ರಾಜೀವ್‌, ‘ಯಾವುದು ಬೇಕಾದರೂ ಸಾಧ್ಯವಿದೆ, ಕನಿಷ್ಠ ಪುಸ್ತಕದಲ್ಲಿ ಸಾಧ್ಯವಿದೆ. ಕ್ವಾಂಟಮ್‌ ಕಂಪ್ಯೂಟ್‌ನ ಸಾಮಾನ್ಯ ಜ್ಞಾನ ಹೊಂದಿದ್ದರೆ, ಯಾವುದೇ ಕೋಡ್‌ ಅನ್ನು ಬೇಕಾದರೂ ಭೇದಿಸಬಹುದು, ವಿಮಾನಗಳ ಕಾಕ್‌ಪಿಟ್‌ ಕೂಡಾ ಹ್ಯಾಕ್‌ ಮಾಡಬಹುದು. ಆದರೆ ಅದು ಬೇರೆ ರೀತಿಯ ಚರ್ಚೆ. ಇವಿಎಂ ವಿಷಯದಲ್ಲಿ ಅದು ಸಾಧ್ಯವಿಲ್ಲ. ಇದು ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ’ ಎಂದು ಭಾರತದ ಇವಿಎಂಗಳನ್ನು ಸಮರ್ಥಿಸಿಕೊಂಡಿದ್ದಾರೆ.

-----ಮಸ್ಕ್‌ ಹೇಳಿಕೆ ಅಮೆರಿಕದ ಇವಿಎಂಗಳಿಗೆ ಅನ್ವಯಿಸಬಹುದು. ಅವರ ಮತಯಂತ್ರಗಳು ಇಂಟರ್ನೆಟ್‌ಗೆ ಕನೆಕ್ಟ್‌ ಆಗಿರುತ್ತವೆ. ಭಾರತದ ಇವಿಎಂ ವಿಭಿನ್ನ ಎಂದು ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. ಭಾರತದಲ್ಲಿನ ಇವಿಎಂಗಳು ಬ್ಲ್ಯಾಕ್‌ ಬಾಕ್ಸ್‌ ಇದ್ದಂತೆ. ಯಾರಿಗೂ ಅದನ್ನು ಪರಿಶೀಲಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ