400 ಸ್ಥಾನ ಗೆಲ್ಲಲು ಅನ್ಯಪಕ್ಷಗಳ ನಾಯಕರಿಗೆ ಬಿಜೆಪಿ ಗಾಳ!

KannadaprabhaNewsNetwork | Updated : Jan 11 2024, 09:53 AM IST

ಸಾರಾಂಶ

ಮುಂಬರುವ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳ ಪೈಕಿ 400 ಸ್ಥಾನಗಳನ್ನು ಗೆಲ್ಲುವ ಹಾಗೂ ಶೇ.50ರಷ್ಟು ಮತ ಪಡೆಯುವ ಬೃಹತ್ ಗುರಿ ಹೊಂದಿರುವ ಬಿಜೆಪಿ, ತನ್ನ ಗುರಿ ಸಾಧಿಸಲು ವಿಪಕ್ಷಗಳ ನಾಯಕರಿಗೆ ಗಾಳ ಹಾಕಲು ಮುಂದಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಮುಂಬರುವ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳ ಪೈಕಿ 400 ಸ್ಥಾನಗಳನ್ನು ಗೆಲ್ಲುವ ಹಾಗೂ ಶೇ.50ರಷ್ಟು ಮತ ಪಡೆಯುವ ಬೃಹತ್ ಗುರಿ ಹೊಂದಿರುವ ಬಿಜೆಪಿ, ತನ್ನ ಗುರಿ ಸಾಧಿಸಲು ವಿಪಕ್ಷಗಳ ನಾಯಕರಿಗೆ ಗಾಳ ಹಾಕಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮಂಗಳವಾರ ನಡೆದ ಮಹತ್ವದ ಕಾರ್ಯತಂತ್ರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪಕ್ಷದ ವಿವಿಧ ಪ್ರಧಾನ ಕಾರ್ಯದರ್ಶಿಗಳಿಗೆ ಚುನವಣಾ ಸಿದ್ಧತೆಯ ವಿವಿಧ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಈ ಪೈಕಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ‘ಸೇರ್ಪಡೆ ಸಮಿತಿ’ಯ ಉಸ್ತುವಾರಿ ನೀಡಲಾಗಿದೆ. 

ಅನ್ಯಪಕ್ಷಗಳ ನಾಯಕರನ್ನು ಬಿಜೆಪಿಗೆ ಕರೆತರುವುದು ಸೇರ್ಪಡೆ ಸಮಿತಿಯ ಕೆಲಸವಾಗಿದೆ ಎಂದು ಮೂಲಗಳು ಹೇಳಿವೆ.‘ಈ ಸಮಿತಿಯು ಇತರ ಪಕ್ಷಗಳ ಪ್ರಭಾವಿ ನಾಯಕರು ಮತ್ತು ಹಾಲಿ ಸಂಸದರನ್ನು ಬಿಜೆಪಿಗೆ ಕರೆತರುವ ಸಾಧ್ಯತೆಯನ್ನು ಅನ್ವೇಷಿಸಲಿದೆ. ಕ್ಷೇತ್ರದಲ್ಲಿ ವ್ಯಕ್ತಿಯ ಪ್ರಭಾವ ಮತ್ತು ಚುನಾವಣೆಯಲ್ಲಿ ಗೆಲ್ಲುವ ಅವರ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ. 

ವಿಶೇಷವಾಗಿ ಬಿಜೆಪಿ ದುರ್ಬಲ ಇರುವ ಕ್ಷೇತ್ರಗಳಲ್ಲಿ, ಗೆಲ್ಲುವ ಸಾಮರ್ಥ್ಯ ಇರುವ ಇಂಥ ಅನ್ಯ ಪಕ್ಷಗಳ ನಾಯಕರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಪಕ್ಷ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಕಳೆದ ಸಲಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧೆ: ಬಿಜೆಪಿ 400ರ ಗಡಿ ದಾಟಲು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ 160 ಸ್ಥಾನಗಳ (ಎನ್‌ಡಿಎ ಅಂಗಪಕ್ಷಗಳ ಸ್ಥಾನಗಳೂ ಸೇರಿ) ಮೇಲೆ ಪಕ್ಷವು ಗಮನ ಕೇಂದ್ರೀಕರಿಸಿದೆ. ಕಳೆದ ಸಲ 436 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿ 303ರಲ್ಲಿ ಗೆದ್ದಿತ್ತು. 136 ಸ್ಥಾನಗಳಲ್ಲಿ ಸೋತಿತ್ತು. ಆದರೆ ಈ ಸಲ 436ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ಬಿಜೆಪಿಗೆ ಇದೆ. 

ಈ ಮೂಲಕ ಏಕಾಂಗಿಯಾಗಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಇರಾದೆ ಹೊಂದಿದೆ. ಇದರರ್ಥ ಎನ್‌ಡಿಎ ಅಂಗಪಕ್ಷಗಳಿಗೆ ಕಡಿಮೆ ಸ್ಥಾನ ನೀಡುವ ಇಚ್ಛೆ ಇದೆ.1984ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಲೋಕಸಭೆಯಲ್ಲಿ ಏಕೈಕ ಪಕ್ಷವು 400 ಅಂಕಿಗಳನ್ನು ದಾಟಿತ್ತು. ಆ ಬಳಿಕ ಯಾವ ಪಕ್ಷವೂ ಏಕಾಂಗಿಯಾಗಿ 400 ಸ್ಥಾನ ದಾಟಿಲ್ಲ.

ಇತರ ಜವಾಬ್ದಾರಿಗಳು: ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರಿಗೆ 2024 ರ ಲೋಕಸಭೆ ಚುನಾವಣೆಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಚುನಾವಣಾ ಪ್ರಚಾರ, ಪ್ರಚಾರ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಸುನೀಲ್ ಬನ್ಸಲ್ ಮತ್ತು ಇತರ ಪ್ರಧಾನ ಕಾರ್ಯದರ್ಶಿಗಳು ನೋಡಿಕೊಳ್ಳುತ್ತಾರೆ, ದುಷ್ಯಂತ್ ಗೌತಮ್ ಅವರು ದೇಶಾದ್ಯಂತ ಬೌದ್ಧರ ಸಮಾವೇಶಗಳನ್ನು ಆಯೋಜಿಸಿ ಮೋದಿ ಸರ್ಕಾರ ನಡೆಸಿದ ಕಾರ್ಯಗಳ ಬಗ್ಗೆ ತಿಳಿಸುತ್ತಾರೆ.

Share this article