ಬಿಜೆಪಿಗೆ ಸಂವಿಧಾನ ಬದಲಿಸುವ ಧೈರ್ಯ ಇಲ್ಲ: ರಾಹುಲ್‌ ಟಾಂಗ್‌

KannadaprabhaNewsNetwork | Updated : Mar 18 2024, 12:54 PM IST

ಸಾರಾಂಶ

ದೇಶದ ಸಂವಿಧಾನವನ್ನು ಬದಲಿಸುವ ಧೈರ್ಯ ಬಿಜೆಪಿಗರಿಗಿಲ್ಲ ಎಂದು ಕಾಂಗ್ರಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಿಟಿಐ ಮುಂಬೈ

ದೇಶದ ಸಂವಿಧಾನವನ್ನು ಬದಲಿಸುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಆದರೂ ಅವರು ಬರೀ ಗದ್ದಲ ಮಾಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆ ಹೇಳಿಕೆ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಸತ್ಯ ಹಾಗೂ ಜನರ ಬೆಂಬಲ ತಮ್ಮ ಪರವಾಗಿ ಇದೆ ಎಂದೂ ಹೇಳಿದ್ದಾರೆ.

ಮಣಿಪುರದಿಂದ ಆರಂಭವಾಗಿದ್ದ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಸಮಾರೋಪದ ಅಂಗವಾಗಿ ಮುಂಬೈನ ಮಣಿ ಭವನ (ಮುಂಬೈನ ಮಹಾತ್ಮ ಗಾಂಧಿ ನಿವಾಸ)ದಿಂದ ಆಗಸ್ಟ್‌ ಕ್ರಾಂತಿ ಮೈದಾನ (1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾದ ಸ್ಥಳ)ದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ಯನ್ನು ರಾಹುಲ್‌ ಗಾಂಧಿ ಭಾನುವಾರ ನಡೆಸಿದರು. 

ಈ ವೇಳೆ ಸಂವಿಧಾನ ಬದಲಿಸುವ ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟರು.ಇದೇ ವೇಳೆ, ಸದ್ಯ ನಡೆಯುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಣ ಸಮರವಲ್ಲ. ಎರಡು ಅಭಿಪ್ರಾಯಗಳ ನಡುವಿನ ಯುದ್ಧ. 

ದೇಶವನ್ನು ಕೇಂದ್ರೀಕೃತವಾಗಿ ನಡೆಸಬೇಕು, ಒಬ್ಬನೇ ವ್ಯಕ್ತಿ ಎಲ್ಲ ಜ್ಞಾನವನ್ನೂ ಹೊಂದಬೇಕು ಎಂದು ಒಬ್ಬ ವ್ಯಕ್ತಿ ಭಾವಿಸಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ, ಅಧಿಕಾರ ವಿಕೇಂದ್ರೀಕರಣವಾಗಬೇಕು. 

ಜನರ ದನಿಯನ್ನೂ ಆಲಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ. ಒಬ್ಬ ವ್ಯಕ್ತಿ ಐಐಟಿ ಪದವಿ ಹೊಂದಿದಾಕ್ಷಣ, ಒಬ್ಬ ರೈತನಿಗಿಂತ ಹೆಚ್ಚಿನ ಜ್ಞಾನವಂತ ಎಂದು ಹೇಳಲಾಗದು ಎಂದರು.

Share this article