ನೆಟ್‌ಫ್ಲಿಕ್ಸ್ ಆಫರ್ ತಿರಸ್ಕರಿಸಿದ ಜೋಡಿ: ವರದಿ
ಹೈದರಾಬಾದ್: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಮದುವೆ ಸಮಾರಂಭವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವುದಕ್ಕೆ ನೆಟ್‌ಫ್ಲಿಕ್ಸ್ 60 ಕೋಟಿ ರು. ಆಫರ್ ನೀಡಿದೆ. ಆದರೆ ಈ ಜೋಡಿ ಗೌಪ್ಯತೆ ಕಾರಣಕ್ಕೆ ಅದನ್ನು ತಿರಸ್ಕರಿಸಿದೆ ಎಂದು ವರದಿಗಳು ಹೇಳಿವೆ.ತಾರಾ ಜೋಡಿಯು ತಮ್ಮ ಮದುವೆ ಕಾರ್ಯಕ್ರಮ ವೈಯಕ್ತಿಕ ಹಾಗೂ ಬೆಲೆ ಕಟ್ಟುವುದಕ್ಕೆ ಸಾಧ್ಯವಾಗದೇ ಇರುವಂಥದ್ದು. ಆ ನೆನಪುಗಳು ಹಣಕ್ಕಿಂತ ದೊಡ್ಡವು ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ನೆಟ್‌ಫ್ಲಿಕ್ಸ್ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದಲೂ ಹರಿದಾಡಿತ್ತು. ಆದರೆ ಈ ಬಗ್ಗೆ ಇಬ್ಬರೂ ಸ್ಪಷ್ಟಪಡಿಸಿಲ್ಲ.ಬಾಲಿವುಡ್ ಜೋಡಿ ತಮ್ಮ ಮದುವೆ ಕಾರ್ಯಕ್ರಮಗಳ ಪ್ರಸಾರ ಹಕ್ಕನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ನಡುವೆ ಈ ತಾರಾ ಜೋಡಿಯ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
==
ಎಪ್‌ಸ್ಟೀನ್‌ನದು ಆತ್ಮಹತ್ಯೆ ಅಲ್ಲ, ಕೊಲೆ: ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಶಂಕೆ
ಹೊಸತಾಗಿ ತನಿಖೆ ಮಾಡುವಂತೆ ಆಗ್ರಹ
ವಾಷಿಂಗ್ಟನ್: ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಸಾವಿನ ಕುರಿತು, ಆತನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೊಬ್ಬರು ಅನುಮಾನ ವ್ಯಕ್ತಪಡಿಸಿದ್ದು, ‘ಆತ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಕ್ಕಿಂತ, ಆತನನ್ನು ಉಸಿರುಗಟ್ಟಿಸಿ ಸಾಯಿಸಿದ ಶಂಕೆಯಿದೆ’ ಎಂದಿದ್ದಾರೆ. ಈ ಮೂಲಕ ಹೊಸತಾಗಿ ಮತ್ತೊಮ್ಮೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಂಡ ಆರೋಪದಲ್ಲಿ ಎಪ್‌ಸ್ಟೀನ್‌ನನ್ನು ಜೈಲಿಗಟ್ಟಲಾಗಿತ್ತು. 2019ರಲ್ಲಿ ಜೈಲಿನಲ್ಲಿಯೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ಡಾ. ಮೈಕೆಲ್ ಬಾಡೆನ್ ಆತನ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಇದೀಗ ಆತನ ಕುಟುಂಬವನ್ನು ಭೇಟಿ ಮಾಡಿ, ‘ನನ್ನ ಅಭಿಪ್ರಾಯದಂತೆ, ಅವನ ಸಾವು ನೇಣು ಬಿಗಿದುಕೊಂಡದ್ದಕ್ಕಿಂತ ಹೆಚ್ಚಾಗಿ ಉಸಿರುಗಟ್ಟಿಸುವಿಕೆಯ ಒತ್ತಡದಿಂದ ಸಂಭವಿಸಿರಬಹುದು. ಈಗ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಗಮನಿಸಿದರೆ, ಸಾವಿನ ಕಾರಣ ಮತ್ತು ವಿಧಾನದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ’ ಎಂದಿದ್ದಾರೆ.
==
ಪಂಜಾಬಿ ನಟಿ ಹಿಮಾಂಶಿ ಖುರಾನಾಗೆ ಕೊಲೆ, 10 ಕೋಟಿ ರು. ಸುಲಿಗೆ ಬೆದರಿಕೆಮೊಹಾಲಿ: ಪಂಜಾಬಿ ನಟಿ ಹಿಮಾಂಶಿ ಖುರಾನಾ ಅವರಿಗೆ ಕೊಲೆ ಬೆದರಿಕೆ ಮತ್ತು 10 ಕೋಟಿ ರು.ಗಳ ಸುಲಿಗೆ ಬೇಡಿಕೆಯ ಬೆದರಿಕೆ ಕರೆ ಬಂದಿದ್ದು, ಮೊಹಾಲಿ ಪೊಲೀಸರಿಗೆ ನಟಿ ದೂರು ದಾಖಲಿಸಿದ್ದಾರೆ.ಕರೆ ಮಾಡಿದ ಅಪರಿಚಿತ ವ್ಯಕ್ತಿಯು, ‘ಬೇಡಿಕೆ ಇಟ್ಟ ಮೊತ್ತವನ್ನು ಪಾವತಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾನೆ. ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಕರೆ ದಾಖಲೆಗಳನ್ನು ಪರಿಶೀಲಿಸಲು ಮತ್ತು ಅವರನ್ನು ಸಂಪರ್ಕಿಸಲು ಬಳಸಿದ ಸಂಖ್ಯೆಯ ಮೂಲವನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ನಟ ರಣವೀರ್ ಸಿಂಗ್‌ಗೆ ಶಂಕಿತ ಬಿಷ್ಣೋಯಿ ಗ್ಯಾಂಗ್‌ನಿಂದ ಕೋಟ್ಯಂತರ ರು. ಸುಲಿಗೆ ಬೆದರಿಕೆ ಬಂದಿತ್ತು.
==ಅಜಿತ್ ಪವಾರ್ ಸಾವಿನ ತನಿಖೆಗೆ ಶಾಗೆ ರೋಹಿತ್ ಪತ್ರ
ಪುಣೆ: ಕಳೆದು ತಿಂಗಳು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವು ಪ್ರಕರಣದ ನಿಷ್ಟಕ್ಷಪಾತ ತನಿಖೆ ಕೋರಿ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದು ವಿಧ್ವಂಸಕ ಕೃತ್ಯ ಎಂದು ಶಂಕಿಸಿ ಅವರು ಈ ಆಗ್ರಹ ಮಾಡಿದ್ದಾರೆ.‘ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮತ್ತು ನಾಗರಿಕ ವಿಮಾಯಾನ ನಿರ್ದೇಶನಾಲಯ ಅವರಿಗೆ ಇಮೇಲ್ ಕಳುಹಿಸಲಾಗಿದೆ. ಅಜಿತ್ ದಾದಾ ವಿಮಾನ ಅಪಫಾತದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಅಪಘಾತದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನಿಜಾಂಶವನ್ನು ಜನರ ಮುಂದೆ ಇಡುವುದು ಮುಖ್ಯ, ಯಾವುದೇ ಊಹಾಪೋಹ ಅಥವಾ ಅನುಮಾನಕ್ಕೆ ಅವಕಾಶವಿಲ್ಲ’ ಎಂದಿದ್ದಾರೆ.ಫೆ.10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಪವಾರ್ ಅವರು, ಅಜಿತ್ ವಿಮಾನ ದುರಂತ ವಿಧ್ವಂಸಕ ಕೃತ್ಯ ಎಂದು ಆರೋಪಿಸಿದ್ದರು.==
ಶಿವಾಜಿ ರೀತಿ ಟಿಪ್ಪು ಶೌರ್ಯದ ಸಂಕೇತ: ಮಹಾ ಕಾಂಗ್ರೆಸ್ ಅಧ್ಯಕ್ಷ ವಿವಾದನಾಗ್ಪುರ: ‘ಛತ್ರಪತಿ ಶಿವಾಜಿ ಮಹಾರಾಜರ ದಾರಿಯಲ್ಲೇ ಟಿಪ್ಪು ಸುಲ್ತಾನರೂ ನಡೆದಿದ್ದಾರೆ. ಟಿಪ್ಪುವನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಕಾಣಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಾಲ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಸಿಎಂ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.‘ಟಿಪ್ಪು ಸುಲ್ತಾನ್ ಒಬ್ಬ ಯೋಧ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವನ್ನು ತೋರಿಸಿದವನು. ಮಣ್ಣಿನ ಮಗ. ಅವನೆಂದೂ ವಿಷಕಾರಿ, ವಿನಾಶಕಾರಿ ವಿಚಾರಗಳನ್ನು ಸ್ವೀಕರಿಸಲಿಲ್ಲ. ಶೌರ್ಯದ ಸಂಕೇತವಾಗಿ, ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮಾನವಾಗಿ ನೋಡಬೇಕು’ ಎಂದು ಸಪ್ಕಾಲ್ ಹೇಳಿದ್ದಾರೆ.ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸಿ ಜನರನ್ನು ಮೊಘಲ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. ಮತ್ತೊಂದೆಡೆ, ಟಿಪ್ಪು ಸಾವಿರಾರು ಹಿಂದೂಗಳನ್ನು ಕೊಂದ. ನಾವು ಈ ಹೋಲಿಕೆಯನ್ನು ಸಹಿಸುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.