ಪ್ರಿಯಾಂಕಾ ನಾಮಪತ್ರ ಸಲ್ಲಿಕೆ ವೇಳೆ ಖರ್ಗೆ ಹೊರಗೆ ನಿಲ್ಲಿಸಿದ ಸುಳ್ಳು ಆರೋಪ ಮಾಡಿದ ಬಿಜೆಪಿ ಕ್ಷಮೆ ಕೋರಲಿ -ವೇಣುಗೋಪಾಲ್‌

KannadaprabhaNewsNetwork |  
Published : Oct 25, 2024, 12:58 AM ISTUpdated : Oct 25, 2024, 05:03 AM IST
ಪ್ರಿಯಾಂಕಾ | Kannada Prabha

ಸಾರಾಂಶ

ಕೇರಳದ ವಯನಾಡು ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿ ಗಾಂಧಿ ಕುಟುಂಬ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ವಯನಾಡು: ಕೇರಳದ ವಯನಾಡು ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಿ ಗಾಂಧಿ ಕುಟುಂಬ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಕ್ಕಾಲು ಭಾಗ ಮುಚ್ಚಿದ ಬಾಗಿಲಿನ ಸಂಧಿಯಿಂದ ಖರ್ಗೆ ಒಳಗೆ ನೋಡುತ್ತಿರುವ ವಿಡಿಯೋವೊಂದನ್ನು ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ‘ಎಕ್ಸ್‌’ ಮಾಡಿ, ‘ಖರ್ಗೆ ಗಾಂಧಿ ಕುಟುಂಬದವರಲ್ಲ. ಹೀಗಾಗಿ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.

‘ಖರ್ಗೆ ಸಾಹೇಬರೇ, ನೀವು ಎಲ್ಲಿದ್ದಿರಿ? ಪ್ರಿಯಾಂಕಾಜೀ ಮೊದಲ ಬಾರಿ ನಾಮಪತ್ರ ಸಲ್ಲಿಸುವ ವೇಳೆ ನಿಮ್ಮನ್ನು ಹೊರಗೆ ನಿಲ್ಲಿಸಲಾಗಿತ್ತು. ಏಕೆಂದರೆ ನೀವು ಅವರ ಕುಟುಂಬದವರಲ್ಲ. ಗಾಂಧಿ ಕುಟುಂಬದ ದುರಹಂಕಾರವನ್ನು ಪೋಷಿಸಲು ನೀವು ನಿಮ್ಮ ಆತ್ಮಗೌರವ ಹಾಗೂ ಘನತೆಯನ್ನು ತ್ಯಾಗ ಮಾಡಿದಿರಿ. ಒಬ್ಬ ಹಿರಿಯ ದಲಿತ ನಾಯಕ ಹಾಗೂ ಪಕ್ಷದ ಅಧ್ಯಕ್ಷನಿಗೇ ಹೀಗೆ ಮಾಡುವ ಗಾಂಧಿ ಕುಟುಂಬ ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಊಹಿಸಿ’ ಎಂದು ಕಿಡಿಕಾರಿದ್ದಾರೆ.

ಇದು ಸುಳ್ಳು ಆರೋಪ: ಕಾಂಗ್ರೆಸ್‌

ನವದೆಹಲಿ: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಖರ್ಗೆ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು ಎಂಬ ಆರೋಪವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಳ್ಳಿಹಾಕಿದ್ದು, ಸುಳ್ಳು ಆರೋಪ ಮಾಡಿದ ಬಿಜೆಪಿ ಕ್ಷಮೆ ಕೋರಲಿ ಎಂದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಮಯ ಮೀರುತ್ತಿದ್ದ ಕಾರಣ ಮೊದಲು ಪ್ರಿಯಾಂಕಾ ಒಬ್ಬರೇ ಮೊದಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದರು ಹಾಗೂ ಮೊದಲ ಸೆಟ್‌ ನಾಮಪತ್ರ ಸಲ್ಲಿಸಿದರು. ಖರ್ಗೆ, ಸೋನಿಯಾ, ರಾಹುಲ್‌ ಬಂದ ನಂತರ 2ನೇ ಸೆಟ್‌ ಸಲ್ಲಿಸಿ ಎಂದು ಚುನಾವಣಾಧಿಕಾರಿಯೇ ಹೇಳಿದ್ದರು. ಈ ವೇಳೆ ಮೊದಲ ಸೆಟ್‌ ಪರಿಶೀಲನೆಗಾಗಿ ಅಧಿಕಾರಿ ತಮ್ಮ ಕಚೇರಿಯ ಬಾಗಿಲು ಬಂದ್ ಮಾಡಿದ್ದರು. ಆಗ ಖರ್ಗೆ, ಸೋನಿಯಾ, ರಾಹುಲ್ ಆಗಮಿಸಿದರು ಹಾಗೂ ಬಾಗಿಲು ತೆರೆಯುವವರೆಗೆ ಹೊರಗೆ ಕಾಯುತ್ತ ನಿಂತರು ಹಾಗೂ ತೆರೆದ ನಂತರ ಒಳಪ್ರವೇಶಿಸಿದರು. ಈ ವೇಳೆ ಖರ್ಗೆ ಅವರು ಹೊರಗಿದ್ದ ದೃಶ್ಯವನ್ನು ಮಾತ್ರ ಚಿತ್ರಿಸಿ ಬಹಿರಂಗಪಡಿಸಲಾಗಿದೆ. ನಂತರ ಖರ್ಗೆ ಅವರು ಪ್ರಿಯಾಂಕಾ ಜತೆ 2ನೇ ಸೆಟ್‌ ನಾಮಪತ್ರ ಸಲ್ಲಿಸಿದ ವೇಳೆ ಹಾಜರಿದ್ದರು. ಅದರ ಫೋಟೋ ಲಭ್ಯ ಇದೆ. ಈ ವಿಷಯವನ್ನು ಏಕೆ ಬಜೆಪಿ ಮುಚ್ಚಿಟ್ಟಿತ್ತು?’ ಎಂದು ಪ್ರಶ್ನಿಸಿದ್ದಾರೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌