ಮಹಾ ಪಾಲಿಕೆ ಚುನಾವಣೆಯಲ್ಲೂ ಮತಚೋರಿ : ರಾಹುಲ್‌

KannadaprabhaNewsNetwork |  
Published : Jan 17, 2026, 03:00 AM ISTUpdated : Jan 17, 2026, 05:12 AM IST
Election

ಸಾರಾಂಶ

ಗುರುವಾರ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಿದ ಅಳಿಸಲಾಗದ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಆರೋಪಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ದನಿಗೂಡಿಸಿದ್ದು, ‘ಮತಗಳ್ಳತನವು ದೇಶವಿರೋಧಿ ಕೃತ್ಯ’ ಎಂದು ವಿರುದ್ಧ ಕಿಡಿ ಕಾರಿದ್ದಾರೆ.

ನವದೆಹಲಿ: ಗುರುವಾರ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಿದ ಅಳಿಸಲಾಗದ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಆರೋಪಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ದನಿಗೂಡಿಸಿದ್ದು, ‘ಮತಗಳ್ಳತನವು ದೇಶವಿರೋಧಿ ಕೃತ್ಯ’ ಎಂದು ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ಕಳೆದ ಹಲವು ತಿಂಗಳುಗಳಿಂದ ತಾವು ಆರೋಪಿಸುತ್ತಾ ಬಂದಿರುವ ಮತಚೋರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ರಾಹುಲ್, ‘ಚುನಾವಣಾ ಆಯೋಗವು ನಾಗರಿಕರನ್ನು ದಾರಿತಪ್ಪಿಸುತ್ತಿರುವುದರಿಂದ ನಮ್ಮ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕುಸಿದಿದೆ. ಮತಚೋರಿ ರಾಷ್ಟ್ರವಿರೋಧಿ ಕೃತ್ಯ’ ಎಂದು ಬರೆದುಕೊಂಡಿದ್ದಾರೆ.

ರಾಹುಲ್‌ ‘ಪರಿವಾರ ಕಳ್ಳ’: ಬಿಜೆಪಿ

ರಾಹುಲ್ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನವಾಲಾ ತಿರುಗೇಟು ನೀಡಿದ್ದು, ‘ಕ್ಷಮೆ ಬೇಡುವ ಬ್ರಿಗೇಡ್‌ ಮರಳಿ ಬಂದಿದೆ! ಮತ ಎಣಿಕೆಗೂ ಮೊದಲೇ ರಾಹುಲ್ ಸೋಲು ಒಪ್ಪಿಕೊಳ್ಳುತ್ತಿದ್ದಾರೆ. ನಿಂದಿಸುವ, ವಿರೂಪಗೊಳಿಸುವ ಮತ್ತು ತಪ್ಪು ಮಾಹಿತಿ ನೀಡುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದ ರಾಹುಲ್ ತಮ್ಮ ಕೆಲಸಕ್ಕೆ ಮರಳಿದ್ದಾರೆ. ‘ಪರಿವಾರ ಕಳ್ಳ’ ಈಗ ಠಾಕ್ರೆಗಳ ಹೇಳಿಕೆಯನ್ನು ಪುನರುಚ್ಚರಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಪಾಲಿಕೆಯಲ್ಲಿ ಗೆಲುವು

ಜಲ್ನಾ: ಶುಕ್ರವಾರ ಹೊರ ಬಿದ್ದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪತ್ರಕರ್ತೆ, ಲೇಖಕಿ ಗೌರಿ ಲಂಕೇಶ್‌ ಹತ್ಯೆ ಆರೋಪಿ ಶ್ರೀಕಾಂತ್‌ ಪಂಗಾರ್ಕರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಲ್ನಾ ಪುರಸಭೆ ವಾರ್ಡ್‌ ನಂ.13ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್ 2661 ಮತಗಳನ್ನು ಪತ್ದು, ಸಮೀಪದ ಪ್ರತಿ ಸ್ಪರ್ಧಿಯಾಗಿದ್ದ ಬಿಜೆಪಿಯ ರಾವ್ ಸಾಹೇಬ್ ಧೋಬ್ಲೆ (2447) ಅವರನ್ನು ಸೋಲಿಸಿದ್ದಾರೆ. ಶಿವಸೇನೆಯನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಶ್ರೀಕಾಂತ್‌ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೂ ಪಂಗಾರ್ಕರ್‌ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಶ್ರೀಕಾಂತ್‌ ಆರೋಪಿಯಾಗಿದ್ದು, 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಕುಟುಂಬ ರಾಜಕೀಯಕ್ಕೆ ಶಾಕ್‌ 

ಮುಂಬೈ: 20 ವರ್ಷದ ವೈರತ್ವ ಮರೆತು ಕೈಜೋಡಿಸಿದ್ದ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆಗೆ ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ರಾಜ್ಯದ ಮತದಾರರು ಕುಟುಂಬ ರಾಜಕೀಯಕ್ಕೆ ಶಾಕ್‌ ನೀಡಿದ್ದಾರೆ.

ಮುಂಬೈ ಪಾಲಿಕೆಯಲ್ಲಿ 3 ದಶಕದ ಬಳಿಕ ಶಿವಸೇನೆಯ ಅಧಿಪತ್ಯ ತಪ್ಪಿದ್ದು ಒಂದು ಕಡೆಯಾದರೆ ರಾಜ್ಯದ್ಯಂತ ನಡೆದ ಇತರೆ 28 ಪಾಲಿಕೆ ಚುನಾವಣೆಯಲ್ಲೂ ಉದ್ಧವ್‌ರ ಶಿವಸೇನೆ ಮತ್ತು ರಾಜ್‌ಠಾಕ್ರೆಯ ಎಂಎನ್‌ಎಸ್‌ಗೆ ಭಾರೀ ಹಿನ್ನಡೆಯಾಗಿದೆ. ಕಾರಣದ 29ರ ಪೈಕಿ 25ರಲ್ಲಿ ಬಿಜೆಪಿ ಅಧಿಕಾರಕ್ಕೆ ಹಿಡಿಯುವ ಹಂತದಲ್ಲಿದೆ. ಬೃಹನ್ಮುಂಬೈ ಪಾಲಿಕೆಯಲ್ಲಿ ಉದ್ಧವ್‌ರ ಶಿವಸೇನೆಗೆ 55 ಮತ್ತು ಎಂಎನ್‌ಎಸ್‌ಗೆ ಕೇವಲ 5 ಸೀಟುಗಳು ದಕ್ಕಿವೆ.ಒಂದೊಮ್ಮೆ ಈ ಚುನಾವಣೆಯಲ್ಲಿ ಠಾಕ್ರೆ ಸಹೋದರರ ಮೈತ್ರಿ ಯಶಸ್ವಿಯಾಗಿದ್ದರೆ, ಇದರಿಂದ ಬಿಜೆಪಿಗೆ ಆತಂಕವೆದುರಾಗುತ್ತಿತ್ತು. ಆದರೆ ಅದೀಗ ಕಳೆದಿದೆ.

ಫಲಕೊಡದ ಅಜಿತ್‌, ಶರದ್‌ ಮೈತ್ರಿ ತಂತ್ರ

ಪುಣೆ: ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ ಕ್ಷೇತ್ರಗಳಲ್ಲಿ ಅಜಿತ್‌ ಪವಾರ್‌ ಮತ್ತು ಶರದ್‌ ಪವಾರ್ ಮೈತ್ರಿ ವಿಫಲವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದೆ. ಈ ಮೂಲಕ ಅಧಿಕಾರಕ್ಕಾಗಿ ಒಂದಾಗಿದ್ದ ಶತ್ರುಗಳ ಮೈತ್ರಿಯನ್ನು ಮತದಾರರು ತಿರಸ್ಕರಿಸಿದ್ದಾರೆ. ಈ ಮೊದಲು ಒಂದೇ ಪಕ್ಷವಾಗಿದ್ದ ಎನ್‌ಸಿಪಿ 2023ರ ವಿಧಾನಸಭಾ ಚುನಾವಣೆಯಲ್ಲಿ ಇಬ್ಭಾಗವಾಯಿತು. ಚಿಕ್ಕಪ್ಪ ಶರದ್‌ ಪವಾರ್‌ ನೇತೃತ್ವದ ಬಣ ವಿರೋಧ ಪಕ್ಷದಲ್ಲಿ ಉಳಿದರೆ, ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರದ ಭಾಗವಾಯಿತು. ಇತ್ತೀಚೆಗೆ 2 ಕ್ಷೇತ್ರಗಳಲ್ಲಿ ಎರಡೂ ಬಣಗಳು ಮೈತ್ರಿ ಮಾಡಿಕೊಂಡಿದ್ದವು.

ರಸ್‌ಮಲೈ ಅಣ್ಣಾಮಲೈ ಪ್ರಚಾರ ಮಾಡಿದ ಕಡೆ ಬಿಜೆಪಿಗರಿಗೆ ಗೆಲುವು

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು ರಸ್‌ಮಲೈ ಎಂದು ಅಣಕಿಸಿದ್ದ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ರಾಕ್ರೆಗೆ ಅದೇ ಹೇಳಿಕೆ ತಿರುಗುಬಾಣವಾಗಿದೆ.ಇತ್ತೀಚೆಗೆ ಅಣ್ಣಾಮಲೈ ಪ್ರಚಾರ ಮಾಡಿದ್ದ ಮುಂಬೈನ ಮಲಾಡ್‌ ಪಶ್ಚಿಮ ಕ್ಷೇತ್ರದ ವಾರ್ಡ್‌ ನಂ. 35 ಮತ್ತು 47 ಎರಡೂ ಕಡೆ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ನಾಯಕರು ರಸ್‌ಮಲೈ ಫೋಟೋ ಹಂಚಿಕೊಂಡು ರಾಜ್‌ಗೆ ಟಾಂಗ್ ನೀಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಕೂಡಾ ನಾನು ಇಂದು ರಸ್‌ಮಲೈ ಆರ್ಡರ್‌ ಮಾಡಿದ್ದೇನೆ ಎಂದು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ ಬಗ್ಗೆ ಮಾತನಾಡಲು ಅಣ್ಣಾಮಲೈ ಯಾರು? ಆತ ರಸ್‌ಮಲೈ ಎಂದೆಲ್ಲಾ ರಾಜ್‌ ವ್ಯಂಗ್ಯವಾಡಿದ್ದರು.

ಮಾಜಿ ಗ್ಯಾಂಗ್‌ಸ್ಟರ್‌ ಅರುಣ್‌ ಗಾವ್ಲಿ ಇಬ್ಬರೂ ಹೆಣ್ಣುಮಕ್ಕಳಿಗೆ ಸೋಲು

ಮುಂಬೈ: ಇಲ್ಲಿನ ಭೂಗತ ಲೋಕದ ಮಾಜಿ ಗ್ಯಾಂಗ್‌ಸ್ಟರ್‌ ಅರುಣ್‌ ಗಾವ್ಲಿಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಡಬ್ಬಲ್ ಶಾಕ್ ನೀಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆತನ ಇಬ್ಬರೂ ಹೆಣ್ಣುಮಕ್ಕಳು ಸೋಲುಂಡಿದ್ದಾರೆ. ಗಾವ್ಲಿಯ ಅವಳಿ ಪುತ್ರಿಯರಾದ ಗೀತಾ ಮತ್ತು ಯೋಗಿತಾ ಬೈಕುಲ್ಲಾದ 2 ವಾರ್ಡ್‌ಗಳಿಂದ ಸ್ಪರ್ಧೆ ಮಾಡಿದ್ದರು. ಇಬ್ಬರನ್ನೂ ಸಮಾಜವಾದಿ ಮತ್ತು ಬಿಜೆಪಿ ಅಭ್ಯರ್ಥಿಗಳು ಮಣಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಿಲ್ಲಿ ಗಣರಾಜ್ಯೋತ್ಸವ ಪರೇಡಲ್ಲಿ ಈ ಬಾರಿ ರಾಜ್ಯದ ಸ್ತಬ್ಧಚಿತ್ರ ಇಲ್ಲ
ಅಮೆರಿಕ ಕಟ್ಟಡ ಕಟ್ಟುವ ದುಡ್ಡಲ್ಲಿ ಭಾರತ ಚಂದ್ರನ ಅಂಗಳಕ್ಕೆ: ಅಮೆರಿಕನ್‌