ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? : ಹೊಸ ಪಕ್ಷ ಸ್ಥಾಪನೆಯ ವದಂತಿ ಕುತೂಹಲ

KannadaprabhaNewsNetwork |  
Published : Jun 02, 2026, 03:15 AM ISTUpdated : Jun 02, 2026, 07:04 AM IST
Annamalai

ಸಾರಾಂಶ

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಯ ನಡುವೆಯೇ, ಸೋಮವಾರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಜತೆ ಸಭೆ ನಡೆಸಿ, ಆ ಬಳಿಕ ರಾಜೀನಾಮೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಯ ನಡುವೆಯೇ, ಸೋಮವಾರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಜತೆ ಸಭೆ ನಡೆಸಿ, ಆ ಬಳಿಕ ರಾಜೀನಾಮೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳುವ ಮುನ್ನ ಚೆನ್ನೈ ಏರ್ಪೋರ್ಟ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇನ್ನು 2 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದಿದ್ದಾರೆ. ದೆಹಲಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೌರವಯುತ ನಿರ್ಗಮನ ಅಪೇಕ್ಷೆ:

ಅಣ್ಣಾಮಲೈ ಬಿಜೆಪಿಯಿಂದ ಗೌರವಯುತವಾಗಿ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವಂತೆ ನಿರ್ಗಮಿಸಲು ಬಯಸುತ್ತಿದ್ದಾರೆ. ಬಿಜೆಪಿ ನಾಯಕರೊಂದಿಗೆ ಮುಕ್ತ ಚರ್ಚೆ ಅಪೇಕ್ಷಿಸುತ್ತಿರುವ ಅವರು, ಪಕ್ಷವನ್ನು ವಿರೋಧಿಸುವ ಯಾವುದೇ ಯೋಚನೆ ಹೊಂದಿಲ್ಲ ಎನ್ನಲಾಗಿದೆ.

ವಿಜಯ್‌ಗೆ ಪ್ರತಿಸ್ಪರ್ಧಿಯಾಗಲು ತಂತ್ರ:

ತಮಿಳುನಾಡಿನಲ್ಲಿ ಸಿಎಂ ವಿಜಯ್‌ಗೆ ಶಕ್ತಿಶಾಲಿ ರಾಜಕೀಯ ಎದುರಾಳಿ ಇಲ್ಲ. ಆ ಜಾಗವನ್ನು ತುಂಬಲು ಅಣ್ಣಾಮಲೈ ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮೊದಲು ಒಂದು ರಾಜಕೀಯೇತರ ಚಳವಳಿಯನ್ನು ಆರಂಭಿಸಲಿದ್ದಾರೆ. ‘ರಾಷ್ಟ್ರೀಯ-ತಮಿಳು ತತ್ವಜ್ಞಾನ’ ಅದರ ಮುಖ್ಯ ಸಿದ್ಧಾಂತವಾಗಿರಲಿದೆ ಎನ್ನಲಾಗಿದೆ.

ಬಿಡಲು ಕಾರಣ ಏನು?

ಅಣ್ಣಾಡಿಎಂಕೆ ಜತೆ ಮೈತ್ರಿಯನ್ನು ಅವರು ವಿರೋಧಿಸಿದ್ದರು. ಅಣ್ಣಾಮಲೈ ವಿದೇಶದಲ್ಲಿದ್ದಾಗಲೇ ಕೊಯಮತ್ತೂರಿನಲ್ಲಿ ಬಿಜೆಪಿ ಕೇಂದ್ರ ಸಮಿತಿ ಸಭೆ ನಡೆಸಲಾಯಿತು. ಅಲ್ಲದೆ, ಈ ಹಿಂದೆ 2 ಕೇಂದ್ರ ಸಮಿತಿ ಸಭೆಗಳಿಗೆ ಅವರು ಹಾಜರಾಗಿರಲಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಿಬಿಎಸ್‌ಇ ತ್ರಿಭಾಷಾ ಸೂತ್ರವನ್ನು ಅವರು ವಿರೋಧಿಸಿದ್ದರು. ಆಗಿಂದಲೇ ಅವರು ಪಕ್ಷ ತೊರೆಯುವ ಗುಸುಗುಸು ಆರಂಭವಾಗಿತ್ತು.

ತಲೆಯೆತ್ತಿದ ಅಣ್ಣಾಮಲೈ ಪೋಸ್ಟರ್‌:

ಈ ನಡುವೆ, ಕೊಯಮತ್ತೂರಿನಲ್ಲಿ ಅಣ್ಣಾಮಲೈ ಫೋಟೊ ಇರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಅವುಗಳ ಮೇಲೆ ‘ಭಯವಿಲ್ಲದ ಮನಸ್ಸುಗಳಿಗೆ ಮಿತಿಯಿಲ್ಲ’ ಎಂಬ ಬರಹವನ್ನು ಬರೆಯಲಾಗಿದೆ. ಇದರಿಂದ ಅಣ್ಣಾಮಲೈ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತಾರಾ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಇತ್ತ ಅವರ ಅಭಿಮಾನಿ ಸಂಘಟನೆ ‘ಅಣ್ಣಾಮಲೈ ಅನ್ಬು ಕೂಟ್ಟಂ’ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಹೊಸ ಹೆಜ್ಜೆ ಏಕೆ?

ತಮಿಳ್ನಾಡಲ್ಲಿ ಇದೀಗ ವಿಜಯ್‌ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ

ಈ ಸ್ಥಾನ ಯಶಸ್ವಿಯಾಗಿ ತುಂಬುವ ಇರಾದೆ ಅಣ್ಣಾಮಲೈಗೆ

ಈ ಕಾರಣಕ್ಕೆ ಬಿಜೆಪಿಗೆ ಗೌರವಯುತ ವಿದಾಯದ ನಿರೀಕ್ಷೆ

ಬಳಿಕ ರಾಜಕೀಯೇತರ ಸಂಘಟನೆ ಸ್ಥಾಪಿಸಿ ರಾಜ್ಯಪ್ರವಾಸ

ಪ್ರಯತ್ನ ಫಲ ಕೊಟ್ಟರೆ ಮುಂದೆ ರಾಜಕೀಯ ಪಕ್ಷ ಸ್ಥಾಪನೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಳ್ಳಾರಿ-ಗುಂತಕಲ್‌ ರೈಲು ಮಧ್ಯೆ 3, 4ನೇ ಮಾರ್ಗಕ್ಕೆ ಕೇಂದ್ರ ಒಪ್ಪಿಗೆ
ಉಪವಾಸ ಕೈಬಿಡುವಂತೆ ವಾಂಗ್ಚುಕ್‌ ಮನವೊಲಿಸಲು ಕೇಂದ್ರ ಸರ್ಕಾರಕ್ಕೆ ವಕೀಲ-ಕಾಂಗ್ರೆಸ್‌ ಸಂಸದ ನೆರವು!