ಆಂಧ್ರದಲ್ಲಿ ತೆಲುಗುದೇಶಂ, ಬಿಜೆಪಿ, ಜನಸೇನಾ ಮೈತ್ರಿ

KannadaprabhaNewsNetwork |  
Published : Mar 10, 2024, 01:45 AM ISTUpdated : Mar 10, 2024, 10:03 AM IST
ಪವನ್‌ ಕಲ್ಯಾಣ್‌ | Kannada Prabha

ಸಾರಾಂಶ

ಆಂಧ್ರಪ್ರದೇಶದ ಪ್ರಭಾವಿ ಪಕ್ಷವಾಗಿರುವ ತೆಲುಗುದೇಶಂ 6 ವರ್ಷಗಳ ಬಳಿಕ ಎನ್‌ಡಿಎ ಕೂಟಕ್ಕೆ ಮರಳಿದ್ದು, ಮುಂಬರುವ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಬಿಜೆಪಿ, ಜನಸೇನಾ ಜತೆಗೂಡಿ ಎದುರಿಸಲು ನಿರ್ಧರಿಸಿದೆ.

ನವದೆಹಲಿ: ಆಂಧ್ರಪ್ರದೇಶದ ಪ್ರಭಾವಿ ಪಕ್ಷವಾಗಿರುವ ತೆಲುಗುದೇಶಂ 6 ವರ್ಷಗಳ ಬಳಿಕ ಎನ್‌ಡಿಎ ಕೂಟಕ್ಕೆ ಮರಳಿದ್ದು, ಮುಂಬರುವ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಬಿಜೆಪಿ, ಜನಸೇನಾ ಜತೆಗೂಡಿ ಎದುರಿಸಲು ನಿರ್ಧರಿಸಿದೆ.

ಈ ಮೈತ್ರಿಯಿಂದ ಆಂಧ್ರದಲ್ಲಿ ಎನ್‌ಡಿಎ ಕ್ಲೀನ್‌ಸ್ವೀಪ್‌ ಮಾಡಲಿದೆ ಎಂದು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅಲ್ಲದೆ, ಮೈತ್ರಿ ಘೋಷಣೆ ಮಾಡಿ ಮೂರೂ ಪಕ್ಷಗಳು ಜಂಟಿ ಹೇಳಿಕೆ ನೀಡಿವೆ.

ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಮೂರೂ ಪಕ್ಷಗಳ ನಡುವೆ ದೆಹಲಿಯಲ್ಲಿ ನಡೆದ ಮೈತ್ರಿ ಮಾತುಕತೆ ಯಶಸ್ವಿಯಾಗಿದೆ. ಅದರ ಪ್ರಕಾರ, ಆಂಧ್ರದ 25 ಲೋಕಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ತೆಲುಗುದೇಶಂ, 6ರಲ್ಲಿ ಬಿಜೆಪಿ ಹಾಗೂ ಉಳಿದ 2 ಕ್ಷೇತ್ರಗಳಲ್ಲಿ ಚಿತ್ರನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಸ್ಪರ್ಧೆ ಮಾಡಲಿವೆ.

ಲೋಕಸಭೆ ಚುನಾವಣೆ ಜತೆಗೇ ಆಂಧ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲೂ ಈ ಮೈತ್ರಿ ಮುಂದುವರಿಯಲಿದೆ. ಆಂಧ್ರದ 175 ವಿಧಾನಸಭಾ ಕ್ಷೇತ್ರಗಳ ಪೈಕಿ 145ರಲ್ಲಿ ಟಿಡಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಉಳಿಕೆ 30 ಸೀಟುಗಳನ್ನು ಬಿಜೆಪಿ ಹಾಗೂ ಜನಸೇನಾಗೆ ಬಿಟ್ಟುಕೊಡಲಿದೆ.

ಈ ಮೈತ್ರಿಯೊಂದಿಗೆ ಆಂಧ್ರಪ್ರದೇಶದಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಏಕಾಂಗಿಯಾಗಿ ಎನ್‌ಡಿಎ ವಿರುದ್ಧ ಸೆಣಸಾಡಬೇಕಾಗಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ 2018ಲ್ಲಿ ಎನ್‌ಡಿಎ ಕೂಟದಿಂದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಹೊರನಡೆದಿದ್ದರು. ಮರುವರ್ಷವೇ ನಡೆದ ಆಂಧ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಧೂಳೀಪಟವಾಗಿತ್ತು.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌