ಹೆಚ್ಚುವರಿ ಗುಪ್ತಚರರ ಕೋರಿದ ಅಮೆರಿಕ ಸೇನೆ

ವಾಷಿಂಗ್ಟನ್‌: ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧ 4-5 ವಾರಗಳಲ್ಲಿ ಮುಗಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು. ಆದರೆ ಇದು ಕನಿಷ್ಠ 100 ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ ಅಮೆರಿಕ ಸೆಂಟ್ರಲ್‌ ಕಮಾಂಡ್‌ ರಕ್ಷಣಾ ಸಚಿವಾಲಯಕ್ಕೆ ಹೆಚ್ಚುವರಿ ಸೇನಾ ಗುಪ್ತಚರ ಅಧಿಕಾರಿಗಳನ್ನು ಒದಗಿಸುವಂತೆ ಕೋರಿದೆ ಎನ್ನಲಾಗಿದೆ.

ಈ ಬಗ್ಗೆ ವರದಿ ಮಾಡಿರುವ ಪೊಲಿಟಿಕೊ ಸುದ್ದಿಸಂಸ್ಥೆ, ‘ಸಮರ ಕನಿಷ್ಠ 100 ದಿನ ಅಂದರೆ ಸೆಪ್ಟೆಂಬರ್‌ವರೆಗೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಅಮೆರಿಕ ಸೆಂಟ್ರಲ್‌ ಕಮಾಂಡ್‌ ತನ್ನ ಟಂಪಾ, ಫ್ಲೋರಿಡಾ ಮುಖ್ಯಕಚೇರಿಗಳಿಗೆ ಹೆಚ್ಚುವರಿ ಸೇನಾ ಗುಪ್ತಚರ ಅಧಿಕಾರಿಗಳನ್ನು ನೇಮಿಸುವಂತೆ ರಕ್ಷಣಾ ಸಚಿವಾಲಯದ ಮುಖ್ಯಕಚೇರಿ ಪೆಂಟಗನ್‌ಗೆ ಮನವಿ ಮಾಡಿದೆ’ ಎಂದು ತಿಳಿಸಿದೆ. ಇದರಿಂದಾಗಿ, ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌, ಇಸ್ರೇಲ್‌-ಹಮಾಸ್‌ ಯುದ್ಧಗಳಂತೆ ಈ ಯುದ್ಧವೂ ದೀರ್ಘಾವಧಿಗೆ ವಿಸ್ತರಿಸಬಹುದೇ ಎಂಬ ಆತಂಕ ವ್ಯಕ್ತವಾಗಿದೆ.

==


ಪ್ರಾಣಭೀತಿ: ಆಸ್ಪತ್ರೇಲಿ ಸರ್ವೋಚ್ಚ ನಾಯಕನ ಆಯ್ಕೆ ಸಮಿತಿಯ ಸಭೆ?

ಟೆಹ್ರಾನ್‌: ಇರಾನ್‌ನ ಸರ್ವಾಧಿಕಾರಿಯಾಗಿ ಯಾರೇ ನೇಮಕವಾದರೂ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಪ್ರಾಣಭಯದಲ್ಲಿರುವ ಇರಾನ್‌ನ ಸರ್ವೋಚ್ಚ ನಾಯಕನ ಆಯ್ಕೆ ಸಮಿತಿಯ ಸದಸ್ಯರು ಆಸ್ಪತ್ರೆಯೊಂದರಲ್ಲಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಕಚೇರಿ ಮೇಲೆ ಬಾಂಬ್‌ ಹಾಕಿ ಖಮೇನಿಯನ್ನು ಇಸ್ರೇಲ್‌ ಹತ್ಯೆಗೈದಿರುವುದರಿಂದ ಈ ಮೂವರು ನಾಯಕರಿಗೆ ಒಂದೆಡೆ ಸೇರಿ ಸಭೆ ನಡೆಸಲು ಸುರಕ್ಷಿತ ಸ್ಥಳವೇ ಇಲ್ಲದಂತಾಗಿದೆ. ಹೀಗಾಗಿ ಉತ್ತರ ಟೆಹ್ರಾನ್‌ನಲ್ಲಿನ ಆಸ್ಪತ್ರೆಯೊಂದರ ನೆಲಮಾಳಿಗೆಯಲ್ಲಿ ಸಭೆ ನಡೆಸಿದ್ದಾರೆ. ಇದು ಅಮೆರಿಕದ ರಕ್ಷಣೆಯಲ್ಲಿರುವ ಸ್ವಿಸ್ ರಾಯಭಾರ ಕಚೇರಿ ಮತ್ತು ದಕ್ಷಿಣ ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ಇತರ ರಾಯಭಾರ ಕಚೇರಿಗಳ ಬಳಿಯಿದೆ. ಶತ್ರು ದಾಳಿಯಿಂದ ತಪ್ಪಿಸಿಕೊಳ್ಳಲು ಈ ಸ್ಥಳವನ್ನು ಆಯ್ದುಕೊಂಡಿದ್ದಾರೆ ಎಂದು ಇರಾನ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.

==

4 ದಿನದ ಯುದ್ಧದಲ್ಲಿ ಅಮೆರಿಕದ ₹18000 ಕೋಟಿ ಶಸ್ತ್ರಾಸ್ತ್ರ ನಷ್ಟ

ವಾಷಿಂಗ್ಟನ್‌: ಇರಾನ್‌ ಜೊತೆಗಿನ ಯುದ್ಧದ ಮೊದಲ 4 ದಿನಗಳಲ್ಲಿ ಅಮೆರಿಕ ಸುಮಾರು 18000 ಕೋಟಿ ರು. (2 ಬಿಲಿಯನ್‌ ಡಾಲರ್‌) ಮೌಲ್ಯದ ಶಸ್ತ್ರಾಸ್ತ್ರಗಳ ನಷ್ಟ ಅನುಭವಿಸಿದೆ ಎಂದು ಅನಡೋಲು ಸುದ್ದಿಸಂಸ್ಥೆ ವರದಿ ಮಾಡಿದೆ. ಇವುಗಳಲ್ಲಿ ಇರಾನ್‌ ಕ್ಷಿಪಣಿ ದಾಳಿಗೆ ನಾಶವಾದ 10000 ಕೋಟಿ ರು ಮೌಲ್ಯದ ಎಫ್‌ಪಿಎಸ್‌-132 ರಾಡಾರ್‌ ವ್ಯವಸ್ಥೆ, ಕುವೈತ್‌ ಆಕಸ್ಮಿಕವಾಗಿ ಹೊಡೆದುರುಳಿಸಿದ 3 ಯುದ್ಧ ವಿಮಾನದಿಂದ 3000 ಕೋಟಿ ರು. ಇನ್ನು ಮನಾಮಾ ಮತ್ತು ಬಹ್ರೈನ್‌ನ ನೌಕಾದಳದಲ್ಲಿ 170 ಕೋಟಿ ರು. ನಷ್ಟವಾಗಿದೆ ಎಂದು ತಿಳಿದುಬಂದಿದೆ.

==

ಯುದ್ಧ: ಇಸ್ರೇಲ್‌ಗೆ ವಾರಕ್ಕೆ ₹2.74 ಲಕ್ಷ ಕೋಟಿ ನಷ್ಟ

ಸರ್ಕಾರಕ್ಕೆ ವಿತ್ತ ಸಚಿವಾಲಯ ಎಚ್ಚರಿಕೆ

ಜೆರುಸಲೇಂ: ಇರಾನ್ ಜೊತೆಗಿನ ಸಂಘರ್ಷದ ಕಾರಣ, ಇಸ್ರೇಲ್‌ನಾದ್ಯಂತ ವ್ಯಾಪಾರ ವಹಿವಾಟುಗಳಿಗೆ ಬಹುತೇಕ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ದೇಶಕ್ಕೆ ಪ್ರತಿ ವಾರ ಅಂದಾಜು 2.74 ಲಕ್ಷ ಕೋಟಿ ರು. ನಷ್ಟವಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ. ಕಳೆದ ಶನಿವಾರ ಯುದ್ಧ ಆರಂಭವಾದಾಗಿನಿಂದ ಅಗತ್ಯ ವ್ಯಾಪಾರ ಹೊರತುಪಡಿಸಿ ಉಳಿದೆಲ್ಲವುಗಳಿಗೆ ಇಸ್ರೇಲ್‌ನಲ್ಲಿ ನಿರ್ಬಂಧ ಹೇರಲಾಗಿದೆ. ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದ್ದು, ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಉಂಟಾಗಿದೆ.