ನವದೆಹಲಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕುವ ಕುಕೃತ್ಯಗಳು ಮಂಗಳವಾರವೂ ಮುಂದುವರಿದಿವೆ. ಭಾರತದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿದೆ. ಇದರೊಂದಿಗೆ ಕಳೆದ 9 ದಿನದಲ್ಲಿ 170 ಬೆದರಿಕೆಗಳು ಬಂದಂತಾಗಿದೆ.
ಅಂತಾರಾಷ್ಟ್ರೀಯ ವಿಮಾನಗಳ ಪೈಕಿ ಸೌದಿ ಅರೇಬಿಯಾದ ಜೆಡ್ಡಾಗೆ ಹೋಗುತ್ತಿದ್ದ 3 ಇಂಡಿಗೋ ವಿಮಾನಗಳನ್ನು ಸೌದಿ ಅರೇಬಿಯಾ ಹಾಗೂ ಕತಾರ್‌ನ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿದೆ. ಎಚ್ಚರಿಕೆ ಲಭಿಸುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಹಾಗೂ ತಪಾಸಣೆ ನಡೆಸಲಾಗಿದೆ. ಆದರೆ ತಪಾಸಣೆ ವೇಳೆ ಎಲ್ಲ ಬೆದರಿಕೆಗಳು ಹುಸಿ ಎಂದು ದೃಢಪಟ್ಟಿವೆ.
ಬೆದರಿಕೆ ಸಂದೇಶಗಳ ವರ್ಗೀಕರಣ:ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಸುಳ್ಳು ಬೆದರಿಕೆ ಒಡ್ಡುವವರನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದೆ. ಆದರೆ, ತುಂಬಾ ಬೆದರಿಕೆ ಕರೆಗಳು/ಸಂದೇಶಗಳು ಬರುತ್ತಿರುವ ಕಾರಣ ಬೆದರಿಕೆಗಳ ಗಂಭೀರತೆ ಅರಿಯಲು ಸರ್ಕಾರವು ‘ನಿರ್ದಿಷ್ಟ’ ಹಾಗೂ ‘ನಿರ್ದಿಷ್ಟವಲ್ಲದ’ ಎಂಬ 2 ವರ್ಗೀಕರಣ ಮಾಡಿದೆ.
‘ನಿರ್ದಿಷ್ಟ’ ಎಂದು ವರ್ಗೀಕರಿಸಲಾದ ಬೆದರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ತಪಾಸಣೆ ಮಾಡಲಾಗುತ್ತದೆ. ಆದರೆ ನಿರ್ದಿಷ್ಟವಲ್ಲದ ಬೆದರಿಕೆಗೆ ಅಷ್ಟು ಪ್ರಾಮುಖ್ಯ ನೀಡುವುದನ್ನು ನಿಲ್ಲಿಸಲಾಗುತ್ತದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ತೊಂದರೆ ತಪ್ಪಲಿದೆ.
==9 ದಿನದಲ್ಲಿ ವಿಮಾನ ಸಂಸ್ಥೆಗಳಿಗೆ 600 ಕೋಟಿ ರು. ನಷ್ಟ
ಕಳೆದ 9 ದಿನಗಳ ಅವಧಿಯಲ್ಲಿ ವಿಮಾನಗಳಿಗೆ ಕಿಡಿಗೇಡಿಗಳು ಹುಸಿಬಾಂಬ್ ಕರೆ ಮಾಡಿರುವುದರಿಂದ 170 ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಇದರಿಂದ ವಿಮಾನಯಾನ ಕಂಪನಿಗಳಿಗೆ 600 ಕೋಟಿ ರು. ನಷ್ಟವಾಗಿದೆ ಎಂದು ವಿಮಾನ ಕಂಪನಿಯೊಂದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.