ಶ್ರೀಶೈಲ: ಆಂಧ್ರಪ್ರದೇಶದ ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ಶ್ರೀಶೈಲದ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕಾ ದೇಗುಲದ ಆವರಣದಲ್ಲಿ ವಿತರಿಸಿದ ಪುಳಿಯೋಗರೆ ಪ್ರಸಾದದಲ್ಲಿ ಮೂಳೆ ಚೂರು ಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೂಲಂಕಷ ತನಿಖೆಗೆ ದೇಗುಲ ಮಂಡಳಿ ಆದೇಶಿಸಿದೆ.
ದೇವರ ದರ್ಶನದ ಬಳಿಕ ನೀಡುವ ಪುಳಿಯೋಗರೆ ಪ್ರಸಾದದಲ್ಲಿ ಮೂಳೆ ಚೂರುಗಳಿರುವ ಕುರಿತು ಹೈದರಾಬಾದ್ ಮೂಲದ ಹರೀಶ್ ರೆಡ್ಡಿ ಎಂಬ ಭಕ್ತ ಸಾಕ್ಷಿ ಸಮೇತ ದೇಗುಲದ ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ಲಿಖಿತ ದೂರು ನೀಡಿದ್ದರು. ಇದನ್ನು ಆಧರಿಸಿ ತನಿಖೆ ಮಾಡುವುದಾಗಿ ಆಡಳಿತ ಮಂಡಳಿ ಹೇಳಿದೆ.
ಪ್ರಸಾದದಲ್ಲಿ ಇದ್ದವು ಎನ್ನಲಾದ ಮೂಳೆಗಳ ವಿಡಿಯೋವನ್ನೂ ಸಾಮಾಜಿಕ ಮಾಧ್ಯಮಗಳಿಗೆ ಭಕ್ತ ರೆಡ್ಡಿ ಲಗತ್ತಿಸಿದ್ದಾರೆ. ಇದು ದೇಗುಲದ ಪ್ರಸಾದದ ಪಾವಿತ್ರ್ಯ ಹಾಗೂ ಶುಚಿತ್ವದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.