;Resize=(412,232))
ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆ ಭಾನುವಾರ ಅಂತ್ಯಗೊಂಡಿದ್ದು, ಅನೇಕ ನೆಲೆಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಮಧ್ಯಪ್ರಾಚ್ಯ ಉದ್ವಿಗ್ನತೆ ಹಾಗೂ ಜಾಗತಿಕ ಅಸ್ಥಿರತೆಗಳ ನಡುವೆಯೂ, ‘ವಿರುದ್ಧ ದೇಶ’ಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಭಾರತ ಅದ್ಭುತ ರಾಜತಾಂತ್ರಿಕ ಯಶ ಸಾಧಿಸಿದೆ.
ಪ್ರಸ್ತುತ ಮಧ್ಯಪ್ರಾಚ್ಯ ಕದನ ಹಾಗೂ ರಷ್ಯಾ-ಉಕ್ರೇನ್ ಸಮರ ಜಾಗತಿಕ ಭೂರಾಜಕೀಯ ಪರಿಸ್ಥಿತಿಯನ್ನು ಅಸ್ಥಿರಗೊಳಿಸಿವೆ. ಅಮೆರಿಕ ಮತ್ತು ಇರಾನ್ ನಡುವೆ ಕಳೆದ 6 ತಿಂಗಳಿನಿಂದಲೂ ನಡೆಯುತ್ತಿರುವ ಯುದ್ಧ, ಕೇವಲ ಎರಡು ದೇಶಗಳಿಗೆ ಸೀಮಿತವಾಗದೆ ಕೊಲ್ಲಿ ದೇಶಗಳನ್ನೂ ಪ್ರಭಾವಿಸಿದೆ. ಇದರ ಪರಿಣಾಮವಾಗಿ ಇಡೀ ಮಧ್ಯಪ್ರಾಚ್ಯ ಆರ್ಥಿಕ, ರಾಜಕೀಯ ಹಾಗೂ ರಕ್ಷಣಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿದೆ.
ಇತ್ತ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರವೂ ಪರೋಕ್ಷವಾಗಿ ಜಾಗತಿಕ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ರಷ್ಯಾವನ್ನು ಹತ್ತಿಕ್ಕಲು ಅಮೆರಿಕ ಇನ್ನಿಲ್ಲದ ಸಾಹಸ ಮಾಡುತ್ತಿದ್ದರೆ, ಅಮೆರಿಕ ಹಾಗೂ ದೋಸ್ತಿ ದೇಶ ಯುಎಇಯನ್ನು ಬಗ್ಗುಬಡಿಯಲು ಇರಾನ್ ಶತಪ್ರಯತ್ನ ಮಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಜಾಗತಿಕ ದೇಶಗಳನ್ನು ಒಂದುಗೂಡಿಸಿತು. ರಷ್ಯಾ, ಇರಾನ್, ಯುಎಇ, ಚೀನಾದಂತಹ ಪ್ರಭಾವಿ ದೇಶಗಳು ಒಂದೇ ವೇದಿಕೆಯಲ್ಲಿ ಜೊತೆಯಾಗುವ ಮೂಲಕ ಜಾಗತಿಕ ರಾಜಕೀಯಕ್ಕೆ ಪ್ರಬಲ ಸಂದೇಶ ರವಾನಿಸಿದವು. ಈ
ದೇಶಗಳ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಂತಿಮವಾಗಿ ಒಮ್ಮತದಿಂದ ಯುದ್ಧದ ವಿರುದ್ಧ ಬ್ರಿಕ್ಸ್ ನಿರ್ಣಯವನ್ನು ಅಂಗೀಕರಿಸಿದ್ದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಯಶಸ್ಸು.
ಇದೇ ವೇಳೆ, ಕಳೆದ ವರ್ಷ ಪಾಕಿಸ್ತಾನ ನಡೆಸಿದ ಪಹಲ್ಗಾಂ ದಾಳಿಯನ್ನು ಉಲ್ಲೇಖಿಸಿ ಭಾರತ ಚಾಟಿ ಬೀಸಿತು. ಇದು ಭಾರತ ಎಂದಿನಿಂದಲೂ ಪಾಲಿಸುತ್ತ ಬಂದಿರುವ ಶಾಂತಿ ಪ್ರತಿಪಾದನೆಯನ್ನು ಮತ್ತೊಮ್ಮೆ ವಿಶ್ವದೆದುರು ಅನಾವರಣಗೊಳಿಸಿತು ಹಾಗೂ ನೆರೆಯ ಶತ್ರುದೇಶಕ್ಕೆ ಬಲಿಷ್ಠ ಸಂದೇಶ ರವಾನಿಸಿತು. ಇದಕ್ಕೆ ಪಾಕ್ ಮಿತ್ರ ಚೀನಾವನ್ನು ಭಾರತ ಒಪ್ಪಿಸಿದ್ದು ವಿಶೇಷ.
ಏಕಪಕ್ಷೀಯವಾಗಿ ಮನಸೋ ಇಚ್ಛೆ ತೆರಿಗೆ ವಿಧಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಕ್ಸ್ ಒಕ್ಕೂಟ ಪರೋಕ್ಷವಾಗಿ ಚಾಟಿ ಬೀಸಿತು. ಇದಕ್ಕೆ ಅಮೆರಿಕದ ಮಿತ್ರ ದೇಶ ಯುಎಇ ಕೂಡ ಸಮ್ಮತಿಸಿತು.
ಚೀನಾ ಅಧ್ಯಕ್ಷರ ಎದುರಲ್ಲೇ ಚಾಟಿ:
ಬ್ರಿಕ್ಸ್ ಶೃಂಗದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನ ಮತ್ತು ಅಪರೂಪದ ಖನಿಜಗಳನ್ನು ಅಸ್ತ್ರವನ್ನಾಗಿ ಬಳಸುವ ಪ್ರವೃತ್ತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ತಂತ್ರಜ್ಞಾನ ಮತ್ತು ಅಪರೂಪದ ಖನಿಜಗಳ ಮೇಲಿನ ನಿಯಂತ್ರಣವು ದೇಶಗಳ ಸಮಾನ ಪ್ರಗತಿಗೆ ಅಡ್ಡಿಯಾಗಲಿದೆ. ತಂತ್ರಜ್ಞಾನವು ಎಲ್ಲರಿಗೂ ಲಭ್ಯವಾಗುವಂತಿರಬೇಕು ಎಂದು ಪ್ರತಿಪಾದಿಸಿದರು. ಈ ಮೂಲಕ, ತನ್ನಲ್ಲಿರುವ ಅಪರೂಪದ ಖನಿಜಗಳ ಮೇಲೆ ಹಿಡಿತ ಸಾಧಿಸಿ, ಅನ್ಯ ದೇಶಗಳಿಗೆ ಮಾರಕವಾಗುತ್ತಿರುವ ಚೀನಾಕ್ಕೆ ಚಾಟಿ ಬೀಸಿದರು. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಅದೇ ವೇದಿಕೆಯಲ್ಲಿದ್ದುದು ಗಮನಾರ್ಹ.
ಬ್ರಿಕ್ಸ್ ಯಶಸ್ಸು ಹೇಗೆ?
- ಇರಾನ್-ಯುಎಇ ಪರಸ್ಪರರ ವಿರುದ್ಧ ಯುದ್ಧದಲ್ಲಿ ತೊಡಗಿದ್ದರೂ ಒಂದೇ ವೇದಿಕೆಗೆ
- ಗಲ್ವಾನ್ ಸಂಘರ್ಷ ಬಳಿಕ ಹಳಸಿದ್ದ ಭಾರತ-ಚೀನಾ ದ್ವಿಪಕ್ಷೀಯ ಬಂಧ ಈಗ ಹಳಿಗೆ
- ಯುದ್ಧ ವಿರುದ್ಧದ ಗೊತ್ತುವಳಿ. ಮೋದಿ ಪ್ರಸ್ತಾವಕ್ಕೆ ಇರಾನ್, ರಷ್ಯಾ, ಯುಎಇ ಒಪ್ಪಿಗೆ
- ಅಮೆರಿಕದ ತೆರಿಗೆ ಹೇರಿಕೆ, ಪಾಕಿಸ್ತಾನದ ಉಗ್ರವಾದದ ವಿರುದ್ಧ ಗೊತ್ತುವಳಿಗೆ ಅಸ್ತು