ಹುಟ್ಟು ಹಬ್ಬದಂದೇ ಹೊಸ ಸರ್ಕಾರಿ ಬಂಗಲೆಗೆ ರಾಹುಲ್‌ ಸ್ಥಳಾಂತರ

KannadaprabhaNewsNetwork |  
Published : Jun 19, 2025, 11:50 PM ISTUpdated : Jun 20, 2025, 05:07 AM IST
Congress Rahul Gandhi

ಸಾರಾಂಶ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮಗೆ ನೀಡಲಾದ ಹೊಸ ಸರ್ಕಾರಿ ಬಂಗಲೆಗೆ ಗುರುವಾರ, ತಮ್ಮ ಹುಟ್ಟುಹಬ್ಬದಂದೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದಾರೆ.

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮಗೆ ನೀಡಲಾದ ಹೊಸ ಸರ್ಕಾರಿ ಬಂಗಲೆಗೆ ಗುರುವಾರ, ತಮ್ಮ ಹುಟ್ಟುಹಬ್ಬದಂದೇ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದಾರೆ. ಮುಂದಿನ ಸಂಸತ್ ಅಧಿವೇಶನಕ್ಕೂ ಮೊದಲು ಅಲ್ಲಿ ವಾಸ ಆರಂಭಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ದೆಹಲಿಯ ಸುನೆಹ್ರಿ ಬಾಗ್ ರಸ್ತೆಯ 5ನೇ ಸಂಖ್ಯೆಯ ಸರ್ಕಾರಿ ಬಂಗಲೆಯನ್ನು ಅಧಿಕೃತ ನಿವಾಸವಾಗಿ ಪಡೆಯಲು ರಾಹುಲ್ ಗಾಂಧಿ ಒಪ್ಪಿದ್ದಾರೆ. ರಾಹುಲ್ ಗಾಂಧಿಯವರ 55ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.

ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್‌: ಆದರೂ ಚಿಕಿತ್ಸೆ ಮುಂದುವರಿಕೆ

ನವದೆಹಲಿ: ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಇಲ್ಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉದರ ಸಂಬಂಧಿ ಬೇನೆಯಿಂದ ಗಂಗಾರಾಮ್‌ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ಜೂ.15ಕ್ಕೆ 78 ವರ್ಷದ ಕಾಂಗ್ರೆಸ್‌ ನಾಯಕಿ ದಾಖಲಾಗಿದ್ದರು. ‘ಸೋನಿಯಾ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಅವರನ್ನು ಸದ್ಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗುತ್ತದೆ’ ಎಂದು ಆಸ್ಪತ್ರೆಯ ಡಾ.ಅಜಯ್‌ ಸ್ವರೂಪ್‌ ಗುರುವಾರ ಬೆಳಿಗ್ಗೆ ನೀಡಿದ ಆರೋಗ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬ್ಲ್ಯಾಕ್‌ಬಾಕ್ಸ್‌ಗೆ ಭಾರೀ ಹಾನಿ: ಮಾಹಿತಿಗಾಗಿ ಅಮೆರಿಕಕ್ಕೆ ರವಾನೆ?

ನವದೆಹಲಿ: ಕಳೆದ ವಾರ ಅಹಮದಾಬಾದ್‌ನಲ್ಲಿ ಪತನಗೊಂಡ ಏರಿಂಡಿಯಾ ವಿಮಾನದ ಬ್ಲ್ಯಾಕ್‌ಬಾಕ್ಸ್‌ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಅದರೊಳಗಿನ ಮಾಹಿತಿ ಹೊರತೆಗೆಯಲು ಅದನ್ನು ಅಮೆರಿಕಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕಳೆದ ವರ್ಷ ದೆಹಲಿಯಲ್ಲಿ ಬ್ಲ್ಯಾಕ್‌ಬಾಕ್ಸ್‌ ಮಾಹಿತಿ ಹೊರತೆಗೆಯುವ ಪ್ರಯೋಗಾಲಯವನ್ನು ಸರ್ಕಾರ ಸ್ಥಾಪಿಸಿತ್ತು. ಆದರೆ ಅಹಮದಾಬಾದ್‌ ವಿಮಾನ ದುರಂತದ ವೇಳೆ ಅದರಲ್ಲಿದ್ದ 1.25 ಲಕ್ಷ ಲೀಟರ್ ಪೆಟ್ರೋಲ್‌ ದಹನಗೊಂಡು ಸೃಷ್ಟಿಯಾದ ಭಾರೀ ಉಷ್ಣತೆಯಿಂದಾಗಿ ಬ್ಲ್ಯಾಕ್‌ಬಾಕ್ಸ್‌ಗೆ ಭಾರೀ ಹಾನಿಯಾಗಿದೆ. ಹೀಗಾಗಿ ಭಾರತದಲ್ಲಿ ಡೇಟಾ ಮರು ಸಂಗ್ರಹಣೆ ಕಷ್ಟ ಎನ್ನುವ ಕಾರಣಕ್ಕೆ ಅಮೆರಿಕಗೆ ಕಳುಹಿಸಲು ಚಿಂತನೆ ನಡೆದಿದೆ. ಇದರಲ್ಲಿ ವಿಮಾನ ಪತನಕ್ಕೆ ಕಾರಣವಾಗಿರಬಹುದಾದ ತಾಂತ್ರಿಕ ಕಾರಣಗಳು ದಾಖಲಾಗಿರುತ್ತದೆ.

ನ್ಯಾ.ವರ್ಮಾ ಅಕ್ರಮ ನಿಜ, ವಜಾಕ್ಕೆ ಸುಪ್ರೀಂ ತನಿಖಾ ಸಮಿತಿ ಶಿಫಾರಸು

ನವದೆಹಲಿ: ದೆಹಲಿಯ ಹೈಕೋರ್ಟ್‌ನ ಜಡ್ಜ್‌ ಆಗಿದ್ದ ನ್ಯಾ। ಯಶವಂತ್‌ ವರ್ಮಾ ಅವರು ಅಕ್ರಮದಲ್ಲಿ ಭಾಗಿಯಾಗಿದ್ದು ನಿಜ ಎಂದು ಪ್ರಕರಣದ ತನಿಖೆ ನಡೆಸಿದ ಸಮಿತಿ ತಿಳಿಸಿದ್ದು, ಅವರನ್ನು ವಜಾ ಮಾಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಮಾ.14ರಂದು ವರ್ಮಾ ಮನೆಯಲ್ಲಿ 500 ರು. ಮುಖಬೆಲೆಯ ಸುಟ್ಟ ನೋಟುಗಳು ಪತ್ತೆಯಾದ ಬೆನ್ನಲ್ಲೇ, ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಿ, ಬಳಿಕ ಪ್ರಕರಣದ ತನಿಖೆ ನಡೆಸಲು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾ। ಶೇಲ್‌ ನಾಗು ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು 10 ದಿನ ತನಿಖೆ, 55 ಸಾಕ್ಷಿಗಳ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಅದರಲ್ಲಿ, ‘ನ್ಯಾಯಾಧೀಶರಿಂದ ಪ್ರಾಮಾಣಿಕತೆಯ ನಿರೀಕ್ಷೆ ಇರುತ್ತದೆ ಹಾಗೂ ಸಾರ್ವಜನಿಕರು ಅಪಾರ ನಂಬಿಕೆ ಇಟ್ಟಿರುತ್ತಾರೆ. ಆದರೆ ನ್ಯಾ। ವರ್ಮಾ ಅಕ್ರಮದಲ್ಲಿ ತೊಡಗಿದ್ದುದು ಸಾಬೀತಾಗಿದೆ’ ಎನ್ನಲಾಗಿದ್ದು, ವರ್ಮಾ ಅವರನ್ನು ವಜಾಗೊಳಿಸಲು ಸೂಚಿಸಲಾಗಿದೆ.ಇದರ ಆಧಾರದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸಂಜೀವ್‌ ಖನ್ನಾ ಅವರು, ವರ್ಮಾರನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ