ನವದೆಹಲಿ: ಯುಗಾದಿ ಸಂದರ್ಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ನೌಕರರ ತುಟ್ಟಿ ಭತ್ಯೆ ಶೇ.53ರಿಂದ ಶೇ.55ಕ್ಕೇರಿದಂತಾಗಿದೆ.
ಇದರಿಂದ 1.5 ಕೋಟಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲವಾಗಲಿದೆ.
2024ರಲ್ಲೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.50ರಿಂದ ಶೇ.53ಕ್ಕೇರಿಕೆಯಾಗಿತ್ತು. ಇದೀಗ ಸರ್ಕಾರವನ್ನು ಅದನ್ನು ಶೇ.2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಹಣದುಬ್ಬರದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೆರವಾಗುತ್ತದೆ. ಹೆಚ್ಚುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ನೌಕರರಿಗೆ ತುಟ್ಟಿ ಭತ್ಯೆಯು ರಕ್ಷಣೆ ನೀಡುತ್ತದೆ. ವೇತನ ಆಯೋಗದ ಶಿಫಾರಸ್ಸಿನಂತೆ 10 ವರ್ಷಕ್ಕೊಮ್ಮೆ ಮೂಲ ವೇತನವು ಪರಿಷ್ಕರಣೆಗೊಂಡರೆ, ತುಟ್ಟಿಭತ್ಯೆಯನ್ನು ಹಣದುಬ್ಬರ ನೋಡಿಕೊಂಡು ಹೊಂದಾಣಿಕೆ ಮಾಡಲಾಗುತ್ತದೆ.
ರಸಗೊಬ್ಬರ ಸಬ್ಸಿಡಿ ಮುಂದುವರಿಕೆ
ನವದೆಹಲಿ: ಈ ವರ್ಷದ ಮುಂಗಾರು ಬೆಳೆಯನ್ನು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ಸಬ್ಸಿಡಿ ಮುಂದುವರಿಕೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಫಾಸ್ಫೆಟಿಕ್ ಮತ್ತು ಪೊಟ್ಯಾಸಿಕ್ ಗೊಬ್ಬರಕ್ಕೆ 37,216 ಕೋಟಿ ರು. ಸಬ್ಸಿಡಿ ನೀಡಲು ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ.ಆದರೆ ಗೊಬ್ಬರದ ದರದಲ್ಲಿ ಬದಲಾವಣೆ ಆಗಿಲ್ಲ. ಕೇಂದ್ರ ಸರ್ಕಾರವು ಡಿಎಪಿ ಗೊಬ್ಬರದ ಚಿಲ್ಲರೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಉದ್ದೇಶಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೊಬ್ಬರಗಳು ಮತ್ತು ಇನ್‌ಪುಟ್‌ಗಳ ಬೆಲೆಯನ್ನು ಆಧರಿಸಿ ಈ ಸಬ್ಸಿಡಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮುಂಗಾರು ಅವಧಿಗೆ ಸಬ್ಸಿಡಿ ನಿಧಿಯ ಅಗತ್ಯವು ಸುಮಾರು 13,000 ಕೋಟಿ ಆಗಿದೆ. ಇದು 2024-25ರ ಹಿಂಗಾರು ಅವಧಿಗಿಂತಲೂ ಹೆಚ್ಚಿನದ್ದಾಗಿದೆ. ಇದೀಗ ಕೇಂದ್ರ ಸರ್ಕಾರವು ಸಬ್ಸಿಡಿ ಘೋಷಿಸುವ ಮೂಲಕ ರೈತರಿಗೆ ಕಡಿಮೆ ದರದಲ್ಲಿ ರಾಸಾಯನಿಕ ಗೊಬ್ಬರ ಸಿಗುವಂತೆ ನೋಡಿಕೊಂಡಿದೆ ಎಂದಿದ್ದಾರೆ.___
ಎನ್‌ಪಿಕೆಎಸ್ ಗ್ರೇಡ್‌ಗಳು ಸೇರಿ ಫಾಸ್ಫೆಟಿಕ್ ಮತ್ತು ಪೊಟ್ಯಾಸಿಕ್ ಗೊಬ್ಬರಗಳಿಗೆ ಸಬ್ಸಿಡಿಯನ್ನು 2025ರ ಮುಂಗಾರು ದರಕ್ಕೆ ಅನುಗುಣವಾಗಿ ಒದಗಿಸಲಾಗಿದೆ. ಈ ಮೂಲಕ ರೈತರಿಗೆ ಪೋಷಕಾಂಶಗಳು ಕೈಗೆಟಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಫಾಸ್ಫೆಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ 28 ಗ್ರೇಡ್‌ಗಳು ರೈತರಿಗೆ ಸಬ್ಸಿಡಿ ದರದಲ್ಲಿ ಸಿಗುವಂತೆ ನೋಡಿಕೊಂಡಿದೆ.