ಮೋದಿ ಭೇಟಿಯಾಗಿದ್ದಕ್ಕೆ ಕನ್ನಡಿಗ ಚಂದ್ರಗೆ ಕೆನಡಾ ಸಂಸತ್‌ ಚುನಾವಣೆ ಟಿಕೆಟ್‌ ಇಲ್ಲ !

Published : Mar 28, 2025, 04:51 AM IST
Prime Minister Narendra Modi (File photo/ANI)

ಸಾರಾಂಶ

ಭಾರತದ ಸರ್ಕಾರದ ಜೊತೆಗೆ ಸಂಪರ್ಕ ಹೊಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೆನಡಾದ ಲಿಬರಲ್‌ ಪಕ್ಷವು, ಲಿಬರಲ್‌ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮುಂಬರುವ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕನ್ನಡಿಗ ಚಂದ್ರ ಆರ್ಯ ಅವರಿಗೆ ನಿಷೇಧ ಹೇರಿದೆ.

 ಒಟ್ಟಾವಾ: ಭಾರತದ ಸರ್ಕಾರದ ಜೊತೆಗೆ ಸಂಪರ್ಕ ಹೊಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೆನಡಾದ ಲಿಬರಲ್‌ ಪಕ್ಷವು, ಲಿಬರಲ್‌ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮುಂಬರುವ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕನ್ನಡಿಗ ಚಂದ್ರ ಆರ್ಯ ಅವರಿಗೆ ನಿಷೇಧ ಹೇರಿದೆ.

ಇಂಥದ್ದೊಂದು ನಿಷೇಧಕ್ಕೆ ಲಿಬರಲ್‌ ಪಕ್ಷ ಬಹಿರಂಗವಾಗಿ ಯಾವುದೇ ಕಾರಣಗಳನ್ನು ನೀಡದೇ ಇದ್ದರೂ, ಭಾರತ ಸರ್ಕಾರದೊಂದಿಗಿನ ಆರ್ಯ ನಂಟಿನ ಕಾರಣಕ್ಕೆ ಅವರಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ‘ಗ್ಲೋಬ್‌ ಆ್ಯಂಡ್‌ ಮೇಲ್‌’ ಪತ್ರಿಕೆ ವರದಿ ಮಾಡಿದೆ.

ಈ ಹಿಂದೆ ನೇಪಿಯನ್‌ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದ ಕರ್ನಾಟಕದ ತುಮಕೂರು ಮೂಲದ ಚಂದ್ರ ಆರ್ಯ, ಈ ಬಾರಿಯೂ ಅದೇ ಕ್ಷೇತ್ರದಿಂದ ಆಯ್ಕೆ ಬಯಸಿದ್ದರು. ಜೊತೆಗೆ ತಾವು ಕೂಡಾ ಮುಂದಿನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇರುವುದಾಗಿ ಹೇಳಿದ್ದರು.

ಆದರೆ ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಪೂರ್ಣ ಹದಗೆಟ್ಟ ಹೊತ್ತಿನಲ್ಲೇ ಚಂದ್ರ ಆರ್ಯ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಕುರಿತ ಮಾಹಿತಿಯನ್ನು ಅವರು ಪಕ್ಷದೊಂದಿಗೆ ಹಂಚಿಕೊಂಡಿಲ್ಲ ಎಂಬ ಕಾರಣ ನೀಡಿ ಇದೀಗ ಅವರಿಗೆ ಮುಂಬರುವ ಸಂಸತ್‌ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸುವ ಜೊತೆಗೆ, ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೂ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದೆ.

ಈ ನಡುವೆ ಭಾರತದ ಅಣತಿಯಂತೆ ತಾವು ನಡೆದುಕೊಳ್ಳುತ್ತಿರುವುದಾಗಿ ಕೇಳಿಬಂದ ಆರೋಪಗಳನ್ನು ಪೂರ್ಣವಾಗಿ ತಿರಸ್ಕರಿಸಿರುವ ಚಂದ್ರ ಆರ್ಯ, ‘ಸಂಸತ್ತಿನ ಸದಸ್ಯನಾಗಿ ನಾನು ಕೆನಡಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಜತಾಂತ್ರಿಕರು ಮತ್ತು ಸರ್ಕಾರದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದೇನೆ. ಹಾಗೆ ನಡೆಸಲು ನಾನು ಒಮ್ಮೆಯೂ ಸರ್ಕಾರದಿಂದ ಅನುಮತಿ ಪಡೆದಿಲ್ಲ. ಹಾಗೆಯೇ ಮಾಡುವ ಅಗತ್ಯವೂ ಇಲ್ಲ. ಜೊತೆಗೆ ಕೆನಡಾ ಹಿಂದೂಗಳ ಪರ ಹೋರಾಟ ಮತ್ತು ಖಲಿಸ್ತಾನಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾದಲ್ಲಿ ಮತ್ತೊಬ್ಬ ಯುವ ನಾಯಕನ ತಲೆಗೆ ಗುಂಡೇಟು
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ