2011ರ ಫುಕುಶಿಮಾ ದುರಂತದ ಬಳಿಕ ಸ್ಥಗಿತವಾಗಿದ್ದ ಜಗತ್ತಿನ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರವನ್ನು15 ವರ್ಷಗಳ ನಂತರ ಮತ್ತೆ ಆರಂಭಿಸಲು ಜಪಾನ್‌ ಮುಂದಾಗಿದೆ.

-2011ರ ಫುಕುಶಿಮಾ ದುರಂತದ ಬಳಿಕ ನಿಂತಿದ್ದ ಯೋಜನೆ-ವಿದೇಶಿ ಇಂಧನ ಅವಲಂಬನೆ ಕಡಿತಗೊಳಿಸಲು ಹೊಸ ಕ್ರಮಟೋಕಿಯೊ: 2011ರ ಫುಕುಶಿಮಾ ದುರಂತದ ಬಳಿಕ ಸ್ಥಗಿತವಾಗಿದ್ದ ಜಗತ್ತಿನ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರವನ್ನು15 ವರ್ಷಗಳ ನಂತರ ಮತ್ತೆ ಆರಂಭಿಸಲು ಜಪಾನ್‌ ಮುಂದಾಗಿದೆ.

ರಾಜಧಾನಿ ಟೋಕಿಯೊದಿಂದ 220 ಕಿ.ಮೀ. ದೂರದ ನಿಯಾಗಟಾ ಪ್ರದೇಶದಲ್ಲಿರುವ ಕಶಿವಾಜಾಕಿ-ಕರಿವಾ ಸ್ಥಾವರಕ್ಕೆ ಮರುಚಾಲನೆ ನೀಡುವ ನಿರ್ಣಯವನ್ನು ಸಂಸತ್ತಿನಲ್ಲಿ ವಿಶ್ವಾಸಮತದ ಮೂಲಕ ಅಂಗೀಕರಿಸಲಾಗಿದೆ. ಈ ಸ್ಥಾವರದಲ್ಲಿ 7 ರಿಯಾಕ್ಟರ್‌ಗಳಿವೆ. ಹೀಗಾಗಿ ಇದು ವಿಶ್ವದಲ್ಲೇ ಅತಿ ದೊಡ್ಡ ಅಣುವಿದ್ಯುತ್‌ ಸ್ಥಾವರ ಎಂಬ ಹೆಗ್ಗಳಿಕೆ ಪಡೆದಿದೆ. ಮೊದಲ ರಿಯಾಕ್ಟರ್ 2026ರ ಜ.20ರಂದು ಆರಂಭವಾಗುವ ಸಾಧ್ಯತೆಯಿದೆ. 2011ರಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಫುಕುಶಿಮಾ ಅಣುವಿದ್ಯುತ್‌ ಸ್ಥಾವರ ನಾಶವಾಯಿತು. ಆ ಬಳಿಕ ಜಪಾನ್‌ನಲ್ಲಿನ ಎಲ್ಲ 54 ಅಣು ರಿಯಾಕ್ಟರ್‌ಗಳನ್ನು ಸ್ಥಗಿತಗೊಳಿಸಲಾಯಿತು. ಜಪಾನ್‌ ವಿದೇಶಿ ಇಂಧನದ (ಹೆಚ್ಚಾಗಿ ಗ್ಯಾಸ್ ಮತ್ತು ಕಲ್ಲಿದ್ದಲು) ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದೀಗ ಅಣುಶಕ್ತಿಯನ್ನು ಮತ್ತೆ ಬಳಸಿ, ಈ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಉದ್ದೇಶಿಸಿದೆ. ಆದರೆ ಸ್ಥಳೀಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದು, ಫುಕುಶಿಮಾ ದುರಂತ ಮರುಕಳಿಸುವುದು ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.