ಅಣು ವಿದ್ಯುತ್‌ ಸ್ಥಾವರ ಕೊಪ್ಪಳಕ್ಕೂ ಬೇಡ, ರಾಯಚೂರಿಗೂ ಬೇಡ: ಬೋಸರಾಜು

| Published : Jan 05 2025, 01:30 AM IST

ಅಣು ವಿದ್ಯುತ್‌ ಸ್ಥಾವರ ಕೊಪ್ಪಳಕ್ಕೂ ಬೇಡ, ರಾಯಚೂರಿಗೂ ಬೇಡ: ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಅಣು ವಿದ್ಯುತ್‌ ಸ್ಥಾವರ ಕೊಪ್ಪಳ ಜಿಲ್ಲೆಗೂ ಬೇಡ, ರಾಯಚೂರು ಜಿಲ್ಲೆಗೂ ಬೇಡ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಹೇಳಿದರು.

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಬಳಿ ಕೇಂದ್ರ ಸರಕಾರದ ಯೋಜನೆಯಾಗಿರುವ ಅಣು ವಿದ್ಯುತ್‌ ಸ್ಥಾವರ ಸ್ಥಾಪನೆ ಸಮಂಜಸ ಅಲ್ಲ. ಇದು ಕೊಪ್ಪಳ ಜಿಲ್ಲೆಗೂ ಬೇಡ, ರಾಯಚೂರು ಜಿಲ್ಲೆಗೂ ಬೇಡ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಹೇಳಿದರು.

ನಗರದ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ಯೋಗ-ಕ್ಷೇಮ ವಿಚಾರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಅಣು ವಿದ್ಯುತ್‌ ಸ್ಥಾವರ ಪ್ರಸ್ತಾವನೆ ಕಳಿಸಲಾಗಿದೆ ಎನ್ನುವ ಪ್ರಶ್ನೆಗೆ ಈ ಅಣು ಸ್ಥಾವರದಿಂದ ಸುತ್ತಮುತ್ತಲಿನ ಪ್ರದೇಶದ ಪರಿಸರ ಹಾಳಾಗುತ್ತದೆ. ಈ ಕಾರಣಕ್ಕೆ ಸರ್ಕಾರ ಸ್ಥಾಪನೆಗೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಸ್ಥಾವರ ಸ್ಥಾಪನೆ ಮಾಡುವುದು ಸರಿಯಲ್ಲ ಎಂದು ಸೂಚಿಸಿದೆ. ಅದರಂತೆ ಗಂಗಾವತಿ ತಾಲೂಕಿನಲ್ಲಿ ಸ್ಫಾಪನೆ ಮಾಡುವುದು ಸಮಂಜಸ ಅಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನಪರಿಷತ್ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ, ಕರಿಯಣ್ಣ ಸಂಗಟಿ, ರಾಜಶೇಖರ್ ಮೂಸ್ಟೂರು, ಸಿದ್ದಪ್ಪ ನೀರಲೂಟಿ ಇದ್ದರು.ಸಿ.ಎಂ. ಬದಲಾವಣೆ ಉಹಾಪೋಹ: ಬೋಸರಾಜು

ಗಂಗಾವತಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಕೇವಲ ಉಹಾಪೋಹ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹೀಗಿರುವಾಗ ಬದಲಾವಣೆ ಕೇವಲ ಉಹಾಪೋಹವಾಗಿದೆ ಎಂದರು.

ನಾಯಕರು ಊಟಕ್ಕೆ ಕರೆದರೆ ಹೋಗುವುದು ತಪ್ಪೇ ಎಂದ ಪ್ರಶ್ನಿಸಿದ ಅವರು ಊಟಕ್ಕ ಹೋದ ತಕ್ಷಣ ಗುಂಪುಗಾರಿಕೆ ಎನ್ನುವುದು ಸರಿಯಲ್ಲ. ಯಾವುದೇ ಕಾರಣಕ್ಕೆ ಸಿಎಂ ಬದಲಾವಣೆ ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ನಿವಾಸದಲ್ಲಿ ಸಚಿವ ಬೋಸರಾಜು ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಕರಿಯಣ್ಣ ಸಂಗಟಿ, ಸರ್ವೇಶ್ ಮಾಂತಗೊಂಡ, ಸಿದ್ದಪ್ಪ ನೀರಲೂಟಿ, ರಾಜಶೇಖರ್ ಮೂಸ್ಟೂರು, ಶೇಖರಗೌಡ ಗೌಡರ್ ಮರಳಿ ಇದ್ದರು.ಆಪರೇಷನ್ ಸಂಸ್ಕೃತಿ ತಂದಿದ್ದೇ ಬಿಜೆಪಿ: ಬೋಸರಾಜು

ಕೊಪ್ಪಳ:

ಆಪರೇಷನ್ ಸಂಸ್ಕೃತಿ ಬಿಜೆಪಿಯದ್ದು, ಕಾಂಗ್ರೆಸ್ ಎಂದಿಗೂ ಅಂತಹ ಧೋರಣೆಗೆ ಹೋಗುವುದಿಲ್ಲ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಂಸ್ಕೃತಿ ತಂದಿದ್ದೇ ಬಿಜೆಪಿ. ಈಗ ಜೆಡಿಎಸ್ ಹಾಗೂ ಬಿಜೆಪಿಯವು ಒಂದಾಗಿದ್ದಾರೆ. ಅವರು ವಿಫಲರಾಗಿ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ತಮ್ಮ ವೈಫಲ್ಯವನ್ನು ಕಾಂಗ್ರೆಸ್ ಮೇಲೆ ಹಾಕಿ ಅಭದ್ರತೆಯಿಂದ ಆರೋಪ ಮಾಡುತ್ತಿದ್ದಾರೆ ಎಂದರು.

ಇವರಿಬ್ಬರಿಂದ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲು ಆಗುವುದಿಲ್ಲ. ನಾವು ಪೂರ್ಣಾವಧಿ ಪೂರೈಸುತ್ತೇವೆ. ಜೆಡಿಎಸ್‌ನಲ್ಲಿ ಶಾಸಕರು ಅಸಮಾಧಾನಗೊಂಡಿದ್ದಾರೆ. ಹಿರಿಯ ಶಾಸಕರೂ ಅಸಮಾಧಾನಗೊಂಡಿದ್ದಾರೆ. ಜೆಡಿಎಸ್‌ನವರು ನಮ್ಮನ್ನು ಸಂಪರ್ಕಿಸಿಲ್ಲ. ನಮಗೆ ಈಗ ಬೇರೆ ಪಕ್ಷದ ಅವಶ್ಯಕತೆಯೂ ಇಲ್ಲ ಎಂದರು.

ಸಚಿವ ಸಂಪುಟದ ಪುನಾರಚನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಮಾಡುವ ನಿರ್ಧಾರ ಸಿಎಂ ಅವರದ್ದು ಆಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಚಿನ್ ಪಾಂಚಾಳ ಸಾವಿಗೂ ಸಂಬಂಧವಿಲ್ಲ ಎಂದ ಅವರು ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ಇದೆ. ಕೊರೋನಾದಲ್ಲಿ ₹40 ಸಾವಿರ ಕೋಟಿ ರೂಪಾಯಿ ಅವ್ಯವಹಾರವಾಗಿದೆ. ಸಿಬಿಐನಿಂದ ಇಲ್ಲಿ ವರೆಗೂ ಒಂದು ಪ್ರಕರಣ ಹೊರ ಬಂದಿಲ್ಲ. 6 ಕೇಸ್ ಸಿಬಿಐಗೆ ಕೊಟ್ಟಿದ್ದೇವು. ಒಂದೂ ತನಿಖೆ ಪೂರ್ಣಗೊಂಡಿಲ್ಲ ಎಂದರು.

ನವಲಿ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯದ ಸಿಎಂ ಜತೆ ಮಾತುಕತೆಯಾಗುತ್ತಿದೆ. ₹9000 ಕೋಟಿ ಭೂ ಸ್ವಾದೀನಕ್ಕೆ ಬೇಕು. ₹6000 ಕೋಟಿ ಜಲಾಶಯ ನಿರ್ಮಾಣಕ್ಕೆ ಬೇಕಿದೆ. ಈ ಕುರಿತು ಇಷ್ಟರಲ್ಲಿ ಮೂರೂ ರಾಜ್ಯಗಳ ಸಿಎಂ ಸಭೆ ನಡೆಯಲಿದೆ ಎಂದು ತಿಳಿಸಿದರು.