ಅಣು ವಿದ್ಯುತ್‌ ಸ್ಥಾವರ: 100ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಜಾಗೃತಿ

| Published : Jan 04 2025, 12:32 AM IST

ಅಣು ವಿದ್ಯುತ್‌ ಸ್ಥಾವರ: 100ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಣು ವಿದ್ಯುತ್‌ ಸ್ಥಾವರ ಸ್ಥಾಪನೆಯಿಂದ ಪರಿಸರಕ್ಕೆ ಆಗುವ ಹಾನಿ ಕುರಿತಂತೆ ಹಿರೇಬೆಣಕಲ್ – ಚಿಕ್ಕಬೆಣಕಲ್ ಗ್ರಾಮಗಳ ಮುಖಂಡರು, ಯುವಕರು 100ಕ್ಕೂ ಹೆಚ್ಚು ಬೈಕ್‌ ಗಳಲ್ಲಿ ವಿವಿಧ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಗಂಗಾವತಿ: ತಾಲೂಕಿನ ಹಿರೇಬೆಣಕಲ್ ಬಳಿ ಅಣು ವಿದ್ಯುತ್‌ ಸ್ಥಾವರ ಸ್ಥಾಪನೆಯಿಂದ ಪರಿಸರಕ್ಕೆ ಆಗುವ ಹಾನಿ ಕುರಿತಂತೆ ಹಿರೇಬೆಣಕಲ್ – ಚಿಕ್ಕಬೆಣಕಲ್ ಗ್ರಾಮಗಳ ಮುಖಂಡರು, ಯುವಕರು 100ಕ್ಕೂ ಹೆಚ್ಚು ಬೈಕ್‌ ಗಳಲ್ಲಿ ವಿವಿಧ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಹಿರೇಬೆಣಕಲ್-ಚಿಕ್ಕಬೆಣಕಲ್ ಅರಣ್ಯ ಪ್ರದೇಶದ ಭೂಮಿ ಸರ್ವೆ ನಂ. 35ರಲ್ಲಿ ಅಣು ಸ್ಥಾವರ ನಿರ್ಮಿಸಲು ಜಿಲ್ಲಾಡಳಿತ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಈ ಪ್ರದೇಶದ ಸನಿಹದಲ್ಲಿಯೇ ಐತಿಹಾಸಿಕ ಮೋರೇರ ಶಿಲಾ ಸಮಾದಿಗಳು, ಕುಮ್ಮಟದುರ್ಗಾ, ಹೇಮಗುಡ್ಡ, ಅಂಜನಾದ್ರಿ ಪ್ರದೇಶಗಳಿವೆ. ಈ ಐತಿಹಾಸಿಕ ಸ್ಮಾರಕಗಳ ಜೊತೆಗೆ ಪರಿಸರ ಉಳಿವಿಗಾಗಿ ಬೈಕ್‌ಗಳಲ್ಲಿ ಸಂಚರಿಸಿ ಹೋರಾಟ ನಡೆಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಹಳೇಕುಮಟಾ, ಜಬ್ಬಲಗುಡ್ಡ, ಹಿರೇಬೆಣಕಲ್, ಚಿಕ್ಕಬೆಣಕಲ್, ಲಿಂಗದಳ್ಳಿ, ಎಚ್.ಆರ್.ಜಿ. ನಗರ, ಹೇಮಗುಡ್ಡ, ವೆಂಕಟಗಿರಿ, ಮಲ್ಲಾಪುರ, ಬಸಾಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಜ. 4ರಂದು ಹೇಮಗುಡ್ಡದ ಟೋಲ್ ಗೇಟ್ ಬಳಿ ನಡೆಯುವ ರಸ್ತೆ ತಡೆ ಚಳವಳಿಯಲ್ಲಿ ಭಾಗವಹಿಸುವಂತೆಯೂ ಕೋರಲಾಗುತ್ತಿದೆ.

5 ಸಾವಿರ ಜನಜ. 4ರಂದು ಅಣು ಸ್ಥಾವರ ಸ್ಥಾಪನೆ ವಿರೋಧಿಸಿ ಹೇಮಗುಡ್ಡದ ಟೋಲ್ ಗೇಟ್ ಬಳಿ ನಡೆಯುವ ರಸ್ತೆ ತಡೆ ಚಳವಳಿಯಲ್ಲಿ ಸುಮಾರು 5 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಇನ್ನೊಂದೆಡೆ ರಸ್ತೆ ತಡೆ ಚಳವಳಿ ಕೈ ಬಿಡುವಂತೆ ಅಧಿಕಾರಿಗಳು ಸಂಘಟಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಸಂಘಟಕರು ಯಾವುದೇ ಕಾರಣಕ್ಕೆ ರಸ್ತೆ ತಡೆ ಚಳವಳಿಯನ್ನು ಕೈ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಹಿರೇಬೆಣಕಲ್ ಬಳಿ ಸರ್ವೆ ನಂ. 35ರಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಅಣು ಸ್ಥಾವರ ಸ್ಥಾಪನೆ ಮಾಡುತ್ತಿರುವ ಸರಕಾರದ ನಿರ್ಧಾರ ವಿರೋಧಿಸುವಂತೆ ಗ್ರಾಮಗಳ ಜನರಿಗೆ ತಿಳಿ ಹೇಳುವುದಕ್ಕಾಗಿ ಬೈಕ್‌ಗಳ ಮೂಲಕ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಯಾವುದೇ ಕಾರಣಕ್ಕೆ ಸ್ಥಾವರ ಸ್ಥಾಪನೆಗೆಯಾಗಲು ಬಿಡುವುದಿಲ್ಲ ಎಂದು ಚಿಕ್ಕಬೆಣಕಲ್ ನಿವಾಸಿ ಶಿವಾನಂದಗೌಡ ಪೊಲೀಸ್‌ ಪಾಟೀಲ ಹೇಳಿದ್ದಾರೆ.

ಅಣು ಸ್ಥಾವರ ಸ್ಥಾಪನೆ ಬಗ್ಗೆ ಹೇಮಗುಡ್ಡದ ಬಳಿ ರಸ್ತೆ ತಡೆ ಚಳವಳಿ ನಡೆಸುವುದಕ್ಕೆ ಅವಕಾಶ ಇಲ್ಲ. ಕೇವಲ ಹೋರಾಟ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಬಹುದಾಗಿದೆ. ಆದರೂ ಮುಂಜಾಗೃತಾ ಕ್ರಮವಾಗಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ತಿಳಿಸಿದ್ದಾರೆ.ಅಣು ವಿದ್ಯುತ್‌ ಸ್ಥಾವರ ರದ್ದತಿ ಹೋರಾಟಕ್ಕೆ ಪೂರ್ಣ ಬೆಂಬಲ

ಗಂಗಾವತಿ:

ತಾಲೂಕಿನ ಹಿರೇಬೆಣಕಲ್ ವ್ಯಾಪ್ತಿಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಿದ್ಧಪಡಿಸುತ್ತಿರುವುದನ್ನು ವಿರೋಧಿಸಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರ ನೇತೃತ್ವದಲ್ಲಿ ಜ. 4ರಂದು ನಡೆಸಲು ಉದ್ದೇಶಿಸಿರುವ ಹೋರಾಟದ ಜೊತೆಗೆ ಎಲ್ಲ ಸಂಘಟನೆಗಳಿಗೂ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಸಾಮಾಜಿಕ ಹೋರಾಟಗಾರ ಧನರಾಜ್‌ ಈ. ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಘಟನೆಗಳು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಹೋರಾಟ ನಡೆಸುತ್ತಿರುವ ಸಂಘಟನೆಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.