ಕನ್ನಡಪ್ರಭ ವಾರ್ತೆ ಬೆಂಗಳೂರು

ಹೋಟೆಲ್‌ಗಳಲ್ಲಿ ಸಿಲಿಂಡರ್‌ ಹಾಹಾಕಾರ ಗುರುವಾರವೂ ಮುಂದುವರಿದಿದೆ. ನಗರದ ಹಲವು ಹೋಟೆಲ್‌ಗಳು ಅಡುಗೆ ಅನಿಲ ಕೊರತೆಯಿಂದ ಮುಚ್ಚಿದ್ದರೆ, ಮತ್ತಷ್ಟು ಹೋಟೆಲ್‌ಗಳು ಸೌದೆ, ಇಂಡಕ್ಷನ್‌ ಒಲೆ ಸೇರಿದಂತೆ ಪರ್ಯಾಯ ಮೂಲಗಳತ್ತ ಮುಖ ಮಾಡಿವೆ. ಕಾಳಸಂತೆಯಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಖರೀದಿಸಿ ಹೋಟೆಲ್‌ ನಡೆಸಲು ಕೆಲವರು ಮುಂದಾಗಿದ್ದು ಗ್ರಾಹಕರಿಂದ ದುಬಾರಿ ದರ ವಸೂಲಿಗೆ ಇಳಿದಿದ್ದಾರೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ ಸಮಸ್ಯೆ ಬಿಗಡಾಯಿಸಿದ್ದು ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಉಡುಪಿ ಶ್ರೀಕೃಷ್ಣ ರಜತಾದ್ರಿ ಹೋಟೆಲ್‌ ಅನ್ನು ಗುರುವಾರ ಬಂದ್‌ ಮಾಡಲಾಗಿದೆ. ಶ್ರೀರಾಂಪುರದ ಮೆಟ್ರೋ ನಿಲ್ದಾಣದ ಕೆಳಗಿರುವ ಸವಿ ಸಾಗರ್‌ ಗ್ರ್ಯಾಂಡ್‌ ಹೋಟೆಲ್‌ ಅನ್ನೂ ಸಿಲಿಂಡರ್‌ ಅಭಾವದಿಂದ ಮುಚ್ಚಲಾಗಿದೆ. ಇದರಿಂದಾಗಿ ಹೋಟೆಲ್‌ಗಳನ್ನೇ ನಂಬಿಕೊಂಡಿದ್ದ ಗ್ರಾಹಕರು ಪರದಾಡುವಂತಾಗಿದೆ.

ಸಿಲಿಂಡರ್‌ ಕೊರತೆಯಿಂದಾಗಿ ಕೆಲವು ಹೋಟೆಲ್‌ ಮಾಲೀಕರು ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡಿದ್ದು ಸೌಧೆ ಒಲೆ, ಸ್ಟೀಮ್ ಬಾಯ್ಲರ್, ಎಲೆಕ್ಟ್ರಿಕ್ ಸ್ಟೌ, ಇಂಡಕ್ಷನ್ ಮತ್ತಿತರ ಮಾರ್ಗ ಕಂಡುಕೊಂಡಿದ್ದಾರೆ.

ಕಾಳಸಂತೆಯಲ್ಲಿ ಮಾರಾಟ:


ನಗರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಕೊರತೆ ಉಂಟಾಗಿದ್ದರೂ ಗೃಹ ಬಳಕೆಯ ಸಿಲಿಂಡರ್‌ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಗೃಹ ಬಳಕೆಯ ಅನಿಲ ಸಿಲಿಂಡರ್‌ ಸಿಗುತ್ತಿರುವುದರಿಂದ ಕೆಲ ಹೋಟೆಲ್‌ನವರು ಇವುಗಳನ್ನೇ ಹೆಚ್ಚು ಹಣ ತೆತ್ತು ಖರೀದಿಸಿ ಹೋಟೆಲ್‌ ನಡೆಸುತ್ತಿದ್ದಾರೆ. ಬ್ಲ್ಯಾಕ್‌ನಲ್ಲಿ ಖರೀದಿಸಲು ಆಗದಿರುವವರು ಹೋಟೆಲ್‌ಗಳನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದೆ.

ರಾಜ್ಯಾದ್ಯಂತ ಸುಮಾರು 50ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಎಂಪೈರ್‌ ಹೋಟೆಲ್‌ಗೂ ಸಿಲಿಂಡರ್‌ ಪೂರೈಕೆ ಆಗದೆ ತೊಂದರೆ ಉಂಟಾಗಿದೆ. ಇದರಿಂದ ಮೆನು ಕಡಿತಗೊಳಿಸಿದ್ದು ಗ್ರಾಹಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಶುಕ್ರವಾರದಿಂದ ಸೌದೆ ಒಲೆಯಿಂದ ಅಡುಗೆ ಮಾಡಲಾಗುತ್ತದೆ. ಆದರೆ ಗ್ಯಾಸ್‌ ಸಿಲಿಂಡರ್‌ ಸರಬರಾಜಾಗದಿದ್ದರೆ ಮಾಲ್‌ಗಳಲ್ಲಿರುವ ಸ್ಟಾಲ್‌ಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಿಬ್ಬಂದಿ ವಿವರಿಸಿದ್ದಾರೆ.

ಚಾಮರಾಜಪೇಟೆಯ ವಾದಿರಾಜ ಪ್ರತಿಷ್ಠಾನದಲ್ಲಿ ಸಿಲಿಂಡರ್‌ ಸಮಸ್ಯೆಯಿಂದಾಗಿ ಪ್ರಸಾದ ಮತ್ತಿತರ ಕಾರ್ಯಗಳಿಗೆ ಸೌದೆ ಒಲೆಯನ್ನೇ ಬಳಸುವಂತಾಗಿದೆ. ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯ ಹೋಟೆಲ್‌ಗಳಲ್ಲಿ ಸಿಲಿಂಡರ್‌ ಅಭಾವ ಉಂಟಾಗಿದ್ದು ಹೋಟೆಲ್‌ಗಳ ಮುಂದೆ ಶಾಮಿಯಾನ ಹಾಕಿ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿರುವುದು ಕಂಡುಬಂತು.

ನಗರ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಕ್ಯಾಂಟೀನ್‌ನಲ್ಲಿ ಸಿಲಿಂಡರ್‌ ಅಭಾವದಿಂದಾಗಿ ಇಡ್ಲಿ, ವಡೆ, ದೋಸೆ, ಚಪಾತಿ ತಯಾರಿಸುವುದನ್ನು ಕೈಬಿಟ್ಟಿದ್ದು ಕಡಿಮೆ ಅನಿಲ ಬೇಕಾಗುವ ಕಾಫಿ, ಟೀ, ಚಿತ್ರನ್ನ, ಅನ್ನ ಸಾಂಬಾರ್‌ ಮಾತ್ರ ತಯಾರಿಸಲಾಗಿತ್ತು. ‘ನಮಗೆ ದಿನಕ್ಕೆ ಮೂರು ಸಿಲಿಂಡರ್‌ ಬೇಕಾಗಿದ್ದು ಮೂರು ದಿನದಿಂದಲೂ ಸಿಲಿಂಡರ್‌ ಪೂರೈಕೆ ಆಗಿಲ್ಲ. ಆದ್ದರಿಂದ ಮೆನು ಕಡಿತಗೊಳಿಸಲಾಗಿದೆ. ಗ್ಯಾಸ್‌ ಸರಬರಾಜು ಆಗದಿದ್ದರೆ ಹೋಟೆಲ್‌ ಬಂದ್‌ ಮಾಡಬೇಕಾಗುತ್ತದೆ’ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದರು.

ಸಂಜೆ ಬಳಿಕ ಗ್ಯಾಸ್‌ ಬುಕ್‌ ಮಾಡಿ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗೆ ಅಭಾವ ಉಂಟಾಗಿರುವುದರಿಂದ ಆತಂಕಕ್ಕೆ ಒಳಗಾದ ಜನರು ಮಾಮೂಲಿಗಿಂತ ಮೂರ್ನಾಲ್ಕು ಪಟ್ಟು ಅಧಿಕವಾಗಿ ಗೃಹ ಬಳಕೆ ಸಿಲಿಂಡರ್‌ ಬುಕ್‌ ಮಾಡಲು ಮುಗಿಬಿದ್ದಿದ್ದಾರೆ. ಇದರಿಂದ ಸರ್ವರ್‌ ಸಮಸ್ಯೆ ಉಂಟಾಗಿದ್ದು ಸಂಜೆ ಬಳಿಕ ಬುಕ್‌ ಮಾಡುವಂತೆ ಗ್ಯಾಸ್‌ ಏಜೆನ್ಸಿಯವರು ಸೂಚನೆ ನೀಡುತ್ತಿದ್ದಾರೆ.ಈ ಬಗ್ಗೆ ಜನರಿಗೆ ಮಾಹಿತಿ ನೀಡಿರುವ ಶ್ರೀರಾಂಪುರದ ಜ್ಯೋತಿ ಏಜೆನ್ಸಿ, ಗ್ಯಾಸ್‌ ಬುಕ್‌ ಮಾಡುವವರ ಸಂಖ್ಯೆಯಲ್ಲಿ ಏಕಾಏಕಿ ಮೂರು ಪಟ್ಟು ಹೆಚ್ಚಳ ಆಗಿರುವುದರಿಂದ ಸರ್ವರ್‌ ಸಮಸ್ಯೆ ಉಂಟಾಗುತ್ತಿದೆ. ಸಂಜೆ 6 ಗಂಟೆಯ ಬಳಿಕ ಬುಕ್‌ ಮಾಡಿದರೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಪ್ರಕಟಣೆ ಹೊರಡಿಸಿ ಗ್ರಾಹಕರಿಗೆ ಸ್ಪಷ್ಟನೆ ನೀಡಿದೆ.

ಪ್ರತಿಭಟನೆಗೂ ತಟ್ಟಿದ ಬಿಸಿ

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆ ಮಾಡಲು ಸಿಲಿಂಡರ್‌ ಅಭಾವ ಉಂಟಾಯಿತು. ಕೊನೆಗೆ ಸೌದೆ ಒಲೆಯಲ್ಲೇ ಭೋಜನವನ್ನು ತಯಾರಿಸಿ ನೀಡಲಾಯಿತು.