ಸಂಘರ್ಷಪೀಡಿತ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಒಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕ ಡಾ. ಮೊತಲೆಬ್‌ ಶಿಕ್ದರ್ ಮೇಲೆ ಅಪರಿಚಿತರು ಸೋಮವಾರ ಗುಂಡಿನ ದಾಳಿ ನಡಸಿದ್ದಾರೆ. ತೀವ್ರವಾಗಿ ಗಾಯಗೊಂಡ ಶಿಕ್ದರ್‌ನನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

-ಒಸ್ಮಾನ್‌ ಹದಿ ಹತ್ಯೆ ಬೆನ್ನಲ್ಲೇ ಮತ್ತೊಂದು ದುಷ್ಕೃತ್ಯ

- ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಭೀತಿ

ಢಾಕಾ: ಸಂಘರ್ಷಪೀಡಿತ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಒಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕ ಡಾ. ಮೊತಲೆಬ್‌ ಶಿಕ್ದರ್ ಮೇಲೆ ಅಪರಿಚಿತರು ಸೋಮವಾರ ಗುಂಡಿನ ದಾಳಿ ನಡಸಿದ್ದಾರೆ. ತೀವ್ರವಾಗಿ ಗಾಯಗೊಂಡ ಶಿಕ್ದರ್‌ನನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಶಿಕ್ದರ್ (42) ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ಖುಲ್ನಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ದುಷ್ಕರ್ಮಿಗಳು ನೇರವಾಗಿ ತಲೆಗೆ ಗುರಿಯಿಟ್ಟು ಗುಂಡಿನ ದಾಳಿ ನಡೆಸಿದ್ದಾರೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವರ್ಷ ಜೆನ್‌ ಝೀ ದಂಗೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಆತಂಕ ಎದುರಾಗಿದೆ.

ಭಾರತ ವಿರೋಧಿ ಉಸ್ಮಾನ್‌ ಹದಿಯ ಮೇಲೆ ಡಿ.12ರಂದು ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಹದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ಈ ಘಟನೆ ದೇಶವ್ಯಾಪಿ ಮತ್ತೆ ಹಿಂಸಾಚಾರಕ್ಕೆ ಕಾರಣವಾಗಿತ್ತು. ಜೊತೆಗೆ ಭಾರತ ವಿರೋಧಿ ಪ್ರತಿಭಟನೆಗೂ ಕಾರಣವಾಗಿ ಹೊರಹೊಮ್ಮಿತ್ತು.