- ಆನ್ಲೈನ್ ಗೇಮ್‌ಗೆ ಕಡಿವಾಣ, ಬೆಟ್ಟಿಂಗ್ ಆ್ಯಪ್ ನಿಷೇಧ
- ಇಂದೇ ಸಂಸತ್ತಲ್ಲಿ ಮಸೂದೆ ಮಂಡನೆ ಸಾಧ್ಯತೆ---- ಬೆಟ್ಟಿಂಗ್ ಆ್ಯಪ್ ಜನರಿಗೆ ಮಾರಕ, ಯುವಕರ ಬಾಳು ಹಾಳು ಎಂಬ ಸತತ ದೂರು
- ಇದರ ವಿರುದ್ಧ ಜನರ ನಿರಂತರ ಅಭಿಯಾನದ ಕಾರಣ ಎಚ್ಚೆತ್ತ ಕೇಂದ್ರ ಸರ್ಕಾರ- ಬೆಟ್ಟಿಂಗ್ ಆ್ಯಪ್ ಪರ ಖ್ಯಾತನಾಮರ ಪ್ರಚಾರಕ್ಕೆ ನಿಷೇಧ ಹೇರಲು ನಿರ್ಧಾರ
- ಆನ್‌ಲೈನ್ ರಿಯಲ್ ಮನಿ ಗೇಮ್‌ಗಳ ಮೇಲೂ ನಿರ್ಬಂಧ ಹಾಕಲು ಸಿದ್ಧತೆ- ಮಕ್ಕಳಿಂದ ಇಂಥ ಅನಧಿಕೃತ ಆ್ಯಪ್ ಬಳಕೆಗೂ ಕಡಿವಾಣಕ್ಕೆ ಹಲವು ಕ್ರಮ
==ನವದೆಹಲಿ: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೇಲೆ ಮತ್ತಷ್ಟು ಕಠಿಣ ನಿರ್ಬಂಧ ಹೇರುವ, ಆನ್‌ಲೈನ್ ಬೆಟ್ಟಿಂಗ್ ಮತ್ತು ರಿಯಲ್ ಮನಿ ಗೇಮ್ ನಿಷೇಧಿಸಿ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವ ಮಹತ್ವದ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಕರಡು ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಅನಧಿಕೃತ ಬೆಟ್ಟಿಂಗ್‌ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ವಿಧಿಸಲಾಗುತ್ತದೆ. ಇದನ್ನು ಬುಧವಾರವೇ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಇದೇ ವೇಳೆ, ಇಂಥ ಬೆಟ್ಟಿಂಗ್ ಆ್ಯಪ್‌ಗಳ ಪರ ಪ್ರಚಾರವನ್ನೂ ನಿರ್ಬಂಧಿಸಲಾಗಿದ್ದು ಅದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್‌ಗಳಿಂದ ಭಾರೀ ಅಕ್ರಮ, ಭ್ರಷ್ಟಾಚಾರದ ಆರೋಪ. ಮಕ್ಕಳು ಮತ್ತು ಯುವಸಮೂಹ ಇದಕ್ಕೆ ಭಾರೀ ಪ್ರಮಾಣದಲ್ಲಿ ದಾಸರಾಗುತ್ತಿರುವ ಕಳವಳಕಾರಿ ಬೆಳವಣಿಗೆ ನಡುವೆಯೇ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಮಸೂದೆಯಲ್ಲಿನ ಇನ್ನೊಂದು ಮಹತ್ವದ ಅಂಶಗಳೆಂದರೆ ಇಂಥ ಆ್ಯಪ್‌ಗಳ ಕುರಿತು ಜಾಲತಾಣ ಪ್ರಭಾವಿಗಳು ಅಥವಾ ಗಣ್ಯರು ಪ್ರಚಾರ ಮಾಡುವುದನ್ನು ನಿಷೇಧಿಸಲಾಗುವುದು. ಅಲ್ಲದೆ ಮಕ್ಕಳು ಇಂಥ ಆ್ಯಪ್ ಬಳಕೆ ಮಾಡುವುದರ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೊಸ ಮಸೂದೆ ಒಳಗೊಂಡಿದೆ.ಕಡಿವಾಣ ಏಕೆ?:
2024ರಲ್ಲಿನ ಆನ್‌ಲೈನ್ ಗೇಮಿಂಗ್‌ನ ಗಾತ್ರ 32 ಸಾವಿರ ಕೋಟಿ ರು.ನಷ್ಟು ಇದ್ದು, 2029ರ ಹೊತ್ತಿಗೆ ಇದು 79 ಸಾವಿರ ಕೋಟಿ ರು.ನಷ್ಟು ಬೆಳೆಯುವ ನಿರೀಕ್ಷೆಯಿದೆ. ಜೊತೆಗೆ ಇಂಥ ಆ್ಯಪ್‌ಗಳು ಭಾರೀ ಪ್ರಮಾಣದ ಅಕ್ರಮದಲ್ಲಿ ತೊಡಗಿವೆ, ದೊಡ್ಡ ಜನಸಮೂಹ ಇದಕ್ಕೆ ದಾಸವಾಗಿವೆ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಇವುಗಳ ನಿರ್ವಹಣೆ ಮಾಡುತ್ತಿರುವ ಸಾಗರೋತ್ತರ ಕಂಪನಿಗಳು ನಿಯಮ ಉಲ್ಲಂಘನೆ ಮಾಡುತ್ತಿವೆ. ಆನ್‌ಲೈನ್ ಗೇಮ್‌ಗಳನ್ನು ಸುರಕ್ಷಿತ ಮಾಡುವ ನಿಟ್ಟಿನಲ್ಲಿ ಮತ್ತು ಇವುಗಳ ನಿಯಂತ್ರಣಕ್ಕೆ ರಾಜ್ಯಗಳಲ್ಲಿ ಸೂಕ್ತ ಕಾಯ್ದೆಗಳು ಇಲ್ಲದೇ ಇರುವ ಕಾರಣ ಕೇಂದ್ರ ಸರ್ಕಾರ ಕಠಿಣ ಕಾಯ್ದೆ ಜಾರಿಗೆ ಮುಂದಾಗಿದೆ.