ಒಂದು ದೇಶ- ಒಂದು ಚುನಾವಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಅನುಮೋದನೆ

KannadaprabhaNewsNetwork |  
Published : Dec 13, 2024, 12:49 AM ISTUpdated : Dec 13, 2024, 04:21 AM IST
ಸಂಸತ್‌ | Kannada Prabha

ಸಾರಾಂಶ

ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ನಡೆಸಲು ನಾಂದಿ ಹಾಡುವ ‘ಏಕ ದೇಶ-ಏಕ ಚುನಾವಣೆ’ ಮಸೂದೆಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

  ನವದೆಹಲಿ : ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ನಡೆಸಲು ನಾಂದಿ ಹಾಡುವ ‘ಏಕ ದೇಶ-ಏಕ ಚುನಾವಣೆ’ ಮಸೂದೆಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಆದರೆ ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಅಂಗೀಕರಿಸುವ ಉದ್ದೇಶವಿರುವ ಕಾರಣ ತಕ್ಷಣ ಇದನ್ನು ಅಂಗೀಕರಿಸುವುದಿಲ್ಲ. ಬದಲಾಗಿ, ವಕ್ಫ್‌ ತಿದ್ದುಪಡಿ ಮಸೂದೆಯಂತೆಯೇ ಇದನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸಿ ಅಲ್ಲಿ ಸರ್ವಸಮ್ಮತಿ ಪಡೆಯಲು ಯತ್ನಿಸಲಾಗುತ್ತದೆ. ರಾಜ್ಯಗಳ ವಿಧಾನಸಭೆ ಸ್ಪೀಕರ್‌ಗಳು, ಜನಪ್ರತಿನಧಿಗಳು, ಬುದ್ಧಿಜೀವಿಗಳು, ತಜ್ಞರು ಮತ್ತು ನಾಗರಿಕ ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನೂ ಆಲಿಸುವ ಉದ್ದೇಶ ಸರ್ಕಾರಕ್ಕೆಇದೆ ಎಂದು ಮೂಲಗಳು ಹೇಳಿವೆ.

ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭೆ, ವಿಧಾನಸಭೆ ಒಟ್ಟಿಗೇ ನಡೆಸುವ ಅಂಶವನ್ನು ಮಸೂದೆಯಿಂದ ಸದ್ಯ ಮಟ್ಟಿಗೆ ಹೊರಗಿಡಲಾಗಿದೆ ಎಂದು ಮೂಲಗಳು ಹೇಳಿವೆ.

ಏಕೆ ಏಕ-ದೇಶ ಏಕ ಚುನಾವಣೆ?:

ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಏಕಕಾಲಕ್ಕೆ ಎಲ್ಲ ಚುನಾವಣೆ ನಡೆಸುವುದು ಕೂಡ ಒಂದಾಗಿತ್ತು. ಪದೇ ಪದೇ ಚುನಾವಣೆ ನಡೆಯುವ ಕಾರಣ ಎದುರಾಗುವ ನೀತಿ ಸಂಹಿತೆಗಳಿಂದ ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಹಾಗೂ ನಿರಂತರ ಚುನಾವಣೆಗಳಿಂದ ಅನಗತ್ಯ ಖರ್ಚಾಗುತ್ತದೆ. ಒಟ್ಟಿಗೇ ಚುನಾವಣೆ ನಡೆದರೆ ಖರ್ಚು ತಗ್ಗುತ್ತದೆ ಎಂಬ ಕಾರಣಕ್ಕೆ ಏಕ ಚುನಾವಣೆ ಅಗತ್ಯ ಎಂದು ಬಿಜೆಪಿ ಒತ್ತಿ ಹೇಳಿತ್ತು.

ಈ ಬಗ್ಗೆ ಅಧ್ಯಯನಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿತ್ತು. ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ಸಮಿತಿ ಸೂಚಿಸಿತ್ತು. ಬಳಿಕ ಈ ವರದಿಯನ್ನು ಸ್ವೀಕರಿಸಿ ಸಂಪುಟದಲ್ಲಿ ವರದಿಗೆ ಅನುಮೋದನೆಯನ್ನೂ ನೀಡಲಾಗಿತ್ತು. ಈಗ ಇದನ್ನುಕೆಲವು ಬದಲಾವಣೆಯೊಂದಿಗೆ ಮಸೂದೆ ರೂಪದಲ್ಲಿ ಅಂಗೀಕರಿಸಲಾಗಿದೆ.

ವಿಪಕ್ಷಗಳ ವಿರೋಧ:

ಏಕ ದೇಶ-ಏಕ ಚುನಾವಣೆಗೆ ಕಾಂಗ್ರೆಸ್‌ ಸೇರಿ ಹಲವಾರು ಇಂಡಿಯಾ ಬ್ಲಾಕ್ ಪಕ್ಷಗಳಿಂದ ವಿರೋಧವಿದ್ದು, ‘ಇದು ಕೇಂದ್ರದಲ್ಲಿ ಆಡಳಿತಾರೂಢ ಪಕ್ಷಕ್ಕೆ ಲಾಭ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕಲು ಹೀಗೆ ಮಾಡಲಾಗುತ್ತಿದೆ. ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲೂ ಹೀಗೆ ಮಾಡಲಾಗುತ್ತಿದೆ’ ಎಂದು ಆರೋಪಿಸಿವೆ ಆದರೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಿರಾಗ್ ಪಾಸ್ವಾನ್‌ನಂತಹ ಪ್ರಮುಖ ಎನ್‌ಡಿಎ ಮಿತ್ರಪಕ್ಷಗಳು ಏಕಕಾಲದ ಚುನಾವಣೆಯನ್ನು ಬೆಂಬಲಿಸಿವೆ. 

ಕೋವಿಂದ್‌ ವರದಿಯಲ್ಲೇನಿತ್ತು?:

ಕೋವಿಂದ್ ನೇತೃತ್ವದ ಸಮಿತಿಯು ತನ್ನ 18,626 ಪುಟಗಳ ವರದಿಯಲ್ಲಿ ಈ ಕ್ರಮವನ್ನು 2 ಹಂತಗಳಲ್ಲಿ ಜಾರಿಗೆ ತರಲು ಸೂಚಿಸಿತ್ತು. ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ಸೂಚಿಸಿತ್ತು.

ಇದಾದ ನಂತರ ಮುಂದಿನ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯಗಳ ಚುನಾವಣೆಗಳೊಂದಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆಗಳ ಚುನಾವಣೆಗಳನ್ನು ನಡೆಸಬೇಕು ಎಂದೂ ಹೇಳಿತ್ತು.ಒಂದು ರಾಷ್ಟ್ರ ಒಂದು ಚುನಾವಣೆಗೆ 18 ಸಾಂವಿಧಾನಿಕ ತಿದ್ದುಪಡಿಗಳನ್ನು ಸಮಿತಿಯು ಶಿಫಾರಸು ಮಾಡಿದೆ. ಅಲ್ಲದೆ ದೇಶದ ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಇದಕ್ಕೆ ಅನುಮೋದನೆ ನೀಡಬೇಕು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜನನಾಯಗನ್‌ಗೆ ಸಿಹಿ-ಕಹಿ!
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ