‘ಮನಿ’ಸು ಶಮನಕ್ಕೆ ಹೈಕಮಾಂಡ್‌ ಪ್ರವೇಶ । ಉಸ್ತುವಾರಿ ಇಂದು ಬೆಂಗಳೂರಿಗೆ

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 06:02 AM IST
ಸುರ್ಜೇವಾಲ  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

 ಬೆಂಗಳೂರು :  ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸತತ ಮೂರು ದಿನಗಳ ಕಾಲ 42 ಮಂದಿ ಕಾಂಗ್ರೆಸ್‌ ಶಾಸಕರೊಂದಿಗೆ ಮುಖಾಮುಖಿ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರಾದ ಬಿ.ಆರ್‌. ಪಾಟೀಲ್‌ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯದ ಬಗ್ಗೆ ಮಾಡಿರುವ ಬಹಿರಂಗ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಜತೆಗೆ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30ರಿಂದ (ಸೋಮವಾರ) ಜು.2ರವರೆಗೆ (ಬುಧವಾರ) ಮೂರು ದಿನಗಳ ಕಾಲ ಬೆಂಗಳೂರು ವಿಭಾಗದ 27 ಮಂದಿ, ಮೈಸೂರು ವಿಭಾಗದ 13 ಮಂದಿ ಶಾಸಕರೊಂದಿಗೆ ಮೊದಲ ಹಂತದಲ್ಲಿ ‘ಒನ್‌ ಟು ಒನ್’ ಸಭೆ ನಡೆಸಲಿದ್ದಾರೆ.

ಇದಕ್ಕೂ ಮೊದಲು ಆಡಳಿತ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಶಾಸಕ ರಾಜು ಕಾಗೆ ಹಾಗೂ ಬಿ.ಆರ್‌. ಪಾಟೀಲ್‌ ಅವರೊಂದಿಗೆ ಪ್ರತ್ಯೇಕವಾಗಿ ತಲಾ ಅರ್ಧಗಂಟೆ ವಿಶೇಷ ಚರ್ಚೆ ನಡೆಸಿ ಮನವೊಲಿಕೆ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ.

ವಸತಿ ಇಲಾಖೆಯಲ್ಲಿ ಮನೆ ಹಂಚಿಕೆ ವಿಚಾರವಾಗಿ ಅವ್ಯವಹಾರ ನಡೆಯುತ್ತಿದೆ ಎಂದು ಶಾಸಕ ಬಿ.ಆರ್‌. ಪಾಟೀಲ್‌ ಹೇಳಿದ್ದರು. ಬೆನ್ನಲ್ಲೇ ಮತ್ತೊಬ್ಬ ಶಾಸಕ ರಾಜು ಕಾಗೆ ಅವರು, ‘ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ’ ಎಂದು ರಾಜೀನಾಮೆ ಬಾಂಬ್‌ ಸಿಡಿಸಿದ್ದರು.

ಸೋಮವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಸುರ್ಜೇವಾಲಾ ಅವರು ಮೊದಲು ಅತೃಪ್ತರಾದ ಇಬ್ಬರೂ ಶಾಸಕರೊಂದಿಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬಿ.ಆರ್‌. ಪಾಟೀಲ್‌ ಹಾಗೂ ಬಳಿಕ ಮಧ್ಯಾಹ್ನ 2 ಗಂಟೆಯಿಂದ ಅರ್ಧ ಗಂಟೆ ಕಾಲ ರಾಜು ಕಾಗೆ ಅವರೊಂದಿಗೆ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ. ಏನೇ ವಿಚಾರವಿದ್ದರೂ ಬಹಿರಂಗ ಹೇಳಿಕೆ ನೀಡದೆ ಪಕ್ಷದ ವೇದಿಕೆಯಲ್ಲಿ ತಿಳಿಸುವಂತೆ ಸಲಹೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

42 ಶಾಸಕರೊಂದಿಗೆ ಒನ್‌ ಟು ಒನ್‌ ಚರ್ಚೆ:

ಮೊದಲ ದಿನ ರಾಜು ಕಾಗೆ, ಬಿ.ಆರ್‌. ಪಾಟೀಲ್‌ ಜತೆ ಚರ್ಚೆಯ ಬಳಿಕ ಪುಟ್ಟಸ್ವಾಮಿಗೌಡ, ಎಸ್‌.ಎನ್‌. ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್‌, ರೂಪಕಲಾ ಶಶಿಧರ್, ಎಸ್‌.ಎನ್‌. ನಾರಾಯಣಸ್ವಾಮಿ, ಕೊತ್ತೂರು ಜಿ. ಮಂಜುನಾಥ್ ಅವರೊಂದಿಗೆ ಮಾತನಾಡಲಿದ್ದಾರೆ. ಬಳಿಕ ಜು.1 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ಗಂಟೆವರೆಗೆ, ಜು.2 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ಬೆಂಗಳೂರು ವಿಭಾಗದ ಒಟ್ಟು 27 ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.

ಬಹಿರಂಗ ಚರ್ಚೆಗೆ ಬ್ರೇಕ್‌ ಸಾಧ್ಯತೆ:

ಶಾಸಕರೊಂದಿಗೆ ಮುಖಾಮುಖಿ ಚರ್ಚೆ ವೇಳೆ ಕಾಂಗ್ರೆಸ್‌ ಶಾಸಕರು ಹಾಗೂ ಕಾಂಗ್ರೆಸ್ಸನ್ನು ಬೆಂಬಲಿಸಿರುವ ಶಾಸಕರ ಅಹವಾಲು ಹಾಗೂ ದೂರುಗಳನ್ನು ಆಲಿಸಲಿದ್ದಾರೆ.

ಈ ವೇಳೆ ಶಾಸಕರಿಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡುವ ಸಾಧ್ಯತೆಯಿದೆ. ಸರ್ಕಾರದ ಬಗ್ಗೆ ಬಹಿರಂಗವಾಗಿ ಮಾತನಾಡಿ ಬಿಜೆಪಿಗೆ ಅಸ್ತ್ರ ನೀಡಬೇಡಿ. ಸರ್ಕಾರ ಗ್ಯಾರಂಟಿ ಅನುಷ್ಠಾನ ಸೇರಿದಂತೆ ಉತ್ತಮ ಕೆಲಸ ಮಾಡುತ್ತಿದೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಹೋಗೋಣ. ಹೀಗಾಗಿ ಏನೇ ಸಮಸ್ಯೆಯಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಿ. ನಕಾರಾತ್ಮಕ ವಿಷಯಗಳು ಚರ್ಚೆಗೆ ಬಂದು ಸರ್ಕಾರದ ಸಾಧನೆಗಳು ನೇಪಥ್ಯಕ್ಕೆ ಸರಿಯುವಂತೆ ಮಾಡಬೇಡಿ ಎಂದು ಕಿವಿ ಮಾತು ಹೇಳುವ ಸಾಧ್ಯತೆಯಿದೆ.

ಯಾರ್‍ಯಾರ ಜತೆ ಮಾತುಕತೆ?

ಬಿ.ಆರ್‌. ಪಾಟೀಲ್‌ (ಆಳಂದ), ರಾಜು ಕಾಗೆ (ಕಾಗವಾಡ), ಪುಟ್ಟಸ್ವಾಮಿಗೌಡ (ಗೌರಿಬಿದನೂರು), ಎಸ್‌.ಎನ್‌. ಸುಬ್ಬಾರೆಡ್ಡಿ (ಬಾಗೇಪಲ್ಲಿ), ಪ್ರದೀಪ್‌ ಈಶ್ವರ್‌ (ಚಿಕ್ಕಬಳ್ಳಾಪುರ), ರೂಪಕಲಾ ಶಶಿಧರ್‌ (ಕೆಜಿಎಫ್‌), ಎಸ್‌.ಎನ್‌. ನಾರಾಯಣಸ್ವಾಮಿ (ಬಂಗಾರಪೇಟೆ), ಕೊತ್ತೂರು ಮಂಜುನಾಥ್‌ (ಕೋಲಾರ) ಸೇರಿ 42 ಮಂದಿ ಶಾಸಕರು.

ನಿಗದಿತ ಸಮಯಕ್ಕೆ ಬಂದು ಭೇಟಿ ಮಾಡಿ: ಡಿಕೆಶಿ ಪತ್ರ

ಸೋಮವಾರದ ಸಭೆ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶಾಸಕರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ಎಐಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಭಾರತ್‌ ಜೋಡೋ ಭವನದಲ್ಲಿ ನಿಮ್ಮೊಂದಿಗೆ ನಿಮ್ಮ ಕ್ಷೇತ್ರ, ಪಕ್ಷ ಸಂಘಟನೆ, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಒಬ್ಬೊಬ್ಬರಿಗೂ ನಿಗದಿ ಮಾಡಿರುವ ವೈಯಕ್ತಿಕ ಭೇಟಿ ಸಮಯದಲ್ಲಿ ಭಾರತ್‌ ಜೋಡೋ ಭವನಕ್ಕೆ ಬಂದು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಎಂದು ಸೂಚನೆ ನೀಡಿದ್ದಾರೆ.

PREV
Read more Articles on

Recommended Stories

- ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್‌.ಸಂತೋಷ್‌ ಬಗ್ಗೆ ಅವಹೇಳನ ಪ್ರಕರಣಬುರುಡೆ ಕೇಸ್‌ ತಿಮರೋರಿ ಅರೆಸ್ಟ್‌- ಪೊಲೀಸರ ಜತೆಗೆ ಬೆಂಬಲಿಗರ ತೀವ್ರ ವಾಗ್ವಾದ । ಉಜಿರೆಯ ಮನೆಯಲ್ಲಿ ಹೈಡ್ರಾಮಾ- ಎಎಸ್ಪಿ ಕಾರಿಗೆ ವಾಹನ ಡಿಕ್ಕಿ: 3 ಜನ ಬಂಧನ । ತಿಮರೋಡಿ 14 ದಿನ ನ್ಯಾಯಾಂಗ ವಶ
ಬಂಧನದಿಂದ ಯೂಟ್ಯೂಬರ್‌ಸಮೀರ್‌ ಸ್ವಲ್ಪದರಲ್ಲೇ ಪಾರು- ಎಐ ವಿಡಿಯೋ ಬಳಸಿ ಆಕ್ಷೇಪಾರ್ಹ ವರದಿ ಪ್ರಕರಣ- ಪೊಲೀಸರಿಂದ ತಲಾಶ್‌ । ಅಷ್ಟರಲ್ಲಿ ಕೋರ್ಟ್‌ ಬೇಲ್‌