ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೂಡಿಕೆದಾರರಿಗೆ ‘ಕ್ಯಾಪಿಟಲ್‌ ಗೇನ್‌’ ಏರಿಸಿ, ಬಿಸಿ

KannadaprabhaNewsNetwork |  
Published : Jul 24, 2024, 12:17 AM ISTUpdated : Jul 24, 2024, 08:01 AM IST
ಹೂಡಿಕೆದಾರರು | Kannada Prabha

ಸಾರಾಂಶ

ಹೂಡಿಕೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಏರಿಸಿ, ಬಿಸಿ ಮುಟ್ಟಿಸಿದ್ದಾರೆ. ಈ ಕ್ರಮ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ.

ನವದೆಹಲಿ :  ಹೂಡಿಕೆದಾರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಏರಿಸಿ, ಬಿಸಿ ಮುಟ್ಟಿಸಿದ್ದಾರೆ. ಈ ಕ್ರಮ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ.

ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ, ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಲಾಗಿದೆ. ಇದರ ನಡುವೆ, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕ್ಯಾಪಿಟಲ್‌ ಗೇನ್‌ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರು.ನಿಂದ 1.25 ಲಕ್ಷ ರು.ವರೆಗೂ ಏರಿಕೆ ಮಾಡಲಾಗಿದೆ. ಕ್ಯಾಪಿಟಲ್‌ ಗೇನ್‌ ತೆರಿಗೆ ಹೆಚ್ಚಳ ಘೋಷಣೆ ಹೊರಬೀಳುತ್ತಿದ್ದಂತೆ 1000 ಅಂಕಗಳವರೆಗೂ ಕುಸಿತ ಕಂಡ ಷೇರು ಸೂಚ್ಯಂಕ ಸೆನ್ಸೆಕ್ಸ್‌, ಬೇರೆ ಘೋಷಣೆಗಳ ಬಳಿಕ ಚೇತರಿಸಿಕೊಂಡಿದೆ.

ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್ ಹೆಚ್ಚಳದಿಂದಾಗಿ ಹೂಡಿಕೆದಾರರು ಚಿನ್ನ ಹಾಗೂ ರಿಯಲ್‌ ಎಸ್ಟೇಟ್‌ನಂತಹ ಆಸ್ತಿಗಳತ್ತ ಆಕರ್ಷಿತರಾಗುವ ಸಾಧ್ಯತೆ ಇದೆ ಎಂದು ಷೇರು ಹೂಡಿಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ನಿರ್ದಿಷ್ಟ ಹಣಕಾಸು ಸ್ವತ್ತುಗಳ ಮೇಲಿನ ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ದರವನ್ನು ಶೇ.15ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗಿದೆ. ಹಣಕಾಸೇತರ ಸ್ವತ್ತುಗಳಿಗೆ ಸೂಕ್ತ ದರ ಅನ್ವಯವಾಗಲಿದೆ. ಎಲ್ಲ ಹಣಕಾಸು ಹಾಗೂ ಹಣಕಾಸೇತರ ಸ್ವತ್ತುಗಳ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಏರಿಕೆ ಮಾಡಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ನಿರ್ಮಲಾ ತಿಳಿಸಿದ್ದಾರೆ.

ಯಾವುದು ಅಲ್ಪಾವಧಿ? ಯಾವುದು ದೀರ್ಘಾವಧಿ?:

ನೋಂದಾಯಿತ ಹಣಕಾಸು ಸ್ವತ್ತುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು, ನೋಂದಾಯಿತವಲ್ಲದ ಹಣಕಾಸು ಸ್ವತ್ತುಗಳು ಹಾಗೂ ಎಲ್ಲ ಹಣಕಾಸೇತರ ಸ್ವತ್ತುಗಳನ್ನು ಕನಿಷ್ಠ 2 ವರ್ಷಗಳ ಕಾಲ ಹೊಂದಿದ್ದರೆ ಅಂತಹ ಸ್ವತ್ತುಗಳನ್ನು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಷೇರುಗಳನ್ನು 12 ತಿಂಗಳ ಬಳಿಕ ಮಾರಾಟ ಮಾಡಿದರೆ ಅದಕ್ಕೆ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಪಾವತಿಸಬೇಕಾಗುತ್ತದೆ.ನೋಂದಾಯಿತ ಹಣಕಾಸು ಸ್ವತ್ತುಗಳನ್ನು ಒಂದು ವರ್ಷದೊಳಗೆ, ನೋಂದಾಯಿತವಲ್ಲದ ಹಣಕಾಸು ಸ್ವತ್ತುಗಳು ಹಾಗೂ ಎಲ್ಲ ಹಣಕಾಸೇತರ ಸ್ವತ್ತುಗಳನ್ನು 2 ವರ್ಷದೊಳಗೆ ಮಾರಾಟ ಮಾಡಿದರೆ ಅಂತಹ ಸ್ವತ್ತುಗಳನ್ನು ಅಲ್ಪಾವಧಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಷೇರುಗಳನ್ನು 12 ತಿಂಗಳ ಒಳಗೆ ಮಾರಿದರೆ ಅದಕ್ಕೆ ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಕಟ್ಟಬೇಕಾಗುತ್ತದೆ.

ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಬದಲಿನಿಂದ ಹೆಚ್ಚುವರಿ 15000 ಕೋಟಿ ರು.ಆದಾಯ

ಕ್ಯಾಪಿಟಲ್‌ ಗೇನ್ಸ್‌ ತೆರಿಗೆ ನೀತಿಯಲ್ಲಿ ಮಾಡಲಾದ ಬದಲಾವಣೆಯ ಪ್ರಸ್ತಾಪದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 15000 ಕೋಟಿ ರು. ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.ಮಂಗಳವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಅಲ್ಪಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಶೇ.15ರಿಂದ ಶೇ.20ಕ್ಕೆ ಹೆಚ್ಚಳ ಮಾಡುವ ಮತ್ತು ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆ ಶೇ.10ರಿಂದ ಶೇ.12.5ಕ್ಕೇರಿಕೆ ಮಾಡುವ ಘೋಷಣೆ ಮಾಡಲಾಗಿದೆ. ಈ ಸಣ್ಣ ಬದಲಾವಣೆಯಿಂದಲೇ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ 15000 ಕೋಟಿ ರು.ಸಂಗ್ರಹದ ನಿರೀಕ್ಷೆ ಇದೆ ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಂಧ್ರದಲ್ಲಿ 3ನೇ ಮಗು ಹೆತ್ತರೆ ₹25,000 ಪ್ರೋತ್ಸಾಹ ಧನ!
ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!