ತಿರುವನಂತಪುರ: ದೇಶದ ಜನತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡಿಕ್ಕಬಹುದು ಎಂದು ಕೇರಳದ ಬಿಜೆಪಿ ನಾಯಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಈ ಬಗ್ಗೆ ಕಾಂಗ್ರೆಸ್ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಮುಖೇನ ದೂರಿದ್ದಾರೆ.
ಪ್ರಿಂಟು ಹೇಳಿದ್ದೇನು?
ಬಾಂಗ್ಲಾ, ನೇಪಾಳದಲ್ಲಿ ನಡೆದ ಜೆನ್ ಝೀ ಪ್ರತಿಭಟನೆ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ವಕ್ತಾರ ಮಹಾದೇವನ್ ‘ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾ ಗಿರುವುದರಿಂದ ಅಂತಹ ಪರಿಸ್ಥಿತಿ ಬರುವುದಿಲ್ಲ. ಭಾರತೀಯರು ನರೇಂದ್ರ ಮೋದಿಯವರ ಪರವಾಗಿ ನಿಂತಿದ್ದಾರೆ. ರಾಹುಲ್ ಗಾಂಧಿ ಅಂತಹ ಸನ್ನಿವೇಶ ಸೃಷ್ಟಿಯಾಗಬೇಕು ಎಂದು ಬಯಸಿದರೆ ಗುಂಡುಗಳು ಅವರ ಎದೆಗೆ ಚುಚ್ಚಬಹುದು’ ಎಂದಿದ್ದರು.
ಕಾಂಗ್ರೆಸ್ ಕಿಡಿ: ಮಹಾದೇವನ್ ಹೇಳಿಕೆ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್, ‘ಬಿಜೆಪಿ ಎಲ್ಲಾ ಮಿತಿಗಳನ್ನು ಮೀರಿದೆ. ನ್ಯಾಯಕ್ಕಾಗಿ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನ ಜತೆ ನಿಲ್ಲುವ ನಾಯಕನಿಗೆ ಕೊಲೆ ಬೆದರಿಕೆ ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಈ ಸಂಬಂಧ ಕೇರಳ ಕಾಂಗ್ರೆಸ್ ಮಹಾದೇವನ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಮಿತ್ ಶಾಗೆ ಪತ್ರ:
ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.‘ ಪ್ರಿಂಟೋ ಹೇಳಿಕೆ ಬಾಯಿ ತಪ್ಪಿನಿಂದ ಬಂದಿರುವುದಲ್ಲ, ಅಜಾಗರೂಕತೆಯೂ ಅಲ್ಲ. ವಕ್ತಾರರು ಇಂತಹ ಮಾತುಗಳನ್ನು ಆಡಿರುವುದರಿಂದ ರಾಹುಲ್ ಗಾಂಧಿ ಅವರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತದೆ’ ಎಂದಿದ್ದಾರೆ.