ಅಮರಾವತಿ (ಆಂಧ್ರ) : ‘ಆಂಧ್ರ ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ವರ್ಗಾಯಿಸುವ ವಿರುದ್ಧ ಅಮರಾವತಿ ರೈತರು ನಡೆಸಿದ ಹೋರಾಟದ ಪರ ಅನುಕಂಪ ಹೊಂದಿದ್ದಕ್ಕಾಗಿ ಹಿಂದಿನ ಸರ್ಕಾರ (ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ) ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿತು. ಅವರ ಮೇಲೆ ಕೇಸ್‌ಗಳನ್ನು ಹಾಕಿತು. ಈ ಮೂಲಕ ನನ್ನ ಮೇಲೆ ಒತ್ತಡ ಹೇರಲು ಯತ್ನಿಸಿತು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಸ್ಫೋಟಕ ಆರೋಪ ಮಾಡಿದ್ದಾರೆ.
ವಿಐಟಿ-ಎಪಿ ವಿಶ್ವವಿದ್ಯಾಲಯದ 5ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಹೆಸರೆತ್ತದೆ ಈ ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ಕುಟುಂಬದ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ನನ್ನ ಮೇಲೆ ಒತ್ತಡ ಹೇರಲೆತ್ನಿಸಲಾಯಿತು. ಈ ರೀತಿ ಕಿರುಕುಳ ಅನುಭವಿಸಿದ್ದು ನಾನೊಬ್ಬನೇ ಅಲ್ಲ, ರೈತರ ಹೋರಾಟದ ಮೇಲೆ ಸಹಾನುಭೂತಿ ತೋರಿಸಿದ ಪ್ರತಿಯೊಬ್ಬರೂ ಇಂಥ ಬೆದರಿಕೆ ಎದುರಿಸಬೇಕಾಯಿತು’ ಎಂದು ಹೇಳಿದರು.
‘ರೈತರ ಪ್ರತಿಭಟನೆ ವೇಳೆ ಅನೇಕ ರಾಜಕೀಯ ನಾಯಕರು ಮೌನವಾಗಿ ಉಳಿದರು. ಆದರೆ, ನ್ಯಾಯಾಧೀಶರು, ವಕೀಲರು ಮತ್ತು ದೇಶದ ನ್ಯಾಯಾಲಯಗಳು ಸಂವಿಧಾನದ ಪರವಾಗಿ ಗಟ್ಟಿಯಾಗಿ ನಿಂತರು’ ಎಂದ ಅವರು, ‘ಅಮರಾವತಿಯ ರೈತರ ಹೋರಾಟದ ಕೆಚ್ಚನ್ನು ನಾನು ಗೌರವಿಸುತ್ತೇನೆ. ಸರ್ಕಾರಿ ವ್ಯವಸ್ಥೆಯ ಒತ್ತಡ ಮೆಟ್ಟಿನಿಂತು ಅವರು ಹೋರಾಟ ನಡೆಸಿದರು. ನ್ಯಾಯಾಂಗ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಅವರಿಟ್ಟಿರುವ ನಂಬಿಕೆಗೂ ನಾನು ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದರು.
ಈ ಹಿಂದೆ ಜಗನ್ ಸರ್ಕಾರವು ಅಮರಾವತಿಯನ್ನು ಆಂಧ್ರದ ಏಕೈಕ ರಾಜಧಾನಿ ಎಂದು ಪರಿಗಣಿಸುವ ಬದಲು, 3 ರಾಜಧಾನಿಗಳನ್ನು ಸೃಷ್ಟಿಸಲು ಮುಂದಾಗಿತ್ತು. ಕರ್ನೂಲನ್ನು ನ್ಯಾಯಾಂಗ ರಾಜಧಾನಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿ ಹಾಗೂ ವಿಶಾಖಪಟ್ಟಣವನ್ನು ಆಡಳಿತ ರಾಜಧಾನಿ ಎಂದು ಘೋಷಿಸಲು ನಿರ್ಧರಿಸಿತ್ತು. ಇದರ ವಿರುದ್ಧ ಅಮರಾವತಿಯ ರೈತರು ಭಾರಿ ಹೋರಾಟಕ್ಕೆ ಇಳಿದಿದ್ದರು.
- ಅಮರಾವತಿ ರೈತರ ಹೋರಾಟ ವೇಳೆ ಕಿರುಕುಳ
- ಕುಟುಂಬದ ಮೇಲೆ ಕೇಸ್, ನನ್ನ ಮೇಲೆ ಒತ್ತಡಕ್ಕೆ ಯತ್ನ
- ಕಾರ್ಯಕ್ರಮವೊಂದರಲ್ಲಿ ನ್ಯಾ.ಎನ್.ವಿ.ರಮಣ ಕಿಡಿ