ಕಾಫ್‌ ಸಿರಪ್‌ ಬಗ್ಗೆ ರಾಜ್ಯದಲ್ಲೂ ಆತಂಕ

KannadaprabhaNewsNetwork |  
Published : Oct 06, 2025, 01:01 AM ISTUpdated : Oct 06, 2025, 07:35 AM IST
Cough Syrup

ಸಾರಾಂಶ

 ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ ಸೇವಿಸಿ 16 ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ 2 ಬ್ರ್ಯಾಂಡ್‌ಗಳ ಕೆಮ್ಮಿನ ಸಿರಪ್ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಆಗಸ್ಟ್‌ನಲ್ಲೇ ವರದಿ ನೀಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

  ಬೆಂಗಳೂರು/ಹೈದರಾಬಾದ್‌ : ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ ಸೇವಿಸಿ 16 ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ 2 ಬ್ರ್ಯಾಂಡ್‌ಗಳ ಕೆಮ್ಮಿನ ಸಿರಪ್ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಆಗಸ್ಟ್‌ನಲ್ಲೇ ವರದಿ ನೀಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ, ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಇಲಾಖೆಗೆ ಸ್ಪಷ್ಟ ಮಾಹಿತಿಯೇ ಇಲ್ಲ!

‘ಹಿಮಾಚಲಪ್ರದೇಶದ ಎಲ್‌ವಿ ಲೈಫ್‌ ಸೈನ್ಸ್‌ ತಯಾರಿಸುವ ಸಿರಪ್‌ ಮತ್ತು ಮತ್ತು ಪುದುಚೆರಿಯ ಎಥಿಡ್ರಸ್ ಸಂಶೋಧನಾ ಪ್ರಯೋಗಾಲಯ ಉತ್ಪಾದಿಸುವ ಸಿ ಆ್ಯಂಡ್‌ ಸಿ-ಎಲ್‌ಎಸ್‌ ಸಿರಪ್‌ನ ಸಿಎಸ್‌ಎಲ್‌-129ನೇ ಬ್ಯಾಚ್‌ಗಳು ನಿಗದಿತ ಮಾನದಂಡಗಳನ್ನು ತಲುಪುವಲ್ಲಿ ವಿಫಲವಾಗಿವೆ. ಇವುಗಳನ್ನು ಹಿಂಪಡೆದು, ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಬೇಕು ಹಾಗೂ ತಯಾರಕರ ವಿರುದ್ಧ ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ’ ಎಂದು ‘ಸೌತ್‌ಫಸ್ಟ್‌’ ಎಂಬ ಸುದ್ದಿ ವೆಬ್‌ಸೈಟ್‌ ವರದಿ ಪ್ರಕಟಿಸಿದೆ.

ಎಲ್‌ವಿ ಲೈಫ್‌ ಸೈನ್ಸ್‌ನ ಸಿರಪ್‌ ಅನ್ನು ಬ್ರಾಂಕೈಟಿಸ್, ಆಸ್ತಮಾ ಮತ್ತು ಸಿಒಪಿಡಿಯಂತಹ ಉಸಿರಾಟಕ್ಕೆ ಸಂಬಂಧಿಸಿದ ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ. ಸಿ ಆ್ಯಂಡ್‌ ಸಿ-ಎಲ್‌ಎಸ್‌ ಸಿರಪ್‌ ಅನ್ನು ಕಫ ಮತ್ತು ಉಸಿರಾಟದ ತೊಂದರೆಗಳೊಂದಿಗೆ ಬರುವ ಕೆಮ್ಮನ್ನು ನಿವಾರಿಸಲು ತಯಾರಿಸಲಾಗಿದೆ. ಆದರೆ ಗುಣಮಟ್ಟ ಪರೀಕ್ಷೆಯಲ್ಲಿ ಈ ಎರಡೂ ಔಷಧಗಳು ವಿಫಲವಾಗಿವೆ ಎಂದು ಸಿಡಿಎಸ್‌ಸಿಒ ವರದಿ ಹೇಳಿದೆ ಎಂದು ಗೊತ್ತಾಗಿದೆ.

ನಮಗೆ ಗೊತ್ತಿಲ್ಲ: ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾತನಾಡಿ, ಮಧ್ಯಪ್ರದೇಶ ಮತ್ತಿತರೆಡೆ ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೋಲ್ಡ್ರಿಫ್ ಕಾಫ್ ಸಿರಪ್‌ ರಾಜ್ಯಕ್ಕೆ ಪೂರೈಕೆ ಆಗಿಲ್ಲ. ಇನ್ನು, ಸಿಡಿಎಸ್‌ಸಿಒ ಆಗಸ್ಟ್‌ನಲ್ಲಿ ಕಾಫ್‌ ಸಿರಪ್‌ಗಳ ಕುರಿತು ವರದಿ ನೀಡಿರುವ ಬಗ್ಗೆ ಮಾಹಿತಿಯಿಲ್ಲ. ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.ಇನ್ನು, ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಮಾತನಾಡಿ, ನನಗೂ ಈ ಬಗ್ಗೆ ಮಾಹಿತಿಯಿಲ್ಲ. ಹಿಂದಿನ ಆಯುಕ್ತರಿಗೆ ಈ ಬಗ್ಗೆ ತಿಳಿದಿರಬಹುದು ಎಂದು ಜಾರಿಕೊಂಡರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು