ಮುಂಬೈ: ಆಸ್ಟ್ರಿಯಾದವರಾದ ಪತಿ ಪೀಟರ್ ಹಾಗ್ ತಮಗೆ ಗೃಹಹಿಂಸೆ ನೀಡುತ್ತಿರುವುದಾಗಿ ಆರೋಪಿಸಿರುವ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ, 50 ಕೋಟಿ ರು. ಪರಿಹಾರಕ್ಕೆ ಆಗ್ರಹಿಸಿ ಮುಂಬೈ ಕೋರ್ಟ್‌ಗೆ ದಾವೆ ಸಲ್ಲಿಸಿದ್ದಾರೆ. 2001ರಲ್ಲಿ ಮಿಸ್ ಇಂಡಿಯಾ ಆಗಿದ್ದ ಈಕೆ ತಮ್ಮ ಅರ್ಜಿಯಲ್ಲಿ, ‘ಹಾಗ್ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ, ಆರ್ಥಿಕವಾಗಿ ನನ್ನನ್ನು ಶೋಷಿಸಿದ್ದಾನೆ. ಆತ ನನ್ನ ವೃತ್ತಿ ಜೀವನವನ್ನೇ ಹಾಳು ಮಾಡಿದ್ದಾನೆ. ಮಕ್ಕಳ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಆತನ ಹಿಂಸೆ ತಾಳದೆ ಆಸ್ಟ್ರಿಯಾದಿಂದ ಭಾರತಕ್ಕೆ ಮರಳಿದೆ’ ಎಂದು ದೂಷಿಸಿದ್ದಾರೆ. ಜತೆಗೆ, ಪ್ರಸ್ತುತ ಹಾಗ್‌ನೊಂದಿಗೆ ಆಸ್ಟ್ರಿಯಾದಲ್ಲಿ ಇರುವ ಮೂವರು ಮಕ್ಕಳನ್ನು ತಮ್ಮ ಸುಪರ್ದಿಗೆ ಕೊಡಬೇಕು ಆತ ಮತ್ತೆ ಮುಂಬೈಗೆ ಬರದಂತೆ ತಡೆಯಬೇಕು ಎಂದು ಕೋರಿದ್ದಾರೆ.
==ನೀತಾ ಅಂಬಾನಿಗೆ ‘ಜಾಗತಿಕ ಶಾಂತಿ ಗೌರವ’
ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ದಿವ್ಯಜ್ ಫೌಂಡೇಶನ್ ಕೊಡಮಾಡುವ ‘ಜಾಗತಿಕ ಶಾಂತಿ ಗೌರವ-2025’ ಅನ್ನು ಶನಿವಾರ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ನೀಡಿ ಗೌರವಿಸಲಾಯಿತು. 26/11ರ ದಾಳಿಗೆ 15 ವರ್ಷಗಳು ಪೂರ್ಣಗೊಂಡ ನಿಮಿತ್ತ, ಹುತಾತ್ಮ ಯೋಧರು ಮತ್ತು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀತಾ, ‘ಭಾರತ ಮತ್ತು ಭಾರತೀಯರು ನನ್ನ ಸ್ಪೂರ್ತಿ. ಸುಭದ್ರ, ಸುರಕ್ಷಿತ ನಾಳೆಗಾಗಿ ಬಲಿದಾನ ಮಾಡಿದ ಯೋಧರು ಮತ್ತು ಅವರ ಕುಟುಂಬದವರಿಗೆ ನಾನು ತಲೆಬಾಗಿ ನಮಿಸುತ್ತೇನೆ’ ಎಂದರು.ಬಾಲಿವುಡ್ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
==ಗಾಯಕ ಗರ್ಗ್‌ರದ್ದು ಆಕಸ್ಮಿಕ ಸಾವಲ್ಲ, ಹತ್ಯೆ: ಅಸ್ಸಾಂ ಸಿಎಂಗುವಾಹಟಿ: ಸಿಂಗಾಪುರದ ಸಮುದ್ರದಲ್ಲಿ ಸೆ.9ರಂದು ಈಜುವಾಗ ನಡೆದ ಗಾಯಕ ಜುಬೀನ್ ಗರ್ಗ್ ಸಾವು, ಆಕಸ್ಮಿಕವಲ್ಲ. ಅದೊಂದು ಹತ್ಯೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮಂಗಳವಾರ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಗರ್ಗ್ ಅವರ ಸಾವಿನ ಕುರಿತು ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಕರಣದಲ್ಲಿ ಹತ್ಯೆಯ ಆರೋಪಗಳನ್ನು ಸೇರಿಸಿದೆ ಎಂದು ಶರ್ಮಾ ಮಾಹಿತಿ ನಿಡಿದ್ದಾರೆ. ‘ಪೊಲೀಸರೇ ಇದೊಂದು ಆಕಸ್ಮಿಕ ಸಾವಲ್ಲ, ಕೊಲೆಯಲ್ಲ ಎಂದಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಎಸ್‌ಐಟಿ 7 ಜನರನ್ನು ಬಂಧಿಸಿದೆ’ ಎಂದು ಹೇಳಿದ್ದಾರೆ.
==ಕೆನಡಾದಲ್ಲಿ ಭಾರತದ ಧ್ವಜ ವಿರೂಪ, ನಾಯಕರ ಕೊಲೆಗೆ ಕರೆ: ಖಲಿಸ್ತಾನಿ ಪುಂಡಾಟಒಟ್ಟಾವಾ: ಕೆನಡಾದಲ್ಲಿ ಮತ್ತೆ ಪುಂಡಾಟ ಮೆರೆದಿರುವ ಖಲಿಸ್ತಾನಿಗಳು, ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ, ಭಾರತಕ್ಕೆ ನೇರ ಬೆದರಿಕೆ ಒಡ್ಡಿದ್ದಾರೆ. ಜಿ-20 ಸಭೆಯಲ್ಲಿ ಭಾಗಿಯಾಗಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಹೊತ್ತಿನಲ್ಲೇ ಈ ಘಟನೆ ಜರುಗಿರುವುದು ಗಮನಾರ್ಹ.ಸ್ವತಂತ್ರ ಖಲಿಸ್ತಾನ ಸ್ಥಾಪನೆಗೆ ಸಂಬಂಧಿಸಿದಂತೆ, ಭಾರತದಲ್ಲಿ ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಆಯೋಜಿಸಿದ್ದ ಜನಾಭಿಪ್ರಾಯ ಸಂಗ್ರಹದಲ್ಲಿ ಸುಮಾರು 53,000 ಖಲಿಸ್ತಾನಿಗಳು ಭಾಗವಹಿಸಿದ್ದರು. ಈ ವೇಳೆ ಭಾರತದ ಧ್ವಜವನ್ನು ವಿರೂಪಗೊಳಿಸಿ, ‘ಕಿಲ್ ಇಂಡಿಯಾ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸರೂ ಅವರನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೇ ವೇಳೆ, ಸಂಘಟನೆಯ ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಉಪಗ್ರಹದ ಮೂಲಕ ಸಂದೇಶ ಕಳಿಸಿದ್ದ ಸಂದೇಶವನ್ನೂ ಪ್ರದರ್ಶಿಸಲಾಗಿದೆ.
==ದೆಹಲಿಯಲ್ಲಿ 7 ವಿಮಾನ ರದ್ದು, 10 ಸಂಚಾರ ವ್ಯತ್ಯಯ
ಭಾರತದ ಪಶ್ಚಿಮ ಕರಾವಳಿಯಲ್ಲಿ ಜ್ವಾಲಾಮುಖಿ ಮೋಡ
ನವದೆಹಲಿ: ದೂರದ ಇಥಿಯೋಪಿಯಾದಲ್ಲಿ 120000 ವರ್ಷಗಳ ಬಳಿಕ ಸ್ಫೋಟಿಸಿದ ಹೈಲಿ ಗುಬ್ಬಿ ಜ್ವಾಲಾಮುಖಿ ಸೃಷ್ಟಿಸಿದ ದಟ್ಟ ಹೊಗೆಯಿಂದಾಗಿ ದೆಹಲಿ ಏರ್ಪೋರ್ಟ್‌ನಿಂದ ವಿದೇಶಕ್ಕೆ ತೆರಳಬೇಕಿದ್ದ ಹಲವು ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಏಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದ್ದು, 10 ವಿದೇಶಿ ವಿಮಾನಗಳ ಸಂಚಾರ ವಿಳಂಬಗೊಂಡಿದೆ.ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಕಾಣಿಸಿಕೊಂಡ ಭಾರೀ ಹೊಗೆಯ ಮೋಡ ಇದೀಗ ಭಾರತದ ಪಶ್ಚಿಮ ಕರಾವಳಿಯಲ್ಲೂ ಕಾಣಿಸಿಕೊಂಡಿದ್ದು, ವಿಮಾನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸಿದೆ. ಈಗಾಗಲೇ ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಜ್ವಾಲಾಮುಖಿಯ ಬೂದಿ ಸಾಗುವ ಮಾರ್ಗದಲ್ಲಿ ಸಾಗದಂತೆ ಎಚ್ಚರಿಕೆ ನೀಡಿದ್ದು, ಹೀಗಾಗಿ ಭಾರತದಲ್ಲಿ ಹಲವು ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಸೋಮವಾರದಿಂದ ಏರ್‌ಇಂಡಿಯಾವು 13 ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ.
==ವೃದ್ಧ ಪೋಷಕರನ್ನು ನೋಡಿಕೊಳ್ಳದ ಪುತ್ರನಿಗೆ 3 ತಿಂಗಳು ಜೈಲು, ದಂಡ!
ಮಹಾರಾಷ್ಟ್ರದ ಜಿಲ್ಲಾ ಕೋರ್ಟ್‌ನಿಂದ ಕಠಿಣ ಸಂದೇಶ ರವಾನೆ
ಪಾಲಕರ ನಿರ್ಲಕ್ಷ್ಯ ಹೆಚ್ಚುತ್ತಿರುವ ನಡುವೆಯೇ ಮಹತ್ವದ ಆದೇಶಜುನ್ನರ್ (ಮಹಾರಾಷ್ಟ್ರ): ಮಕ್ಕಳು ವೃದ್ಧ ತಂದೆ ತಾಯಿಯರನ್ನು ನೋಡಿಕೊಳ್ಳದೆ ಬೀದಿಗೆ ಬಿಡುವ ಅಮಾನವೀಯ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, ಮಹಾರಾಷ್ಟ್ರದ ಜುನ್ನತ್‌ನ ಜಿಲ್ಲಾ ನ್ಯಾಯಾಲಯವು ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳದ ಪುತ್ರನಿಗೆ 3 ತಿಂಗಳು ಜೈಲುವಾಸ ಹಾಗೂ 5,000 ರು. ದಂಡ ವಿಧಿಸಿ ಕಠಿಣ ಸಂದೇಶ ರವಾನಿಸಿದೆ.‘ಇಬ್ಬರೂ ಮಕ್ಕಳು ತಮ್ಮ ಕೃಷಿಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಮೂಲಭೂತ ಆವಶ್ಯಕತೆಗಳನ್ನೂ ಒದಗಿಸದೆ ಮನೆಯಿಂದ ಹೊರಹಾಕಲು ಮುಂದಾಗಿದ್ದಾರೆ. ಚಿಕ್ಕ ಮಗ ನಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ 51 ಗುಂಟೆ ಜಾಗವನ್ನು ಅವನ ಹೆಸರಿಗೆ ಮಾಡಿದ್ದೆವು. ಆದರೆ ಆತನೂ ಹೊರದಬ್ಬಿದ್ದಲ್ಲದೆ, ಹಣವನ್ನೂ ಪೀಕಿದ್ದಾನೆ’ ಎಂದು 70 ವರ್ಷದ ವೃದ್ಧ ದಂಪತಿ 2023ರ ಮೇ 13ರಂದು ನಾರಾಯಣಗಾಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವೇಳೆ ಚಿಕ್ಕ ಪುತ್ರನ ನಡವಳಿಕೆ ಆಕ್ಷೇಪಾರ್ಹ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ನ.10ರಂದು ಆತನನ್ನು ಬಂಧಿಸಿ ಯೆರವಾಡ ಜೈಲಿಗೆ ಕಳಿಸಲಾಗಿದೆ. ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಹಿತ ಕಾಯ್ದೆ-2007ರ ಅಡಿಯಲ್ಲಿ 3 ತಿಂಗಳು ಜೈಲು, 5,000 ರು. ದಂಡ ವಿಧಿಸಲಾಗಿದೆ.