ಕೃಷಿ ವಲಯಕ್ಕೆ 14 ಸಾವಿರ ಕೋಟಿ ರು. : ರೈತರ ಆದಾಯ ಹೆಚ್ಚಳಕ್ಕೆ 7 ಮೆಗಾ ಯೋಜನೆಗಳು

KannadaprabhaNewsNetwork |  
Published : Sep 03, 2024, 01:32 AM ISTUpdated : Sep 03, 2024, 04:35 AM IST
ಕೃಷಿ  | Kannada Prabha

ಸಾರಾಂಶ

ರೈತರ ಆದಾಯ ಹೆಚ್ಚಳದ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೋಮವಾರ 14 ಸಾವಿರ ಕೋಟಿ ರು. ವೆಚ್ಚದ 7 ಬೃಹತ್‌ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ.

ಪಿಟಿಐ ನವದೆಹಲಿ: ರೈತರ ಆದಾಯ ಹೆಚ್ಚಳದ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೋಮವಾರ 14 ಸಾವಿರ ಕೋಟಿ ರು. ವೆಚ್ಚದ 7 ಬೃಹತ್‌ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ.

ಬೆಳೆ ವಿಜ್ಞಾನ ಯೋಜನೆ (3979 ಕೋಟಿ ರು.), ಡಿಜಿಟಲ್‌ ಕೃಷಿ ಮಿಷನ್‌ (2817 ಕೋಟಿ ರು.), ಕೃಷಿ ಶಿಕ್ಷಣ, ನಿರ್ವಹಣೆ ಹಾಗೂ ಸಾಮಾಜಿಕ ವಿಜ್ಞಾನ ಕಾರ್ಯಕ್ರಮ (2291 ಕೋಟಿ ರು.), ಸುಸ್ಥಿರ ಜಾನುವಾರು ಆರೋಗ್ಯ ಹಾಗೂ ಉತ್ಪಾದನೆ ಯೋಜನೆ (1702 ಕೋಟಿ ರು.), ತೋಟಗಾರಿಕೆ ಸುಸ್ಥಿರ ಅಭಿವೃದ್ಧಿ (860 ಕೋಟಿ ರು.), ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆ (1202 ಕೋಟಿ ರು.) ಹಾಗೂ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ (1115 ಕೋಟಿ ರು.) ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 ಈ ಯೋಜನೆಗಳ ಒಟ್ಟಾರೆ ವೆಚ್ಚ 13966 ಕೋಟಿ ರು. ಆಗಿದೆ.ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಈ ಸಮಗ್ರ ಕೃಷಿ ಯೋಜನೆಗಳು ರೈತರ ಆದಾಯ ಹೆಚ್ಚಳ ಮಾಡುವ ಗುರಿಯನ್ನು ಹೊಂದಿವೆ. ಸಂಶೋಧನೆ ಮತ್ತು ಶಿಕ್ಷಣ, ಹವಾಮಾನ ಬದಲಾವಣೆಯಿಂದ ಪುಟಿದೇಳುವಿಕೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿ ವಲಯದ ಡಿಜಿಟಲೀಕರಣ ಹಾಗೂ ತೋಟಗಾರಿಕೆ ಮತ್ತು ಜಾನುವಾರು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುವುದು ಈ ಕಾರ್ಯಕ್ರಮಗಳ ಆದ್ಯತೆಯಾಗಿದೆ ಎಂದು ವಿವರಿಸಿದರು.

ಬೆಳೆ ವಿಜ್ಞಾನಕ್ಕೆ ಅಸ್ತು:ಆಹಾರ ಮತ್ತು ಪೌಷ್ಟಿಕಾಂಶಯುಕ್ತ ಭದ್ರತೆಗಾಗಿ ಬೆಳೆ ವಿಜ್ಞಾನ ಯೋಜನೆಗೆ ಅನುಮತಿ ನೀಡಲಾಗಿದೆ. ಇದರಡಿ ಆರು ಸ್ತಂಭಗಳು ಇವೆ. 2047ರ ವೇಳೆಗೆ ಆಹಾರ ಭದ್ರತೆ ಸಾಧಿಸಲು ಹಾಗೂ ಹವಾಮಾನ ಬದಲಾವಣೆಗೆ ತಡೆದುಕೊಳ್ಳುವಂತಹ ಬೆಳೆ ಬೆಳೆಯಲು ರೈತರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿವೆ. 

ಆ ಆರು ಸ್ತಂಭಗಳು ಎಂದರೆ: ಸಂಶೋಧನೆ ಮತ್ತು ಶಿಕ್ಷಣ. ಸಸ್ಯಗಳ ವಂಶವಾಹಿ ಸಂಪನ್ಮೂಲಗಳ ನಿರ್ವಹಣೆ. ಆಹಾರ ಹಾಗೂ ಮೇವು ಬೆಳೆಗಳ ವಂಶವಾಹಿ ಸುಧಾರಣೆ. ಬೇಳೆಕಾಳು ಹಾಗೂ ಎಣ್ಣೆ ಬೀಜ ಬೆಳೆಗಳ ಸುಧಾರಣೆ. ವಾಣಿಜ್ಯ ಬೆಳೆಗಳ ಸುಧಾರಣೆ. ಕೀಟ, ಸೂಕ್ಷ್ಮಾಣು ಜೀವಿ, ಪರಾಗಸ್ಪರ್ಶಗಳ ಬಗ್ಗೆ ಸಂಶೋಧನೆ.2020ರ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರವನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಕೃಷಿ ಶಿಕ್ಷಣ, ನಿರ್ವಹಣೆ ಹಾಗೂ ಸಾಮಾಜಿಕ ವಿಜ್ಞಾನ ಕಾರ್ಯಕ್ರಮಕ್ಕಾಗಿ 2291 ಕೋಟಿ ರು. ಹಂಚಿಕೆ ಮಾಡಲಾಗಿದೆ. ಈ ಕಾರ್ಯಕ್ರಮ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿ ಬರುತ್ತದೆ ಎಂದು ಮಾಹಿತಿ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ