ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು - ಎಡ್ವಿನಾ ಖಾಸಗಿ ಪತ್ರಗಳು ಸೋನಿಯಾ ವಶದಲ್ಲಿ!

KannadaprabhaNewsNetwork |  
Published : Dec 17, 2024, 12:45 AM ISTUpdated : Dec 17, 2024, 04:48 AM IST
ಎಡ್ವಿನಾ | Kannada Prabha

ಸಾರಾಂಶ

ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರು ದೇಶದ ಕೊನೆಯ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರ ಪತ್ನಿ ಎಡ್ವೀನಾಗೆ ಬರೆದ  ಪತ್ರಗಳನ್ನು ಮರಳಿಸುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ನವದೆಹಲಿ: ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರು ದೇಶದ ಕೊನೆಯ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರ ಪತ್ನಿ ಎಡ್ವೀನಾಗೆ ಬರೆದದ್ದೂ ಸೇರಿದಂತೆ ಅವರ ಹಲವು ‘ಖಾಸಗಿ ಪತ್ರಗಳನ್ನು’ 2008ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ವಶಕ್ಕೆ ಪಡೆದಿದ್ದರು. ಈಗ ಈ ಪತ್ರಗಳನ್ನು ಮರಳಿಸುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ಇದೇ ಕುರಿತು ಕಳೆದ ಸೆಪ್ಟೆಂಬರ್‌ನಲ್ಲೇ ಸೋನಿಯಾಗೆ ಒಮ್ಮೆ ಪತ್ರ ಬರೆದಿದ್ದ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ (ಪಿಎಂಎಂಎಲ್‌)ದ ಅಧಿಕಾರಿಗಳು ಇದೀಗ ಅದೇ ವಿಷಯದ ಕುರಿತು ರಾಹುಲ್‌ಗೆ ಪತ್ರ ಬರೆದಿದ್ದಾರೆ.

ನೆಹರು ಅವರು ಆಲ್ಬರ್ಟ್ ಐನ್‌ಸ್ಟೀನ್‌, ಜಯಪ್ರಕಾಶ್ ನಾರಾಯಣ್, ಎಡ್ವೀನಾ ಮೌಂಟ್‌ ಬ್ಯಾಟನ್, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿಪಂಡಿತ್, ಅರುಣಾ ಅಸಫ್ ಅಲಿ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಪತ್ರಗಳನ್ನು ಬರೆದಿದ್ದರು.

ಆದರೆ ‘ಇವುಗಳು ಖಾಸಗಿ ಪತ್ರಗಳು. ಸಾರ್ವಜನಿಕ ಪ್ರದರ್ಶನ ಬೇಡ’ ಎಂದು 2008ರಲ್ಲಿ ಸೋನಿಯಾ ಅವರು ತಕರಾರು ಮಾಡಿದ್ದರು. ಹೀಗಾಗಿ ಅವರ ಸೂಚನೆ ಮೇರೆಗೆ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ ಈ ಖಾಸಗಿ ಪತ್ರಗಳನ್ನು ತೆಗೆದು ಸೋನಿಯಾ ಆವರಿಗೆ ರವಾನಿಸಲಾಗಿತ್ತು. ಈಗ ಆ ಮೂಲ ಪತ್ರ ಇಲ್ಲವೇ ಅದರ ಫೋಟೋಕಾಪಿ ಅಥವಾ ಡಿಜಿಟಲ್‌ ಕಾಪಿ ನೀಡುವಂತೆ ಅಧಿಕಾರಿಗಳು ರಾಹುಲ್‌ಗೆ ಸೂಚಿಸಿದ್ದಾರೆ.

‘ಇವು ಖಾಸಗಿ ಪತ್ರಗಳಾದರೂ ಭಾರತದ ಮೊದಲ ಪ್ರಧಾನಿ ಬರೆದ ಪತ್ರಗಳು. ಇವುಗಳು ಇತಿಹಾಸದ ಅಧ್ಯಯನಕ್ಕೆ ವಿದ್ವಾಂಸರಿಗೆ ಬೇಕು. ಹೀಗಾಗಿ ಮರಳಿಸಿ’ ಎಂದು ಕೋರಿದ್ದಾರೆ.

ಈ ನಡುವೆ ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ‘ಪ್ರಧಾನಿ ಆಗಿದ್ದ ನೆಹರು ಅವರ ಪತ್ರಗಳು ಗಾಂಧಿ ಕುಟುಂಬದ ಸೊತ್ತಲ್ಲ’ ಎಂದಿದೆ.

- ವಾಪಸ್‌ ನೀಡುವಂತೆ ರಾಹುಲ್‌ಗೆ ಪ್ರಧಾನಿಗಳ ಮ್ಯೂಸಿಯಂನಿಂದ ಪತ್ರ । ನೆಹರು ಪತ್ರ ಖಾಸಗಿ ಸ್ವತಲ್ಲ: ಬಿಜೆಪಿ- ಕೊನೆಯ ವೈಸ್‌ರಾಯ್‌ ಎಡ್ವೀನಾ ಸೇರಿ ಹಲವು ಗಣ್ಯರಿಗೆ ಖಾಸಗಿ ಪತ್ರ ಬರೆದಿದ್ದ ನೆಹರು- ಇವು ಖಾಸಗಿ ಸ್ವರೂಪದ ಪತ್ರಗಳಾಗಿದ್ದು, ಸಾರ್ವಜನಿಕ ಪ್ರದರ್ಶನ ಬೇಡ ಎಂದಿದ್ದ ಸೋನಿಯಾ- 2008ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ನೆಹರು ಖಾಸಗಿ ಪತ್ರಗಳು ಸೋನಿಯಾಗೆ ಹಸ್ತಾಂತರ- ಆ ಪತ್ರಗಳನ್ನು ಮರಳಿಸುವಂತೆ ಸೋನಿಯಾ ಸೆಪ್ಟೆಂಬರ್‌ನಲ್ಲೇ ಪತ್ರ ಬರೆದಿದ್ದ ಪಿಎಂ ಮ್ಯೂಸಿಯಂ- ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈಗ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದ ಅಧಿಕಾರಿಗಳು

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ