;Resize=(412,232))
ಗುವಾಹಟಿ: ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೋಯ್ ಅವರಿಗೆ ಪಾಕಿಸ್ತಾನದ ನಂಟಿದೆ ಎಂದು ಹಲವು ಬಾರಿ ಆರೋಪಿಸಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ಅವರು ಈ ವಿಷಯದ ಬಗ್ಗೆ ಕೇಂದ್ರೀಯ ಸಂಸ್ಥೆಯ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ‘2013ರಲ್ಲಿ ಗೊಗೋಯ್ ಅವರು ರಹಸ್ಯವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಯಾವುದೋ ತರಬೇತಿ ಪಡೆದು ಬಂದಿರಬಹುದು. ಅವರ ಬ್ರಿಟನ್ ಮೂಲದ ಪತ್ನಿ ಎಲಿಜಬೆತ್ ಭಾರತದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಅವರು ಸಹ 9 ಬಾರಿ ಪಾಕ್‌ಗೆ ಹೋಗಿ ಬಂದಿದ್ದಾರೆ’ ಎಂದು ಆರೋಪಿಸಿದರು.
ಈ ಆರೋಪಗಳನ್ನು ಹಲವು ಬಾರಿ ಮಾಡಿರುವ ಶರ್ಮಾ ಅವರು, ಇದರ ಬಗ್ಗೆ ತನಿಖೆ ನಡೆಸಲು ಅಸ್ಸಾಂ ಪೊಲೀಸರ ವಿಶೇಷ ತಂಡವನ್ನು ರಚಿಸಿದ್ದರು ಹಾಗೂ ಕಳೆದ ಸೆ.10ರಂದು ಇದರ ವರದಿಯನ್ನೂ ಪಡೆದಿದ್ದರು.
ತಮ್ಮ ಪಾಕ್ ನಂಟಿನ ಬಗ್ಗೆ ಸಿಎಂ ಬಿಸ್ವಾ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೌರವ್ ಗೊಗೋಯ್, ‘ಇದು ಬುದ್ಧಿಹೀನ ಹಾಗೂ ಸುಳ್ಳು ಆರೋಪ. ಸಿ-ಗ್ರೇಡ್ (ಕಳಪೆ) ಸಿನಿಮಾಗಿಂತಲೂ ಕೆಟ್ಟದಾಗಿದೆ. ರಾಜಕೀಯ ಚಾಣಾಕ್ಷನೆಂದು ಕರೆಸಿಕೊಳ್ಳುವವರಿಂದ ಇಂತಹ ಹೇಳಿಕೆ ಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಈ ಆರೋಪ ಮಾಡಲು 2.5 ಗಂಟೆಯ ಪತ್ರಿಕಾಗೋಷ್ಠಿ ನಡೆಸಿ ಶರ್ಮಾ ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ ಎಂದರು