ಸಂಘ ಹೇಳಿದರೆ ಸ್ಥಾನ ಬಿಟ್ಟ ಬಿಡುವೆ : ಮೋಹನ್‌ ಭಾಗ್ವತ್‌

Published : Feb 09, 2026, 05:40 AM IST
rss chief mohan bhagwat

ಸಾರಾಂಶ

‘ವಯಸ್ಸಾದ ಹೊರತಾಗಿಯೂ ಕೆಲಸ ಮಾಡುವಂತೆ ಸಂಘ ನನಗೆ ಕೇಳಿಕೊಂಡಿದೆ. ಸಂಘ ನಿರ್ದೇಶನ ನೀಡಿದರೆ, ನನ್ನ ಸ್ಥಾನದಿಂದ ಕೆಳಗಿಳಿಯಲು ಸಿದ್ಧ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಭಾನುವಾರ ಹೇಳಿದ್ದಾರೆ.

 ಮುಂಬೈ :  ‘ವಯಸ್ಸಾದ ಹೊರತಾಗಿಯೂ ಕೆಲಸ ಮಾಡುವಂತೆ ಸಂಘ ನನಗೆ ಕೇಳಿಕೊಂಡಿದೆ. ಸಂಘ ನಿರ್ದೇಶನ ನೀಡಿದರೆ, ನನ್ನ ಸ್ಥಾನದಿಂದ ಕೆಳಗಿಳಿಯಲು ಸಿದ್ಧ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಭಾನುವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಶತಾಬ್ದಿ ವರ್ಷದ ನಿಮಿತ್ತ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಮುಖ್ಯಸ್ಥರ ಹುದ್ದೆಗೆ ಯಾವುದೇ ಚುನಾವಣೆ ಇರುವುದಿಲ್ಲ. ಪ್ರಾದೇಶಿಕ ಮತ್ತು ವಿಭಾಗೀಯ ನಾಯಕರು ಮುಖ್ಯಸ್ಥರನ್ನು ನೇಮಿಸುತ್ತಾರೆ. ಸಾಮಾನ್ಯವಾಗಿ, 75 ವರ್ಷ ತುಂಬಿದ ನಂತರ ಯಾವುದೇ ಹುದ್ದೆಯನ್ನು ಅಲಂಕರಿಸದೆ ಕೆಲಸ ಮಾಡಬೇಕು ಎಂಬುದು ಸಂಘದ ನಿಯಮ. ನನಗೆ 75 ವರ್ಷ ಪೂರ್ಣವಾಗಿದೆ ಎಂದು ಸಂಘಕ್ಕೆ ತಿಳಿಸಿದೆ. ಆದರೆ ಕೆಲಸ ಮುಂದುವರಿಸುವಂತೆ ಸಂಘ ಹೇಳಿತು. ಯಾವಾಗ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸುತ್ತದೆಯೋ ಆಗ ಕೆಳಗಿಳಿಯುತ್ತೇನೆ. ಆದರೆ ಕೆಲಸದಿಂದ ಎಂದಿಗೂ ನಿವೃತ್ತಿಯಿರುವುದಿಲ್ಲ’ ಎಂದರು.

ಮುಖ್ಯಸ್ಥರು ಹಿಂದೂವೇ ಆಗಿರಬೇಕು:

‘ಆರ್‌ಎಸ್‌ಎಸ್ ಮುಖ್ಯಸ್ಥರು ಯಾವುದೇ ಜಾತಿಯಾಗಿದ್ದರೂ ಹಿಂದೂ ಆಗಿರಬೇಕು. ಸಂಘ ಸ್ಥಾಪನೆಯಾದಾಗ, ಅದರ ಕೆಲಸವು ಬ್ರಾಹ್ಮಣ ಪ್ರಾಬಲ್ಯದ ಸಮುದಾಯದಲ್ಲಿ ಪ್ರಾರಂಭವಾಯಿತು. ಆದ್ದರಿಂದ, ಅದರ ಹೆಚ್ಚಿನ ಸ್ಥಾಪಕರು ಬ್ರಾಹ್ಮಣರಾಗಿದ್ದರು. ಇದರಿಂದಾಗಿ ಸಂಘಕ್ಕೆ ಬ್ರಾಹ್ಮಣ ಸಂಘಟನೆ ಎಂದು ಹಣೆಪಟ್ಟಿ ಕಟ್ಟಲಾಯಿತು. ಸಂಘದಲ್ಲಿ ಸಮುದಾಯ ಆಧರಿತ ಪ್ರಾತಿನಿಧ್ಯವಿಲ್ಲ. ಸ್ವಯಂಸೇವಕರು ತಮ್ಮ ಕೆಲಸದ ಆಧಾರದ ಮೇಲೆ ಶ್ರೇಣಿಗಳ ಮೂಲಕ ಮೇಲೇರುತ್ತಾರೆ’ ಎಂದು ತಿಳಿಸಿದರು.

ಎಸ್‌ಸಿ/ಎಸ್‌ಟಿ ಅನರ್ಹತೆಯಲ್ಲ:

‘ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿರುವುದು ಸಂಘದ ಮುಖ್ಯಸ್ಥರಾಗಲು ಇರುವ ಅನರ್ಹತೆಯಲ್ಲ. ಬ್ರಾಹ್ಮಣನಾಗಿರುವುದು ಅದಕ್ಕಿರುವ ಅರ್ಹತೆಯೂ ಅಲ್ಲ. ಮುಖ್ಯಸ್ಥರ ಆಯ್ಕೆ ನಿರ್ಧಾರವು ಅವರನ್ನು ನೇಮಿಸುವವರ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಹೇಳಿದರು.

ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಜೀವಂತ:

‘ಜಾತಿ ಈಗ ರಾಜಕೀಯ ಉದ್ದೇಶಗಳಿಗಾಗಿ ಮತ್ತು ಸ್ವಾರ್ಥ ಹಿತಾಸಕ್ತಿಗಳಿಗಾಗಿ ಅಸ್ತಿತ್ವದಲ್ಲಿದೆ’ ಎಂದು ಅವರು ಬೇಸರಿಸಿದರು.

‘ಯಾವುದೇ 2 ಸಮುದಾಯಗಳು ಪರಸ್ಪರ ವಿರೋಧಿಸಿದರೆ, ಸಂಘರ್ಷವಾಗುತ್ತದೆಯೇ ಹೊರತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆರ್‌ಎಸ್‌ಎಸ್ ಯಾವುದೇ ಜಾತಿ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಒಂದು ಪ್ರದೇಶದಲ್ಲಿ 10,000 ಜನಸಂಖ್ಯೆ ಇದ್ದರೆ, ನಾವು ಅಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ನಾವು ಭೌಗೋಳಿಕವಾಗಿ ಹರಡಿದ ನಂತರ, ಎಲ್ಲಾ ವರ್ಗಗಳು ಮತ್ತು ಸಮುದಾಯಗಳನ್ನು ತಲುಪಲಾಗುತ್ತದೆ. ನೀವು ಆರ್‌ಎಸ್‌ಎಸ್‌ನ ಉನ್ನತ ವಲಯವನ್ನು ನೋಡಿದರೆ, ಎಲ್ಲ ಸಮುದಾಯಗಳು ಪ್ರಾತಿನಿಧ್ಯ ಹೊಂದಿವೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಿರುಪತಿ ತುಪ್ಪ ಕಲಬೆರಕೆ ಗೊತ್ತಿದ್ದೂ ಟಿಟಿಡಿ ಖರೀದಿ ಮುಂದುವರಿಕೆ : ಸಿಬಿಐ
ಸಾವರ್ಕರ್‌ಗೆ ಭಾರತ ರತ್ನ ಕೊಟ್ರೆ ಪ್ರಶಸ್ತಿ ಘನತೆ ಹೆಚ್ಚಳ: ಭಾಗವತ್