ವಿದೇಶಾಂಗ ಸಚಿವ ಜೈಶಂಕರ್‌ಗೆ ಬುಲೆಟ್‌ ಪ್ರೂಫ್‌ ವಾಹನ ಸೌಲಭ್ಯ

KannadaprabhaNewsNetwork |  
Published : May 15, 2025, 01:35 AM ISTUpdated : May 15, 2025, 05:19 AM IST
ಜೈಶಂಕರ್‌ | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಹೆಚ್ಚಿಸಿದೆ. ಪ್ರಸಕ್ತ ಝಡ್‌ ಮಾದರಿ ಭದ್ರತೆ ಹೊಂದಿರುವ ಜೈಶಂಕರ್‌ಗೆ ಬುಲೆಟ್ ಪ್ರೂಫ್‌ ವಾಹನದ ಸೌಲಭ್ಯ ಒದಗಿಸಲಾಗಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಭದ್ರತೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಹೆಚ್ಚಿಸಿದೆ. ಪ್ರಸಕ್ತ ಝಡ್‌ ಮಾದರಿ ಭದ್ರತೆ ಹೊಂದಿರುವ ಜೈಶಂಕರ್‌ಗೆ ಬುಲೆಟ್ ಪ್ರೂಫ್‌ ವಾಹನದ ಸೌಲಭ್ಯ ಒದಗಿಸಲಾಗಿದೆ.

ಪಹಲ್ಗಾಂ ದಾಳಿ ಬಳಿಕ ಜಾಗತಿಕ ಸಮುದಾಯದ ಮುಂದೆ ಪಾಕಿಸ್ತಾನದ ಬಣ್ಣ ಬಯಲು ಮಾಡುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಜೈಶಂಕರ್‌ ಅವರ ಭದ್ರತೆ ಕುರಿತು ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಪರಿಶೀಲನೆ ನಡೆಸಿದ್ದವು. ಈ ವೇಳೆ ಅವರ ಭದ್ರತೆ ಹೆಚ್ಚಳದ ಅವಶ್ಯಕತೆ ಮನಗಂಡು ಅವರಿಗೆ ಎರಡು ಗುಂಡಿನ ದಾಳಿ ನಿರೋಧಕ ವಾಹನ ವ್ಯವಸ್ಥೆ ಅವಶ್ಯಕತೆ ಕುರಿತು ಶಿಫಾರಸು ಮಾಡಲಾಗಿತ್ತು. ಅದರಂತೆ ಅವರಿಗೆ ಇತ್ತೀಚೆಗೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ 2023ರಲ್ಲಿ ಜೈಶಂಕರ್‌ ಅವರ ಭದ್ರತಾ ಶ್ರೇಣಿಯನ್ನು ವೈನಿಂದ ಝಡ್‌ಗೆ ಹೆಚ್ಚಿಸಲಾಗಿತ್ತು. ಇದರನ್ವಯ ಹಾಲಿ ಸಿಆರ್‌ಫಿಎಫ್‌ನ ತಂಡ ವಿದೇಶಾಂಗ ಸಚಿವರ ಭದ್ರತೆ ಹೊಣೆ ವಹಿಸಿಕೊಂಡಿವೆ.

ಚೀನಾ, ಟರ್ಕಿಯ 3 ಮಾಧ್ಯಮ ಎಕ್ಸ್‌ ಖಾತೆಗೆ ಭಾರತ ನಿಷೇಧ 

ನವದೆಹಲಿ: ಇತ್ತೀಚಿನ ಭಾರತ- ಪಾಕ್‌ ನಡುವಣ ಉದ್ವಿಗ್ನ ಪರಿಸ್ಥಿತಿ ವೇಳೆ ವಾಸ್ತವಾಂಶಕ್ಕೆ ವಿರುದ್ಧವಾದ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದ ಚೀನಾದ ಎರಡು ಮತ್ತು ಟರ್ಕಿ ದೇಶದ ಒಂದು ಮಾದ್ಯಮಗಳ ಎಕ್ಸ್‌ ಖಾತೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಯಾದ ಗ್ಲೋಬಲ್‌ ಟೈಮ್ಸ್‌, ಸರ್ಕಾರದ ಒಡೆತನದ ಸುದ್ದಿಸಂಸ್ಥೆ ಶಿನ್‌ಹ್ವಾ ಮತ್ತು ಟರ್ಕಿ ಸರ್ಕಾರದ ಸರ್ಕಾರಿ ಸ್ವಾಮ್ಯದ ಟಿಆರ್‌ಟಿ ವರ್ಡ್‌ ನಿಷೇಧಕ್ಕೆ ಒಳಗಾದ ಸುದ್ದಿ ಮಾಧ್ಯಮಗಳಾಗಿವೆ.

ಇದಕ್ಕೂ ಮೊದಲು ಈ ಮೂರು ಮಾಧ್ಯಮಗಳು, ಪಾಕಿಸ್ತಾನದ ದಾಳಿಯಲ್ಲಿ ಭಾರತದಲ್ಲಿ ಭಾರೀ ಪ್ರಮಾಣದ ಸೈನಿಕರು ಸಾವನ್ನಪ್ಪಿದ್ದಾರೆ, ಭಾರತದ ರಕ್ಷಣಾ ನೆಲೆಗಳಿಗೆ ಭಾರೀ ಹಾನಿಯಾಗಿದೆ ಎಂಬ ಪಾಕಿಸ್ತಾನದ ಪರ ಎಕ್ಸ್‌ ಹ್ಯಾಂಡಲ್‌ಗಳ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದವು. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿ ತನ್ನ ದೂರು ಕೂಡಾ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಸಿಂಧೂ ನದಿ ಒಪ್ಪಂದ ತಡೆ ಬೇಡ, ಮುಂದುವರಿಸಿ: ಭಾರತಕ್ಕೆ ಪಾಕ್ ಮನವಿ

ನವದೆಹಲಿ: ಪಹಲ್ಗಾಂ ನರಮೇಧದ ನಡೆಸಿ ಭಾರತ ಸಿಂಧೂ ನದಿ ಒಪ್ಪಂದ ರದ್ದುಗೊಳಿಸುವಂತೆ ಮಾಡಿ ರಾಜತಾಂತ್ರಿಕ ಪೆಟ್ಟು ತಿಂದಿದ್ದ ಪಾಕಿಸ್ತಾನ ಇದೀಗ ಸಿಂಧೂ ನದಿಗೆ ಒಪ್ಪಂದ ಮುಂದುವರೆಸುವಂತೆ ಭಾರತದ ಬಳಿ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಘೋಷಣೆಯಾಗಿದ್ದರೂ ಭಾರತ, ಪಾಕಿಸ್ತಾನದ ವಿಚಾರದಲ್ಲಿ ತೆಗೆದುಕೊಂಡಿದ್ದ ರಾಜತಾಂತ್ರಿಕ ನಿರ್ಧಾರನಿಂದ ಹಿಂದೆ ಸರಿದಿಲ್ಲ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕ್‌ನಲ್ಲಿ ಇದೀಗ ನೀರಿನ ಬಿಕ್ಕಟ್ಟೂ ಆರಂಭವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್‌ ಅಲಿ ಮುರ್ತಾಜಾ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿದ್ದು ತಮ್ಮ ನಿರ್ಧಾರವನ್ನು ಮರುಪರೀಶಿಸುವಂತೆ ಮನವಿ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜೊತೆಗೆ ‘ ಸಿಂಧೂ ನೀರನ್ನು ಪಾಕಿಸ್ತಾನದ ಕೋಟ್ಯಂತರ ಮಂದಿ ಅವಲಂಬಿತರಾಗಿದ್ದಾರೆ. ಆದರೆ ನೀರು ಸ್ಥಗಿತ ನಿರ್ಧಾರ ಕಾನೂನು ಬಾಹಿರ. ಇದು ಪಾಕಿಸ್ತಾನದ ಜನರು ಮತ್ತು ಆರ್ಥಿಕತೆ ಮೇಲಿನ ದಾಳಿಗೆ ಸಮಾನವಾಗಿದೆ’ ಎಂದು ಪಾಕಿಸ್ತಾನ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಉತ್ತರದ ಮಹಿಳೆಯರು ಬರೀ ಮನೆಗೆಲಸಕ್ಕೆ ಸೀಮಿತ: ದಯಾನಿಧಿ
ಶೀಘ್ರ ಇರಾನ್‌ ತೊರೆಯಿರಿ : ಭಾರತೀಯರಿಗೆ ಸೂಚನೆ