ಅಂಕಾರಾ: ವೈರಿರಾಷ್ಟ್ರ ಪಾಕಿಸ್ತಾನದ ಬೆನ್ನಿಗೆ ನಿಂತ ಕಾರಣ ಭಾರತ ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೀಡಿರುವ ಪೆಟ್ಟಿನಿಂದ ಟರ್ಕಿ ಕಂಗಾಲಾಗಿದ್ದು, ಭಾರತೀಯರ ಮನವೊಲಿಸಲು ಹರಸಾಹಸ ಪಡತೊಡಗಿದೆ.
ಈ ಸಂಬಂಧ ಟರ್ಕಿಯ ಪ್ರವಾಸೋದ್ಯಮ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಟರ್ಕಿಯ ಬಹುತೇಕ ಜನರಿಗೆ ಭಾರತ-ಪಾಕ್ ನಡುವಿನ ಸಂಘರ್ಷದ ಬಗ್ಗೆ ಗೊತ್ತೇ ಇಲ್ಲ. ಅದಕ್ಕೂ, ಪ್ರವಾಸೋದ್ಯಮಕ್ಕೂ ಸಂಬಂಧವಿಲ್ಲ.
ಭಾರತೀಯ ಪ್ರವಾಸಿಗರನ್ನು ನಾವು ಸೌಜನ್ಯದಿಂದ ನೋಡಿಕೊಳ್ಳುತ್ತೇವೆ ಹಾಗೂ ಆರಾಮ, ಸುರಕ್ಷತೆ ಮತ್ತು ತೃಪ್ತಿಯ ಭರವಸೆ ನೀಡುತ್ತೇವೆ. ಆದಕಾರಣ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟರ್ಕಿ ಪ್ರವಾಸವನ್ನು ರದ್ದು ಮಾಡುವ ಅಥವಾ ಮುಂದೂಡುವ ಅಗತ್ಯವಿಲ್ಲ’ ಎಂದು ಗೋಗರೆದಿದೆ.