ಜನನ, ಮರಣ ನೋಂದಣಿಗೆ ಆ್ಯಪ್‌

KannadaprabhaNewsNetwork | Published : Oct 31, 2024 12:47 AM

ಸಾರಾಂಶ

ಜನನ ಮತ್ತು ಮರಣ ನೋಂದಣಿಗಳನ್ನು ಸರಳಗೊಳಿಸುವ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಸಿಆರ್‌ಎಸ್) ಮೊಬೈಲ್ ಆ್ಯಪ್‌ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಬಿಡುಗಡೆ ಮಾಡಿದ್ದಾರೆ.

ನವದೆಹಲಿ: ಜನನ ಮತ್ತು ಮರಣ ನೋಂದಣಿಗಳನ್ನು ಸರಳಗೊಳಿಸುವ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಸಿಆರ್‌ಎಸ್) ಮೊಬೈಲ್ ಆ್ಯಪ್‌ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಬಿಡುಗಡೆ ಮಾಡಿದ್ದಾರೆ.

‘ಸಿಆರ್‌ಎಸ್‌ ಆ್ಯಪ್‌’ ಎಂದು ಕರೆಯಲ್ಪಡುವ ಮೊಬೈಲ್‌ ಅಪ್ಲಿಕೇಶನ್‌, ನಾಗರಿಕರು ಜನನ ಮತ್ತು ಮರಣಗಳನ್ನು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲೂ ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಅರ್ಥಾತ್‌ ಮನೆಯಿಂದಲೇ ಇನ್ನು ನೋಂದಣಿ ಮಾಡಬಹುದು.

ಇದು ನೋಂದಣಿಗಳನ್ನು ಡಿಜಿಟಲೀಕರಣ ಮಾಡುತ್ತದೆ ಹಾಗೂ ಈ ಪ್ರಕ್ರಿಯೆಯನ್ನು ಕಾಗದರಹಿತವಾಗಿಸುತ್ತದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಅವರು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಶಾ, ‘ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಮತ್ತು ಅವರ ರಾಜ್ಯದ ಅಧಿಕೃತ ಭಾಷೆಯಲ್ಲಿ ಜನನ-ಮರಣ ನೋಂದಾಯಿಸಲು ನಾಗರಿಕರಿಗೆ ಅವಕಾಶ ನೀಡಲಾಗಿದೆ. ಈ ಆ್ಯಪ್‌, ನೋಂದಣಿಗೆ ಬೇಕಾದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ’ ಎಂದಿದ್ದಾರೆ.

ಆ್ಯಪ್‌ ಹೀಗೆ ಕೆಲಸ ಮಾಡುತ್ತದೆ:

ರಿಜಿಸ್ಟ್ರಾರ್‌ಗಳು (ನೋಂದಣಿಗೆ ಇಚ್ಛಿಸುವವರು) ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಸಿಆರ್‌ಆರ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಬಳಿಕ ಯೂಸರ್ ಐಡಿ, ಪಾಸ್‌ವರ್ಡ್‌ ದಾಖಲಿಸಬೇಕು. ನೈಜತೆ ಪರಿಶೀಲನೆಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಒಟಿಪಿ ಬರುತ್ತದೆ. ಅದನ್ನು ದೃಢೀಕರಿಸಬೇಕು.

ಆ್ಯಪ್‌ ಓಪನ್‌ ಆದ ನಂತರ ಮುಖಪುಟ ಪರದೆಯಲ್ಲಿ ಪ್ರೊಫೈಲ್‌, ಜನನ, ಸಾವು. ಶುಲ್ಕ- ಆಯ್ಕೆಗಳು ಕಾಣಿಸುತ್ತವೆ.ಜನ್ಮವನ್ನು ನೋಂದಾಯಿಸಲು,‘ಜನನ’ ಮತ್ತು ನಂತರ ‘ಜನನನೋಂದಣಿ’ ಆಯ್ಕೆ ಮಾಡಿ. ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದಿಸಿ. ಅಗತ್ಯ ದಾಖಲೆ ಲಗತ್ತಿಸಿ.ಮರಣವನ್ನು ನೋಂದಾಯಿಸಲು ಇದೇ ರೀತಿಯ ಪ್ರಕ್ರಿಯೆ ಮಾಡಿ. ಮರಣ ದಿನಾಂಕ, ವಿಳಾಸ, ಇತರ ಮಾಹಿತಿ ನೀಡಿ. ಅಗತ್ಯ ದಾಖಲೆ ಲಗತ್ತಿಸಿ.ಎಲ್ಲ ವಿವರ ನೀಡಿದ ನಂತರ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲೇ ಕಟ್ಟಿದರೆ ಜನನ ಅಥವಾ ಮರಣದ ಡಿಜಿಟಲ್ ಪ್ರಮಾಣಪತ್ರ ಬರುತ್ತದೆ. ಅವನ್ನು ಡೌನ್‌ಲೋಡ್‌ ಮಾಡಿ ಇಟ್ಟುಕೊಳ್ಳಿ.

Share this article