- ಅ.3ರಿಂದ ಕರ್ನಾಟಕಕ್ಕೆ ಕೇಂದ್ರ ತಂಡ ಭೇಟಿ
----
ಹಿಂಗಾರಿಗೂ ಎಲ್ನಿನೋ ಕಾಟ:ಕೃಷಿಗೆ ಹೊಡೆತ?ನವದೆಹಲಿ: ಎಲ್ ನಿನೋ ಪರಿಣಾಮದಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಬರುವ ಹಿಂಗಾರು ಬೆಳೆ ಅವಧಿ ಸವಾಲಾಗಿ ಪರಿಣಮಿಸಲಿದೆ. ಇದು ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಆತಿಶ್ ಚಂದ್ರ ಎಚ್ಚರಿಸಿದ್ದಾರೆ.ಪಿಟಿಐ ನವದೆಹಲಿ
ಹಿಂಗಾರು ಬೆಳೆ ಸಿದ್ಧತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ತೀವ್ರ ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅ.3ರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬರ ಅಧ್ಯಯನ ತಂಡವನ್ನು ಕಳುಹಿಸಿಕೊಡಲಿದೆ. ಹವಾಮಾನ ಬದಲಾವಣೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಚೆಗೆ ಮುಕ್ತಾಯಗೊಂಡ ಮುಂಗಾರು ಬೆಳೆ ಮೇಲೆ ಇದರ ಪರಿಣಾಮ ಆಗಿದೆ’ ಎಂದರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ತೀವ್ರ ಬರದಿಂದ ತತ್ತರಿಸುತ್ತಿವೆ ಎಂದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಬರಪೀಡಿತ ರಾಜ್ಯಗಳ ಅಧಿಕಾರಿಗಳು ಮುಂಗಾರು ಬೆಳೆಗಳಿಗೆ ಎದುರಾಗಿರುವ ಆತಂಕ ಪರಿಹರಿಸಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜತೆಗೆ, ಬರಪೀಡಿತ ರಾಜ್ಯಗಳ ಜತೆಗೆ ಕೇಂದ್ರ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಎಲ್ಲಾ ಕಡೆ ಬೆಳೆ ವೈಫಲ್ಯ ಆಗಿಲ್ಲದಿದ್ದರೂ ಬೆಳೆಗಳ ಮೇಲೆ ಬರ ಗಂಭೀರ ಪರಿಣಾಮ ಬೀರಿದೆ. ಕೆಲವು ಕಡೆ ಉತ್ತಮ ಬೆಳೆ ಬಂದಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಬರ, ನೀರಿನ ಅಭಾವದ ಅಪಾಯ ಎದುರಾಗಿದೆ ಎಂದರು.