ಗಮನಿಸಿ ... ಇಂದಿನಿಂದ ಈ ಬದಲಾವಣೆಗಳು ಜಾರಿ

KannadaprabhaNewsNetwork |  
Published : Apr 01, 2026, 01:15 AM ISTUpdated : Apr 01, 2026, 04:54 AM IST
money

ಸಾರಾಂಶ

ಹೊಸ ಆದಾಯ ತೆರಿಗೆ ನೀತಿ, ರೈಲ್ವೆ ಟಿಕೆಟ್‌ ಫಂಡ್‌ ನಿಯಮದಲ್ಲಿ ಬದಲಾವಣೆ, ಎಟಿಎಂಗಳ ನೀತಿಯಲ್ಲಿ ಬದಲಾವಣೆ ಸೇರಿದಂತೆ ಜನಸಾಮಾನ್ಯ ನಿತ್ಯ ಜೀವನದ ಮೇಲೆ ಪರಿಣಾಮ ಬಿರುವ ಹಲವು ವಿಷಯಗಳು ಏ.1ರಿಂದ ಜಾರಿಗೆ ಬರುವಂತೆ ಬದಲಾಗಲಿವೆ. ಅದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ

 ಹೊಸ ಆದಾಯ ತೆರಿಗೆ ನೀತಿ, ರೈಲ್ವೆ ಟಿಕೆಟ್‌ ಫಂಡ್‌ ನಿಯಮದಲ್ಲಿ ಬದಲಾವಣೆ, ಎಟಿಎಂಗಳ ನೀತಿಯಲ್ಲಿ ಬದಲಾವಣೆ ಸೇರಿದಂತೆ ಜನಸಾಮಾನ್ಯ ನಿತ್ಯ ಜೀವನದ ಮೇಲೆ ಪರಿಣಾಮ ಬಿರುವ ಹಲವು ವಿಷಯಗಳು ಏ.1ರಿಂದ ಜಾರಿಗೆ ಬರುವಂತೆ ಬದಲಾಗಲಿವೆ. ಅದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ

 ಡಿಜಿಟಲ್‌ ಪಾವತಿಗೆ ಡಬಲ್‌ ದೃಢೀಕರಣ

ಆರ್‌ಬಿಐನ ಹೊಸ ನಿಯಮಗಳ ಅನ್ವಯ ಎಲ್ಲಾ ಡಿಜಿಟಲ್‌ ಪಾವತಿಗಳು 2 ಹಂತದ ದೃಢೀಕರಣಕ್ಕೆ ಒಳಪಡಬೇಕು. ಹಾಲಿ ಎಸ್‌ಎಂಎಸ್‌ ಆಧರಿತ ಒಟಿಪಿ ವ್ಯವಸ್ಥೆ ಜಾರಿಯಲ್ಲಿದೆ. ಇದರ ಜೊತೆಗೆ ಇನ್ನೊಂದು ಹಂತದ ದೃಢೀಕರಣವೂ ಅಗತ್ಯವಾಗಲಿದೆ.

ಪಾನ್‌ ಪಡೆಯಲು ಹೆಚ್ಚುವರಿ ದಾಖಲೆ ಕಡ್ಡಾಯ

ಇದುವರೆಗೆ ಕೇವಲ ಆಧಾರ್‌ ದೃಢೀಕರಿಸುವ ಮೂಲಕ ಹೊಸ ಪಾನ್‌ ಪಡೆಯಬಹುದಿತ್ತು. ಆದರೆ ಏ.1ರಿಂದ ಹೆಚ್ಚುವರಿ ದಾಖಲೆ ಸಲ್ಲಿಸಬೇಕು. ಜೊತೆಗೆ ಆಧಾರ್‌ ಕಾರ್ಡ್‌ನಲ್ಲಿ ಇರುವಂತೆಯೇ ಪಾನ್‌ನಲ್ಲೂ ಹೆಸರು ಬರಲಿದೆ. ಹೀಗಾಗಿ ಆಧಾರ್‌ನಲ್ಲಿ ಸರಿಯಾದ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

ಗೃಹ ಭತ್ಯೆ ಪಡೆಯುವ ನಿಯಮ ಕಠಿಣ

ಗೃಹ ಭತ್ಯೆ ಪಡೆಯುವ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ ಬಾಡಿಗೆ ಪಾವತಿ ದಾಖಲೆ ಜೊತೆ ಮನೆ ಮಾಲೀಕರ ಪಾನ್‌ ಕಾರ್ಡ್‌ ನೀಡುವುದು ಕಡ್ಡಾಯ. ಕೆಲವೊಂದು ಪ್ರಕರಣಗಳಲ್ಲಿ ಮಾಲೀಕರ ಪೂರ್ಣ ಮಾಹಿತಿ ಮತ್ತು ಬಾಡಿಗೆ ಮೊತ್ತ ನಮೂದಿಸುವುದು ಕಡ್ಡಾಯವಾಗಲಿದೆ.

ಎಟಿಎಂನಲ್ಲಿ ದೈನಂದಿನ ವಿತ್‌ಡ್ರಾವಲ್‌ ಮಿತಿ ಕಡಿತ

ಡಿಜಿಟಲ್‌ ಮತ್ತು ಆನ್‌ಲೈನ್‌ ಹಣ ಪಾವತಿ ಉತ್ತೇಜಿಸುವ ನಿಟ್ಟಿನಲ್ಲಿ ಬಂಧನ್‌ ಸೇರಿದಂತೆ ಕೆಲ ಬ್ಯಾಂಕ್‌ಗಳು ಕಾರ್ಡ್‌ ಬಳಸಿ ಎಟಿಎಂಗಳಲ್ಲಿ ದೈನಂದಿನ ಹಣ ಹಿಂಪಡೆತಕ್ಕೆ ಇದ್ದ ಮಿತಿಯನ್ನು ಶೇ.50ರವರೆಗೂ ಕಡಿತ ಮಾಡಿವೆ.

ಎಚ್‌ಆರ್‌ಐ ರಿಯಾಯ್ತಿ ವ್ಯಾಪ್ತಿಗೆ ಬೆಂಗಳೂರು

ಶೇ.50ರಷ್ಟು ಎಚ್‌ಆರ್‌ಐ ವಿನಾಯ್ತಿ ಪಡೆಯಲು ಅರ್ಹವಾದ ಮೆಟ್ರೋ ನಗರಗಳ ಪಟ್ಟಿಯಲ್ಲಿ ದೆಹಲಿ, ಮುಂಬೈ,ಕೋಲ್ಕತಾ, ಚೆನ್ನೈ ಜೊತೆಗೆ ಬೆಂಗಳೂರು, ಪುಣೆ, ಹೈದ್ರಾಬಾದ್‌ ಮತ್ತು ಅಹಮದಾಬಾದ್‌ ನಗರಗಳು ಕೂಡಾ ಸ್ಥಾನ ಪಡೆದುಕೊಂಡಿವೆ.

ಡಿವಿಡೆಂಡ್‌ ಮತ್ತು ಮ್ಯೂಚುವಲ್‌ ಫಂಡ್ ಆದಾಯ

ಮ್ಯೂಚುವಲ್‌ ಫಂಡ್‌ ಮತ್ತು ಡಿವಿಡೆಂಡ್‌ ಮೂಲಕ ಸಂಗ್ರಹಿಸಿದ ಆದಾಯವನ್ನು ಲೆಕ್ಕಹಾಕುವಾಗ, ಬಡ್ಡಿಪಾವತಿಗೆ ಮಾಡಿದ ವೆಚ್ಚವನ್ನು ಆದಾಯದಲ್ಲಿ ಕಡಿತ ಮಾಡಲು ಅವಕಾಶ ಇರದು. ಸಾಲ ಮಾಡಿ ಹೂಡಿಕೆ ಮಾಡಿದ ಹಣದಿಂದ ಬಂದ ಆದಾಯಕ್ಕೂ ಇದೇ ನೀತಿ ಅನ್ವಯವಾಗಲಿದೆ.

ವಿದೇಶ ಪ್ರವಾಸ ಮಾಡುವವರಿಗೆ ರಿಲೀಫ್‌

ವಿದೇಶ ಪ್ರವಾಸ ಮಾಡುವವರಿಂದ ಸಂಗ್ರಹಿಸಲಾಗುತ್ತಿದ್ದ ಟಿಸಿಎಸ್‌ ಪ್ರಮಾಣವನ್ನು ಕಡಿತ ಮಾಡಲಾಗಿದೆ. ಈ ಮೊದಲು 10 ಲಕ್ಷದ ಮೊತ್ತಕ್ಕೆ ಶೇ.5 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.20ರಷ್ಟು ಟಿಸಿಎಸ್‌ ಕಡಿತ ಮಾಡಲಾಗುತ್ತಿತ್ತು. ಅದನ್ನು ಇದೀಗ ಒಟ್ಟು ವೆಚ್ಚದ ಶೇ.2ಕ್ಕೆ ಇಳಿಸಲಾಗಿದೆ.

ವಾಹನ ವಿಮೆಯ ಬಡ್ಡಿಯಿಂದ ಟಿಡಿಎಸ್‌ ಕಡಿತ ಇಲ್ಲ

ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ವಿಮೆಯ ಹಣಕ್ಕೆ ಸಿಗುವ ಬಡ್ಡಿಯಿಂದ ಇದುವರೆಗೂ ಟಿಡಿಎಸ್‌ ಹಣ ಕಡಿತ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಅಂಥ ಕಡಿತ ಇರದು. ಪರಿಣಾಮ ಗ್ರಾಹಕರಿಗೆ ಬಡ್ಡಿ ಹಣ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ.

ರೈಲು ಬಿಡುವ 8 ಗಂಟೆ ಮುಂಚೆ ಟಿಕೆಟ್

ರೈಲು ಪ್ರಯಾಣದ ಟಿಕೆಟ್‌ ಅನ್ನು ರೈಲು ಹೊರಡುವ 8 ಗಂಟೆಗಿಂತ ಮೊದಲು ರದ್ದು ಮಾಡಿದರೆ ಮಾತ್ರವೇ ಇನ್ನು ರೀಫಂಡ್‌ ಸಿಗಲಿದೆ. ಈ ಮುನ್ನ ಪ್ರಯಾಣದ 4 ತಾಸು ಮುಂಚಿನವರೆಗೂ ಟಿಕೆಟ್‌ ರದ್ದು ಮಾಡಿ ರೀಫಂಡ್‌ ಪಡೆಯಬಹುದಾಗಿತ್ತು. ಪ್ರಯಾಣಕ್ಕಿಂತ ಮುಂಚಿನ 8-24 ಗಂಟೆ ವ್ಯಾಪ್ತಿಯಲ್ಲಿ ಟಿಕೆಟ್‌ ರದ್ದು ಮಾಡಿದರೆ ಟಿಕೆಟ್‌ನ ಶೇ.50ರಷ್ಟು, 24-72 ಗಂಟೆ ವ್ಯಾಪ್ತಿಯಲ್ಲಿ ಶೇ.75ರಷ್ಟು ಹಣ ರೀಫಂಡ್‌ ಆಗಲಿದೆ. 72 ಗಂಟೆಗಿಂತ ಹಿಂದಿನ ಅವಧಿಯಲ್ಲಿ ರದ್ದು ಮಾಡಿದರೆ ಕನಿಷ್ಠ ಶುಲ್ಕವನ್ನಷ್ಟೇ ಕಡಿತ ಮಾಡಲಾಗುತ್ತದೆ.

ಕ್ಲಾಸ್‌ ಬದಲಾವಣೆಗೆ ಅ‍ವಕಾಶ

ರೈಲು ಪ್ರಯಾಣಕ್ಕೆ 30 ನಿಮಿಷ ಮೊದಲು ಪ್ರಯಾಣಿಕರು ತಾವು ಪ್ರಯಾಣಿಸುವ ಕ್ಲಾಸ್‌ ಅನ್ನು ಮೇಲ್ದರ್ಜೆಗೇರಿಸಲೂ ಅವಕಾಶ ಸಿಗಲಿದೆ. ಈ ಹಿಂದೆ ರಿಸರ್ವೇಷನ್‌ ಚಾರ್ಚ್‌ ಸಿದ್ಧಪಡಿಸುವ ಮೊದಲಷ್ಟೇ ಈ ರೀತಿಯ ಬದಲಾವಣೆಗೆ ಅವಕಾಶವಿತ್ತು.

ಬೋರ್ಡಿಂಗ್‌ ಪಾಯಿಂಟ್‌ ಬದಲಾವಣೆ:

ರೈಲು ನಿರ್ಗಮಿಸುವ ಅರ್ಧಗಂಟೆ ಮೊದಲು ಪ್ರಯಾಣಿಕರು ತಾವು ರೈಲು ಹತ್ತುವ ಸ್ಥಳವನ್ನೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಚಾರ್ಟ್‌ ಸಿದ್ಧಪಡಿಸುವ ಮೊದಲಷ್ಟೇ ಇಂಥ ಬದಲಾವಣೆಗೆ ಅವಕಾಶ ಇತ್ತು.

ತತ್ಕಾಲ್‌ ಬುಕ್ಕಿಂಗ್‌ನಲ್ಲಿ ಬದಲಾವಣೆ:

ತತ್ಕಾಲ್‌ ಬುಕ್ಕಿಂಗ್‌ಗೆ ಆಧಾರ್‌ ಆಧರಿತ ಒಟಿಪಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮೂಲಕ ನಕಲಿ ಬುಕ್ಕಿಂಗ್‌ಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ಐಟಿಆರ್‌ ಮಾಹಿತಿ ಸಲ್ಲಿಕೆ ಅವಧಿ ವಿಸ್ತರಣೆ

ವೇತನ ಪಡೆಯುವ ಸಿಬ್ಬಂದಿ (ಐಟಿಆರ್‌ -1 ಮತ್ತು ಐಟಿಆರ್‌-1)ಗಳಿಗೆ ಈ ಹಿಂದಿನಂತೆಯೇ ಮಾಹಿತಿ ಸಲ್ಲಿಕೆ ಅವಧಿ ಜು.21 ಇರಲಿದೆ. ಆದರೆ ಲೆಕ್ಕಪರಿಶೋಧನೆ ಬೇಕಿರದ (ಐಟಿಆರ್-3, ಐಟಿಆರ್‌ -4) ಗ್ರಾಹಕರಿಗೆ ಮಾಹಿತಿ ಸಲ್ಲಿಕೆ ಅವಧಿಯನ್ನು ಆ.31ರವರೆಗೆ ವಿಸ್ತರಿಸಲಾಗಿದೆ.

ಪರಿಷ್ಕೃತ ರಿಟರ್ನ್ಸ್‌ ಸಲ್ಲಿಕೆ ಅವಧಿ ವಿಸ್ತರಣೆ

ಪರಿಷ್ಕೃತ ಆದಾಯ ರಿಟರ್ನ್ಸ್‌ ಸಲ್ಲಿಕೆಗೆ ಈ ಮೊದಲು ಪ್ರತಿ ವರ್ಷದ ಡಿ.31 ಕಡೆಯ ದಿನವಾಗಿತ್ತು. ಅಂದರೆ ಮೊದಲ ಗಡುವಿನಿಂದ 9 ತಿಂಗಳು ಹೆಚ್ಚಿನ ಅವಧಿ. ಅದನ್ನುಇದೀಗ ಮಾ.31ಕ್ಕೆ ವಿಸ್ತರಿಸಲಾಗಿದೆ. ಅಂದರೆ ಗ್ರಾಹಕರಿಗೆ 12 ತಿಂಗಳ ಕಾಲಾವಕಾಶ ಸಿಗಲಿದೆ.=

ಡಾಟಾ ಸೆಂಟರ್‌ಗಳಿಗೆ ತೆರಿಗೆ ರಜೆ

ಭಾರತದಲ್ಲಿ ಡಾಟಾ ಸೆಂಟರ್‌ ಸ್ಥಾಪಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೂ ತೆರಿಗೆ ರಜೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಅದು ಏ.1ರಿಂದ ಜಾರಿಗೆ ಬರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

40% ವಕೀಲರು ನಕಲಿ : ಬಾರ್‌ ಕೌನ್ಸಿಲ್‌ ಅಧ್ಯಕ್ಷ
ಟ್ರಂಪ್‌ ಪುತ್ರಿಯ ಹತ್ಯೆಗೂ ಸಂಚು ರೂಪಿಸಿದ್ದ ಉಗ್ರ