ವಿಶೇಷ ಸ್ಥಾನಮಾನ ನೀಡುವ 370 ವಿಧಿಯ ಮರುಜಾರಿ : ಕಾಶ್ಮೀರದ ವಿಧಾನಸಭೆಯಲ್ಲಿ 3ನೇ ದಿನವೂ ಮಾರಾಮಾರಿ

KannadaprabhaNewsNetwork | Updated : Nov 09 2024, 04:51 AM IST

ಸಾರಾಂಶ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯ ಮರುಜಾರಿ ಕುರಿತು ವಿಧಾನಸಭೆಯಲ್ಲಿ ನಡೆಯುತ್ತಿರುವ ಗದ್ದಲ 3ನೇ ದಿನಕ್ಕೆ ಕಾಲಿಟ್ಟಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯ ಮರುಜಾರಿ ಕುರಿತು ವಿಧಾನಸಭೆಯಲ್ಲಿ ನಡೆಯುತ್ತಿರುವ ಗದ್ದಲ 3ನೇ ದಿನಕ್ಕೆ ಕಾಲಿಟ್ಟಿದೆ. 370ನೇ ವಿಧಿ ಮರುಜಾರಿ ಬೆಂಬಲಿಸಿ ಪಿಡಿಪಿ ಪಕ್ಷದ ಶಾಸಕ ಮೊಹಮ್ಮದ್‌ ಫಯಾಜ್‌, ಶುಕ್ರವಾರದ ಕಲಾಪದ ವೇಳೆ ಬ್ಯಾನರ್‌ ಪ್ರದರ್ಶಿಸಿದರು.

 ಈ ವೇಳೆ ಬಿಜೆಪಿ ‘ಭಾರತ್‌ ಮಾತಾ ಕಿ ಕೈ’ ಘೋಷಣೆ ಕೂಗಿ ಪ್ರತಿಭಟಿಸುವುದರ ಜೊತೆಗೆ ಬ್ಯಾನರ್‌ ಕಸಿದುಕೊಳ್ಳಲು ಯತ್ನಿಸಿತು. ಈ ವೇಳೆ ಕಳೆದೆರಡು ದಿನದಂತೆ ಕೈಕೈ ಮಿಲಾಯಿಸುವುದು, ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿಯುವುದು ಹಾಗೂ ತಳ್ಳಾಡಿದ ಘಟನೆಗಳು ಮರುಕಳಿಸಿವೆ.

ಕಾಶ್ಮೀರದಲ್ಲಿ ಸೇನೆಗುಂಡಿಗೆ ಇಬ್ಬರು ಉಗ್ರರು ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಮೇರೆಗೆ ಕಾಶ್ಮೀರ ಪೊಲೀಸರು ಗುರುವಾರ ತಡರಾತ್ರಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರಿಗೆ ಅನುಮಾನ ಬಾರದಂತೆ ಆ ಸ್ಥಳದಲ್ಲಿದ್ದ ಜನರನ್ನು ಸ್ಥಳಾಂತರಗೊಳಿಸಿ ಆ ಬಳಿಕ ಗುಂಡಿನ ಚಕಮಕಿ ಆರಂಭಿಸಿದ್ದಾರೆ. 

ಶುಕ್ರವಾರ ಬೆಳಿಗ್ಗೆ ವರೆಗೂ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ. ಎನ್‌ಕೌಂಟರ್‌ ನಡೆದ ಪ್ರದೇಶದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಗ್ರಾಮ ಕಾವಲುಗಾರರ ಹತ್ಯೆಗೈದ ಕಾಶ್ಮೀರಿ ಉಗ್ರರು

ಕಿಶ್ತ್‌ವಾರ್‌: ಯೋಧರ ಜೊತೆಗೆ ಅಮಾಯಕ ನಾಗರಿಕರನ್ನೂ ಹತ್ಯೆ ಮಾಡುವ ದುಷ್ಕೃತ್ಯ ಮುಂದುವರೆಸಿರುವ ಉಗ್ರರು, ಇದೀಗ ಜಮ್ಮುವಿನ ಕಿಶ್ತ್‌ವಾರ್‌ನಲ್ಲಿ ಇಬ್ಬರು ಗ್ರಾಮ ಕಾವಲುಗಾರರನ್ನು ಹತೈಗೈದಿದ್ದಾರೆ. ಗುರುವಾರ ರಾತ್ರಿ ನಜೀರ್ ಅಹಮದ್‌ ಮತ್ತು ಕುಲದೀಪ್‌ ಕುಮಾರ್ ಎಂಬಿಬ್ಬರನ್ನು ಹತ್ಯೆ ಮಾಡಲಾಗಿದೆ. ಅವರ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ. 

ಈ ಹಿನ್ನೆಲೆ ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ಯೆಯ ಹೊಣೆಯನ್ನು ಜೈಷ್‌ ಸಂಘಟನೆಯ ಭಾಗವಾದ ಕಾಶ್ಮೀರ್‌ ಟೈಗರ್ಸ್‌ ಹೊತ್ತುಕೊಂಡಿತ್ತು. ಹತ್ಯೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಶುಕ್ರವಾರ ಬಂದ್‌ ಆಚರಿಸಲಾಯಿತು. ಅಲ್ಲದೆ ‘ಭಾರತ್‌ ಮಾತಾಕಿ ಜೈ, ಪಾಕಿಸ್ತಾನ ಮುರ್ದಾಬಾದ್‌’ ಎಂಬ ಘೋಷಣೆ ಕೂಗಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು. ಪರಿಣಾಮವಾಗಿ ಸಂಚಾರ ವ್ಯವಸ್ಥೆ ಸ್ಥಗಿತವಾಗಿತ್ತು. ಗಾರ್ಡ್‌ಗಳ ಹತ್ಯೆಯನ್ನು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಸಿಎಂ ಒಮರ್‌ ಅಬ್ದುಲ್ಲಾ, ಪಿಡಿಪಿ, ಬಿಜೆಪಿ, ಕಾಂಗ್ರೆಸ್‌ ನಾಯಕರು ಖಂಡಿಸಿದ್ದಾರೆ.

Share this article