ಭಾರತದಲ್ಲಿ ಚಾಟ್‌ಜಿಪಿಟಿ ಗೋ 1 ವರ್ಷ ಉಚಿತ

KannadaprabhaNewsNetwork |  
Published : Nov 05, 2025, 01:45 AM ISTUpdated : Nov 05, 2025, 06:05 AM IST
chat GPT

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ಕಂಪನಿ ‘ಓಪನ್‌ಎಐ’ ಭಾರತೀಯರಿಗೆ ಬಂಪರ್‌ ಕೊಡುಗೆ ನೀಡಲು ಮುಂದಾಗಿದೆ. ಅಧಿಕ ಕೋರಿಕೆಯ ಮಿತಿ ಹಾಗೂ ಚಿತ್ರಗಳನ್ನು ನೀಡುವ ಸಾಮರ್ಥ್ಯವಿರುವ ತನ್ನ ‘ಚಾಟ್‌ಜಿಪಿಟಿ ಗೋ’ವನ್ನು 1 ವರ್ಷ ಕಾಲ ಭಾರತೀಯರಿಗೆ ಉಚಿತವಾಗಿ ನೀಡಲಾಗುವುದು ಎಂದು ಮಂಗಳವಾರ ಘೋಷಿಸಿದೆ.

 ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಕಂಪನಿ ‘ಓಪನ್‌ಎಐ’ ಭಾರತೀಯರಿಗೆ ಬಂಪರ್‌ ಕೊಡುಗೆ ನೀಡಲು ಮುಂದಾಗಿದೆ. ಅಧಿಕ ಕೋರಿಕೆಯ ಮಿತಿ ಹಾಗೂ ಚಿತ್ರಗಳನ್ನು ನೀಡುವ ಸಾಮರ್ಥ್ಯವಿರುವ ತನ್ನ ‘ಚಾಟ್‌ಜಿಪಿಟಿ ಗೋ’ವನ್ನು 1 ವರ್ಷ ಕಾಲ ಭಾರತೀಯರಿಗೆ ಉಚಿತವಾಗಿ ನೀಡಲಾಗುವುದು ಎಂದು ಮಂಗಳವಾರ ಘೋಷಿಸಿದೆ.

ಇತ್ತೀಚೆಗೆ ಜಿಯೋ ಹಾಗೂ ಏರ್‌ಟೆಲ್‌ ಕೂಡ ತಮ್ಮ ಕೃತಕ ಬುದ್ಧಿಮತ್ತೆ ಸೇವೆಯ ಫ್ರೀ ಆಫರ್‌ ನೀಡಿದ್ದವು. ಅದರ ಬೆನ್ನಲ್ಲೇ ಚಾಟ್‌ ಜಿಪಿಟಿ ಈ ಆಫರ್‌ ನೀಡಿದೆ.

ನ.4ರಿಂದ ಈ ಆಫರ್ ಆರಂಭವಾಗಲಿದ್ದು, ಮುಂದಿನ ವರ್ಷ ನ.4ರವರೆಗೆ ಚಾಲ್ತಿಯಲ್ಲಿರಲಿದೆ. ಈ ಸೀಮಿತ ಸಮಯಲ್ಲಿ ನೋಂದಣಿ ಮಾಡುವ ಎಲ್ಲಾ ಭಾರತೀಯ ಬಳಕೆದಾರರಿಗೆ ಚಾಟ್‌ಜಿಪಿಟಿ ಗೊ 1 ವರ್ಷ ಉಚಿತವಾಗಿ ಲಭ್ಯವಾಗಲಿದೆ. ಭಾರತದಲ್ಲಿರುವ ಬಳಕೆದಾರರು ಮಾತ್ರ ಇದಕ್ಕೆ ಅರ್ಹರು ಎಂದು ಕಂಪೆನಿ ತಿಳಿಸಿದೆ. ಕಳೆದ ಆಗಸ್ಟ್‌ನಲ್ಲಿ ಚಾಟ್‌ಜಿಪಿಟಿ ಗೋ ಭಾರತದಲ್ಲಿ ಆರಂಭವಾಗಿತ್ತು. ಇದು ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಅಧಿಕ ಚಿತ್ರಗಳನ್ನು ಸಿದ್ಧಪಡಿಸಿಕೊಡುವ ಸಾಮರ್ಥ್ಯ ಹೊಂದಿದೆ.

ಸೆನ್ಸೆಕ್ಸ್ 519, ನಿಫ್ಟಿ 165 ಅಂಕದಷ್ಟು ಭಾರಿ ಕುಸಿತ

ಮುಂಬೈ: ದೇಶದ ಷೇರುಪೇಟೆ ಮಂಗಳವಾರ ಭಾರಿ ಕುಸಿತ ಕಂಡಿದ್ದು, ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 519 ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 165 ಅಂಕ ಕುಸಿತ ಕಂಡಿವೆ.ವಿದೇಶಿ ನಿಧಿಯ ಹೊರ ಹರಿವು, ಏಷ್ಯನ್‌ ಮತ್ತು ಯುರೋಪ್‌ ಷೇರುಪೇಟೆಯಲ್ಲಿನ ಕುಸಿತ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಮಂಗಳವಾರ ದಿನದಂತ್ಯಕ್ಕೆ ಸೆನ್ಸೆಕ್ಸ್‌ 519.34 ಅಂಕ ಕುಸಿದು 83,459.15ರಲ್ಲಿ ಮುಕ್ತಾಯಗೊಂಡಿತು. ನಿಫ್ಟಿ 165.70 ಅಂಕ ಇಳಿಕೆ ಕಂಡು 25,597.65ರಲ್ಲಿ ಕೊನೆಗೊಂಡಿತು.ಸೋಮವಾರ ಸೆನ್ಸೆಕ್ಸ್‌ 39.78 ಹಾಗೂ ನಿಫ್ಟಿ 41.25 ಅಂಕಗಳ ಏರಿಕೆಯೊಂದಿಗೆ ಕ್ರಮವಾಗಿ 83,978.49 ಹಾಗೂ 25,763.35ರಲ್ಲಿ ಅಂತ್ಯಗೊಂಡಿದ್ದವು.

ಅಂಬಾನಿ ವನತಾರಾ ವನ್ಯಜೀವಿ ಸಂರಕ್ಷಣೆ: ಸಿಐಟಿಇಎಸ್‌ ಕ್ಲೀನ್‌ಚಿಟ್‌

ನವದೆಹಲಿ: ರಿಲಯನ್ಸ್‌ ಫೌಂಡೇಶನ್‌ ಒಡೆತನದ ಗುಜರಾತಿನ ಜಾಮ್‌ನಗರದಲ್ಲಿರುವ ವನತಾರಾ ಹಾಗೂ ಅದರ ಎರಡು ಅಂಗ ಸಂಸ್ಥೆಗಳಾದ ಗ್ರೀನ್ ಝೂಲಾಜಿಕಲ್ ರೆಸ್ಕ್ಯೂ ಮತ್ತು ರಿಕವರಿ ಸೆಂಟರ್‌ಗಳು ಪ್ರಾಣಿಗಳ ಆಮದು ಪ್ರಕ್ರಿಯೆಯಲ್ಲಿ ಭಾರತದ ಎಲ್ಲಾ ಕಾನೂನು ಪಾಲಿಸಿದೆ ಎಂದು ಸಿಐಟಿಎಎಸ್‌ ಕ್ಲೀನ್‌ಚಿಟ್‌ ನೀಡಿದೆ. ಅಲ್ಲದೇ ವನತಾರಾದ ಕಲ್ಯಾಣ ಕಾರ್ಯವನ್ನು ಶ್ಲಾಘಿಸಿದೆ.ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ರಚಿಸಿದ್ದ ಸಮಿತಿ, ವನತಾರಾದಲ್ಲಿ ಪ್ರಾಣಿಗಳ ಆಮದು ಪ್ರಕ್ರಿಯೆಯಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಇತರ ಕಾನೂನುಗಳು ಪಾಲನೆಯಾಗಿದೆ ಎಂದು ಹೇಳಿತ್ತು. ಈ ಬೆನ್ನಲ್ಲೇ ಇದೀಗ ವಿಶ್ವದಾದ್ಯಂತ ಅಳಿವಿನ ಅಂಚಿನಲ್ಲಿರುವ ವಿವಿಧ ಪ್ರಭೇದದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಅಕ್ರಮ ವ್ಯಾಪಾರದ ಬಗ್ಗೆ ಮೇಲ್ವಿಚಾರಣೆ ಮಾಡುವ ಸಿಐಟಿಇಎಸ್‌ ಕ್ಲೀನ್‌ಚಿಟ್‌ ನೀಡಿದೆ.

₹5 ಪೌಚಲ್ಲಿ ₹4 ಲಕ್ಷ ಕೇಸರಿ ಹೇಗೆ? ಸಲ್ಲುಗೆ ಕೋರ್ಟ್‌ ಪ್ರಶ್ನೆ, ನೊಟೀಸ್‌

ಕೋಟಾ (ರಾಜಸ್ಥಾನ): ಪಾನ್‌ ಮಸಾಲಾ ಜಾಹೀರಾತು ಯುವಜನರ ದಾರಿತಪ್ಪಿಸುತ್ತಿದೆ ಎಂಬ ದೂರಿನ ಹಿನ್ನೆಲೆ ಕೋಟಾದ ಗ್ರಾಹಕ ಕೋರ್ಟ್‌ ನಟ ಸಲ್ಮಾನ್‌ ಖಾನ್‌ ಮತ್ತು ರಾಜಶ್ರೀ ಪಾನ್‌ ಮಸಾಲಾ ಕಂಪನಿಗೆ ನೋಟಿಸ್‌ ಜಾರಿ ಮಾಡಿದೆ.‘ಸಲ್ಮಾನ್ ರಾಯಭಾರಿಯಾಗಿರುವ ಜಾಹೀರಾತಿನಲ್ಲಿ, ಪಾನ್‌ ಮಸಾಲಾದಲ್ಲಿ ಏಲಕ್ಕಿ ಮತ್ತು ಕೇಸರಿ ಇರುವುದಾಗಿ ಹೇಳಲಾಗಿದೆ. ಇದು ಸುಳ್ಳು ಮತ್ತು ಯುವಕರ ದಾರಿ ತಪ್ಪಿಸುವ ಯತ್ನ. ಈ ಜಾಹೀರಾತಿಗೆ ನಿಷೇಧ ಹೇರಬೇಕು’ ಎಂದು ರಾಜಸ್ಥಾನ ಹೈಕೋರ್ಟ್‌ ವಕೀಲ ಇಂದ್ರಮೋಹನ್‌ ಸಿಂಗ್‌ ಹನಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ಪೀಠ, ಕೇವಲ 5 ರು.ಗೆ ಸಿಗುವ ಪಾನ್‌ ಮಸಾಲಾದಲ್ಲಿ 4 ಲಕ್ಷ ರು.ಗಳ ಕೇಸರಿ ಹೇಗೆ ತಾನೇ ಇರಲು ಸಾಧ್ಯ? ಎಂದು ಪ್ರಶ್ನಿಸಿ, ನೋಟಿಸ್‌ ಜಾರಿ ಮಾಡಿದೆ.

ಅಮೆರಿಕ ಟ್ರಕ್‌ ಚಾಲಕರಿಗೆ ಇಂಗ್ಲಿಷ್‌ ಪರೀಕ್ಷೆ: 7000 ಜನ ಫೇಲ್‌

ವಾಷಿಂಗ್ಟನ್: ಭಾರತ ಮೂಲದ ಟ್ರಕ್‌ ಚಾಲಕನೊಬ್ಬ ಯದ್ವಾತದ್ವಾ ಟ್ರಕ್‌ ಚಲಾಯಿಸಿ 3 ಜನರ ಪ್ರಾಣ ತೆಗೆದ ಬೆನ್ನಲ್ಲೇ, ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಡ್ರೈವರ್‌ಗಳನ್ನು ಇಂಗ್ಲಿಷ್ ಪರೀಕ್ಷೆಗೆ ಒಳಪಡಿಸಲು ಆರಂಭಿಸಿದೆ. ಈಗಾಗಲೇ ಇದರಿಂದಾಗಿ 7000ಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದು, ಇದರಲ್ಲಿ ಬಹುತೇಕರು ಭಾರತೀಯರೇ ಆಗಿದ್ದಾರೆ.

ಜೂನ್‌ನಿಂದ ಅಕ್ಟೋಬರ್‌ ವರೆಗೆ 7000 ಚಾಲಕರು ಮಾರ್ಗಮಧ್ಯದಲ್ಲಿ ನಡೆಸುವ ಇಂಗ್ಲಿಷ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಈ ಸಂಖ್ಯೆ ಏರುತ್ತಲೇ ಸಾಗಿದೆ.

ವಲಸಿಗ ವಿರೋಧಿ ಧೋರಣೆ ತೋರುತ್ತಿರುವ ಟ್ರಂಪ್‌ ಈಗ ಈ ಹಾದಿ ಹಿಡಿದಿದ್ದು, ಭಾರತೀಯರನ್ನು ಗುರಿಯಾಗಿಸುವ ಆತಂಕವಿದೆ. ಜತೆಗೆ, ಅಮೆರಿಕದಲ್ಲಿ ಟ್ರಕ್‌ ಚಾಲಕರ ಕೊರತೆಗೂ ಇದು ಕಾರಣವಾಗಬಹುದು.

PREV
Read more Articles on

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ