ಎನ್‌ಡಿಎ ಅಂದ್ರೆ ವಿಕಾಸ, ಆರ್‌ಜೆಡಿ ಅಂದ್ರೆ ವಿನಾಶ: ಮೋದಿ

Published : Nov 04, 2025, 06:49 AM IST
pm narendra modi

ಸಾರಾಂಶ

‘ಎನ್‌ಡಿಎ ವಿಕಾಸವನ್ನು ಪ್ರತಿನಿಧಿಸಿದರೆ, ಜಂಗಲ್‌ ರಾಜ್‌ ನಾಯಕರು (ಆರ್‌ಜೆಡಿ) ವಿನಾಶವನ್ನು ಪ್ರತಿನಿಧಿಸುತ್ತಾರೆ. ಅವರು ಮಾಡಿದ ಪಾಪಕ್ಕೆ ಶಿಕ್ಷೆಯನ್ನು ಅನುಭವಿಸಲೇಬೇಕು. ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಶಿಕ್ಷಿಸುವ ಸಮಯ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ  ವಾಗ್ದಾಳಿ  

ಕಟಿಹಾರ್‌/ಸಹರ್ಸಾ : ‘ಎನ್‌ಡಿಎ ವಿಕಾಸವನ್ನು ಪ್ರತಿನಿಧಿಸಿದರೆ, ಜಂಗಲ್‌ ರಾಜ್‌ ನಾಯಕರು (ಆರ್‌ಜೆಡಿ) ವಿನಾಶವನ್ನು ಪ್ರತಿನಿಧಿಸುತ್ತಾರೆ. ಅವರು ಮಾಡಿದ ಪಾಪಕ್ಕೆ ಶಿಕ್ಷೆಯನ್ನು ಅನುಭವಿಸಲೇಬೇಕು. ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಶಿಕ್ಷಿಸುವ ಸಮಯ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಕೂಟದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಕಾಟಿಹಾರ್‌ ಮತ್ತು ಸಹರ್ಸಾದಲ್ಲಿ ಚುನಾವಣಾ ಪ್ರಚಾರದ ಅಂತಿಮ ದಿನ ರ್‍ಯಾಲಿ ನಡೆಸಿ ಮಾತನಾಡಿದ ಅವರು ಹೆಸರೆತ್ತದೇ ವಿರೋಧಿ ಬಣದ ಲಾಲುಪ್ರಸಾದ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

‘ಆರ್‌ಜೆಡಿ ಈಗ ಅಭಿವೃದ್ಧಿಯ ನಕಲಿ ಭರವಸೆಗಳನ್ನು ನೀಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ, ಅದರ ನಾಯಕರು ರಸ್ತೆ ನಿರ್ಮಿಸುವುದರಿಂದ ಅಪಘಾತ ಸಂಭವಿಸುತ್ತದೆ, ಉತ್ತಮ ವಿದ್ಯುತ್ ಸರಬರಾಜು ನೀಡಿದರೆ ವಿದ್ಯುತ್ ಅವಘಡ ಹೆಚ್ಚುತ್ತದೆ ಎಂದು ಸುಳ್ಳು ಹೇಳುತ್ತಿದ್ದರು. ಪ್ರವಾಹವನ್ನು ಸಹ ಶುಭವೆಂದು ಬಣ್ಣಿಸಲಾಗುತ್ತಿತ್ತು. ಆರ್‌ಜೆಡಿ ಬಿಹಾರದ ಅತ್ಯಂತ ಭ್ರಷ್ಟ ಕುಟುಂಬದಿಂದ ನಿಯಂತ್ರಿಸಲ್ಪಡುತ್ತಿದ್ದರೆ, ಅದರ ಮಿತ್ರ ಪಕ್ಷ ಕಾಂಗ್ರೆಸ್ ದೇಶದ ಅತ್ಯಂತ ಭ್ರಷ್ಟ ಕುಟುಂಬದಿಂದ ನಡೆಸಲ್ಪಡುತ್ತಿದೆ’ ಎಂದು ಟೀಕಿಸಿದರು.

ರಾಗಾ, ತೇಜಸ್ವಿ, ಅಖಿಲೇಶ್‌ ವಿಪಕ್ಷದ 3 ಕೋತಿಗಳು: ಯೋಗಿ

‘ರಾಹುಲ್‌ ಗಾಂಧಿ, ತೇಜಸ್ವಿ ಯಾದವ್‌, ಅಖಿಲೇಶ್‌ ಯಾದವ್‌ ಇಂಡಿಯಾ ಕೂಟದ 3 ಕೋತಿಗಳು’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿ ವೇಳೆ ಮಾತನಾಡಿದ ಅವರು, ‘3 ಹೊಸ ಮಂಗಗಳು ಎನ್‌ಡಿಎ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ನೋಡಲು, ಕೇಳಲು ಮತ್ತು ಮಾತನಾಡಲು ಅಸಮರ್ಥವಾಗಿವೆ. ಮಹಾತ್ಮಾ ಗಾಂಧಿಯವರ 3 ಕೋತಿಗಳು ಕೆಟ್ಟದನ್ನು ಕೇಳಲಿಲ್ಲ, ನೋಡಲಿಲ್ಲ, ಮಾತನಾಡಲಿಲ್ಲ. ಆದರೆ ಈಗ ನಾವು ಇಂಡಿಯಾ ಕೂಡದಲ್ಲಿ 3 ವಾನರಗಳನ್ನು ಹೊಂದಿದ್ದೇವೆ. ಒಬ್ಬರು ಪಪ್ಪು (ರಾಹುಲ್‌ ಗಾಂಧಿ) ಎನ್‌ಡಿಎ ಮಾಡಿದ ಉತ್ತಮ ಕೆಲಸಗಳನ್ನು ಗಮನಿಸುವುದಿಲ್ಲ. ಇನ್ನೊಬ್ಬರು ಟಪ್ಪು (ತೇಜಸ್ವಿ ಯಾದವ್‌) ಒಳ್ಳೆಯ ಕೆಲಸಗಳ ಬಗ್ಗೆ ಕೇಳುವುದಿಲ್ಲ. ಮತ್ತೊಬ್ಬರು ಅಕ್ಕು (ಅಖಿಲೇಶ್‌ ಯಾದವ್‌) ಒಳ್ಳೆಯದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಚಾಟಿ ಬೀಸಿದರು.

‘ಬಿಹಾರದಲ್ಲಿ ಈ ಮೂವರೂ ಅಪರಾಧಿಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ. ಒಳನುಸುಳುಕೋರರ ಜತೆಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಜಾತಿ ಹೆಸರಿನಲ್ಲಿ ಜನರನ್ನು ವಿಭಜಿಸಿ, ಗಲಭೆ ಸೃಷ್ಟಿಸುತ್ತಿದ್ದಾರೆ. ನಾವು ವಿಭಜನೆಯಾಗಬಾರದು. ಆರ್‌ಜೆಡಿ ಬಿಹಾರದ ಗುರುತು ಕಸಿದುಕೊಂಡಿದೆ. ರಾಜ್ಯದಲ್ಲಿ ಕಳೆದುಹೋದ ವೈಭವನ್ನು ಮರಳಿ ಪಡೆಯಲು ಬಿಹಾರದ ಜನರು ಡಬಲ್‌ ಎಂಜಿನ್‌ ಎನ್‌ಡಿಎ ಸರ್ಕಾರ ಆಯ್ಕೆಮಾಡಲಿದ್ದಾರೆ’ ಎಂದು ಹೇಳಿದರು.

ಮೋದಿ ‘ಅವಮಾನಗಳ ಖಾತೆ’ ತೆರೆಯಲಿ: ಪ್ರಿಯಾಂಕಾ ವ್ಯಂಗ್ಯ

‘ದೇಶ ಮತ್ತು ಬಿಹಾರವನ್ನು ಅವಮಾನಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ವಿಪಕ್ಷ ನಾಯಕರನ್ನು ಪದೇ ಪದೇ ದೂಷಿಸುತ್ತಿದ್ದಾರೆ. ಹೀಗಾಗಿ ಅವರು ಅವಮಾನಗಳ ಸಚಿವಾಲಯ ತೆರೆಯಬೇಕು’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಹಾರದಲ್ಲಿನ ದುರಾಡಳಿತ ಬಗ್ಗೆ ಒಂದೂ ಮಾತನಾಡುವುದಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅದನ್ನು ಬಿಟ್ಟು ವಿಪಕ್ಷ ನಾಯಕರು ದೇಶ ಮತ್ತು ಬಿಹಾರವನ್ನು ಅವಮಾನಿಸಿದ್ದಾರೆ ಎಂದು ಪದೇ ಪದೇ ದೂಷಿಸುತ್ತಾರೆ. ಅವರು ಅವಮಾನಗಳ ಸಚಿವಾಲಯ ಎನ್ನುವ ಖಾತೆ ತೆರೆಯಲಿ. ಏಕೆಂದರೆ ಕೇಂದ್ರ ಸರ್ಕಾರ ಅದರ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದೆ’ ಎಂದು ಚಾಟಿ ಬೀಸಿದರು.

ಇಂಥ ಕೆಟ್ಟ ಭಾಷೆ ಬಳಸುವ ಪ್ರಧಾನಿಯನ್ನು ನಾನು ನೋಡಿಲ್ಲ: ತೇಜಸ್ವಿ

ಪಟನಾ : ಬಿಹಾರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ತರಹೇವಾರಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ‘ಇಂಥ ಕೆಟ್ಟ ಭಾಷೆ ಬಳಸುವ ಪ್ರಧಾನಿಯನ್ನು ನಾನು ನೋಡಿಲ್ಲ’ ಎಂದು ವಿಪಕ್ಷ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ ಕಿಡಿಕಾರಿದ್ದಾರೆ.

‘ಆರ್‌ಜೆಡಿಯವರು ಕಾಂಗ್ರೆಸ್‌ನ ತಲೆಗೆ ‘ಕಟ್ಟಾ’ (ನಾಡಬಂದೂಕಿಗೆ ಇರುವ ಬಿಹಾರದ ಪಕ್ಕಾ ಹಳ್ಳಿ ಭಾಷೆ) ಇಟ್ಟು ಸಿಎಂ ಅಭ್ಯರ್ಥಿ ಹುದ್ದೆ ಬಾಚಿಕೊಂಡರು’ ಎಂದು ಭಾನುವಾರ ಮೋದಿ ಆರೋಪಿಸಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್ ಅವರು, ‘ಯಾವುದೇ ಪ್ರಧಾನಿ ಇಂತಹ ಪದಗಳನ್ನು ಬಳಸುವುದನ್ನು ನಾನು ಎಂದಿಗೂ ಕೇಳಿಲ್ಲ. ಪ್ರಧಾನಿಯವರ ಹೇಳಿಕೆಯ ಬಗ್ಗೆ ನಾನು ಏನೂ ಹೇಳಲಾರೆ. ಇದು ಅವರ ಆಲೋಚನಾ ಪ್ರಕ್ರಿಯೆಯನ್ನು ತೋರಿಸುತ್ತದೆ" ಎಂದು ಹೇಳಿದರು.

‘ಪ್ರಧಾನಿ ಗುಜರಾತ್‌ಗೆ ಹೋದಾಗಲೆಲ್ಲಾ ಐಟಿ, ಸೆಮಿಕಂಡಕ್ಟರ್ ಘಟಕಗಳು ಮತ್ತು ಡೇಟಾ ಕೇಂದ್ರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಿಹಾರಕ್ಕೆ ಬಂದಾಗ ಅವರು ‘ಕಟ್ಟಾ‘ ಬಗ್ಗೆ ಮಾತನಾಡುತ್ತಾರೆ’ ಎಂದು ಯಾದವ್ ಆರೋಪಿಸಿದರು.

PREV
Read more Articles on

Recommended Stories

ಇನ್ನೂ ಮಾನಸಿಕ ಹಿಂಸೆ ಆಗುತ್ತಿದೆ: ಏರಿಂಡಿಯಾ ಸಂತ್ರಸ್ತ
ಬ್ಲೂಫಿಲಂ ನಿಷೇಧಿಸಿದ್ರೆ ನೇಪಾಳ ರೀತಿ ದಂಗೆ ಆದೀತು : ಸುಪ್ರೀಂ