ಮಕ್ಕಳ ಇಂಟರ್ನೆಟ್‌ ಬಳಕೆ ನಿರ್ಬಂಧಿಸಲಾಗದು: ಸುಪ್ರೀಂ

Published : Oct 18, 2026, 07:55 AM IST
Supreme Court on Children Internet

ಸಾರಾಂಶ

ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಷೇಧಿಸಬೇಕು ಎಂಬ ಕೂಗು ವ್ಯಾಪಕವಾಗುತ್ತಿರುವ ನಡುವೆಯೇ, ‘ಇಂಟರ್ನೆಟ್‌ ಬಳಸುವುದು ಮಕ್ಕಳೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು.

ನವದೆಹಲಿ: ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಷೇಧಿಸಬೇಕು ಎಂಬ ಕೂಗು ವ್ಯಾಪಕವಾಗುತ್ತಿರುವ ನಡುವೆಯೇ, ‘ಇಂಟರ್ನೆಟ್‌ ಬಳಸುವುದು ಮಕ್ಕಳೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಮಕ್ಕಳಿಗೆ ಅದನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ವಿನೋದ್‌ ಚಂದ್ರನ್‌ ಅವರ ಪೀಠ, ‘ಸಂವಿಧಾನದ ವಿಧಿ 21 ಮತ್ತು 19(1)(ಎ) ಅಡಿಯಲ್ಲಿ ಇಂಟರ್ನೆಟ್ ಸಂಪರ್ಕ ಮತ್ತು ಬಳಕೆಯು ಪ್ರತಿಯೊಬ್ಬ ನಾಗರಿಕನ ಹಕ್ಕು. ವಯಸ್ಸಿನ ಭೇದವಿಲ್ಲದೆ ಮಕ್ಕಳು ಸಹ ಈ ಹಕ್ಕನ್ನು ಹೊಂದಿದ್ದಾರೆ. ಸುರಕ್ಷತೆಯ ನೆಪದಲ್ಲಿ ಮಕ್ಕಳ ಮೇಲೆ ಪೂರ್ಣ ಪ್ರಮಾಣದ ನಿಷೇಧ ಹೇರುವುದು ಅಸಂಗತ’ ಎಂದು ಸ್ಪಷ್ಟಪಡಿಸಿದೆ. ದೂರದೂರುಗಳ ಮಕ್ಕಳಿಗೆ ಶಿಕ್ಷಣ ಮತ್ತು ಜ್ಞಾನಾರ್ಜನೆಗೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಸಂಪರ್ಕ ಸಾಧಿಸಲು ಇಂಟರ್ನೆಟ್ ಅತ್ಯಂತ ಮುಖ್ಯ ಮಾಧ್ಯಮವಾಗಿದೆ ಎಂದು ಒತ್ತಿ ಹೇಳಿರುವ ಪೀಠ, ಸುರಕ್ಷತೆ ಮತ್ತು ಸ್ವಾತಂತ್ರ್ಯ ಎರಡನ್ನೂ ಸಮ್ಮಿಲನಗೊಳಿಸುವ ಕಾರ್ಯಸಾಧ್ಯ ಚೌಕಟ್ಟನ್ನು ರೂಪಿಸಲು ಸೂಚಿಸಿದೆ.

ದುರ್ಬಳಕೆ ಬಗ್ಗೆ ಕಳವಳ:

‘ಸಾಮಾಜಿಕ ಮಾಧ್ಯಮಗಳು ಮತ್ತು ಇಂಟರ್ನೆಟ್‌ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ಆದರೆ ಇವುಗಳ ನಿಷೇಧವೇ ಪೂರ್ಣ ಪರಿಹಾರವಲ್ಲ. ನಿಷೇಧ ಹೇರಿದರೆ ಮಕ್ಕಳು ನಿಯಂತ್ರಣವಿಲ್ಲದ ಮತ್ತು ಹೆಚ್ಚು ಅಪಾಯಕಾರಿ ವೆಬ್‌ಸೈಟ್‌ಗಳತ್ತ ಮುಖ ಮಾಡಬಹುದು ಹಾಗೂ ಆನ್‌ಲೈನ್ ಶೋಷಣೆಗೆ ಒಳಗಾದಾಗ ಪೋಷಕರಿಗೆ ತಿಳಿಸಲು ಭಯಪಡಬಹುದು’ ಎಂದು ಸುಪ್ರೀಂ ಕಳವಳ ವ್ಯಕ್ತಪಡಿಸಿದೆ.

ಕಂಪನಿಗಳ ವಿರುದ್ಧ ಕಿಡಿ:

ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದ ವಿಷಯಗಳ ಹರಡುವಿಕೆಯನ್ನು ತಡೆಯುವಂತೆ 2024ರಲ್ಲೇ ನಿರ್ದೇಶನ ನೀಡಿದ್ದರೂ, ಅದನ್ನು ತಡೆಯುವಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ವಿಫಲವಾಗಿರುವುದಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಚಂದಾದಾರಿಕೆ ಅಥವಾ ಪೇವಾಲ್‌ಗಳ ಮೂಲಕ ಮಗುವಿಗೆ ಹಾನಿಯುಂಟುಮಾಡುವಂತಹ ಯಾವುದೇ ಲೈಂಗಿಕ ವಿಷಯಗಳನ್ನು ಪ್ರದರ್ಶಿಸುವುದು, ಅಪ್‌ಲೋಡ್ ಮಾಡುವುದು ಅಥವಾ ಪ್ರಚಾರ ಮಾಡುವುದನ್ನು ಮಧ್ಯವರ್ತಿ ಸಂಸ್ಥೆಗಳು ತಕ್ಷಣವೇ ತಡೆಯಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಪ್ರಮುಖ ನಿರ್ದೇಶನಗಳು:

ಆದಾಯ ಮುಟ್ಟುಗೋಲು:

ಕಾನೂನು ಉಲ್ಲಂಘಿಸುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಮೇಲೆ ಗರಿಷ್ಠ ದಂಡ ವಿಧಿಸಲು ಕಾನೂನು ಚೌಕಟ್ಟು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿದೆ. ಅಲ್ಲದೆ, ಇಂತಹ ನಿಷೇಧಿತ ವಿಷಯಗಳಿಂದ ಸಂಸ್ಥೆಗಳು ಗಳಿಸಿದ ಆದಾಯವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದಿದೆ.

ಪೋಷಕರ ಮೇಲ್ವಿಚಾರಣೆ:

ಸಂಪೂರ್ಣ ನಿಷೇಧದ ಬದಲಿಗೆ ಮಕ್ಕಳ ಸಾಮಾಜಿಕ ಜಾಲತಾಣ ಖಾತೆಗಳಿಗೆ ‘ಚೈಲ್ಡ್ ಮೋಡ್’ ಖಾಸಗಿ ಸೆಟ್ಟಿಂಗ್ಸ್ ಮತ್ತು ಪೋಷಕರ ಅನುಮತಿ ಕಡ್ಡಾಯಗೊಳಿಸುವಂತಹ ಸಕಾರಾತ್ಮಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸಲಹೆ ನೀಡಿದೆ.

ರಾಷ್ಟ್ರೀಯ ಡಾಟಾಬೇಸ್ ರಚನೆ:

ತಂತ್ರಜ್ಞಾನ ಆಧರಿತ ‘ಪರ್ಸೆಪ್ಚುಯಲ್ ಹ್ಯಾಶ್ ಮ್ಯಾಚಿಂಗ್'''' ಮತ್ತು ಯುಆರ್‌ಎಲ್ ಪಟ್ಟಿ ಬಳಸಿ ಸಿಎಸ್ಇಎಎಮ್ ವಿಷಯಗಳನ್ನು ಪತ್ತೆಹಚ್ಚಿ ತಕ್ಷಣವೇ ತೆಗೆದುಹಾಕಲು ರಾಷ್ಟ್ರೀಯ ಹ್ಯಾಶ್ ಮತ್ತು ಯುಆರ್‌ಎಲ್ ಪಟ್ಟಿ ಡಾಟಾಬೇಸ್ ರಚಿಸುವಂತೆ ಕೇಂದ್ರಕ್ಕೆ ಕೋರ್ಟ್‌ ಆದೇಶಿಸಿದೆ.

-ಇಂಟರ್ನೆಟ್‌ ಬಳಕೆ ಪ್ರತಿಯೊಬ್ಬರ ಮೂಲಭೂತ ಹಕ್ಕು

- ವಯಸ್ಸಿನ ಭೇದವಿಲ್ಲದೆ ಮಕ್ಕಳಿಗೂ ಈ ಹಕ್ಕು ಅನ್ವಯ

-ಮಕ್ಕಳಿಗೆ ಜ್ಞಾನಾರ್ಜನೆಗೆ ಇಂಟರ್ನೆಟ್‌ ತೀರಾ ಅಗತ್ಯ

- ಸುರಕ್ಷಿತ ಬಳಕೆಗೆ ಸರ್ಕಾರ ಚೌಕಟ್ಟು ರೂಪಿಸಬೇಕು

- ಆದರೆ ಮಕ್ಕಳ ಲೈಂಗಿಕ ಶೋಷಣೆ ಕಂಟೆಂಟ್‌ ಸಲ್ಲದು

-ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸುಪ್ರೀಂ ಚಾಟಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶಿಕ್ಷಕರಷ್ಟೇ ಅಲ್ಲ, ಗಣತಿಗೆ ಖಾಸಗಿ ವ್ಯಕ್ತಿಗೂ ಅವಕಾಶ!
ಗಣತಿಗೆ ಖಾಸಗಿ ವ್ಯಕ್ತಿಗಳಿಗೆ ಅವಕಾಶಕ್ಕೆ ಕಾಂಗ್ರೆಸ್‌ ಕಿಡಿ