ಸತತ ಎರಡು ವರ್ಷಗಳಿಂದ ಚೀನಾದಲ್ಲಿ ಜನನ ಪ್ರಮಾಣ ಇಳಿಕೆ

KannadaprabhaNewsNetwork |  
Published : Jan 18, 2024, 02:01 AM ISTUpdated : Jan 18, 2024, 11:49 AM IST
ನವಜಾತ ಶಿಶು | Kannada Prabha

ಸಾರಾಂಶ

2023ರಲ್ಲಿ ಚೀನಾದಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ 20 ಲಕ್ಷದಷ್ಟು ಕುಸಿತ ಕಂಡಿದ್ದು, ಜನನ ಪ್ರಮಾಣದಲ್ಲಿ ಶೇ.5.6ರಷ್ಟು ಭಾರೀ ಇಳಿಕೆ ಕಂಡು ಬಂದಿದೆ.

ಬೀಜಿಂಗ್‌: ಕುಟುಂಬಕ್ಕೆ ಒಂದೇ ಮಗು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರ ಪರಿಣಾಮ ಎದುರಿಸುತ್ತಿರುವ ಚೀನಾ ಸತತ 2ನೇ ವರ್ಷ ಜನನ ಪ್ರಮಾಣದಲ್ಲಿ ಇಳಿಕೆ ದಾಖಲಿಸಿದೆ. 

2022ಕ್ಕೆ ಹೋಲಿಸಿದರೆ ಚೀನಾದ ಒಟ್ಟಾರೆ ಜನಸಂಖ್ಯೆ 20 ಲಕ್ಷದಷ್ಟು ಇಳಿಕೆಯಾಗಿ 140.97 ಕೋಟಿ ತಲುಪಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.2022ರಲ್ಲಿ ಚೀನಾದಲ್ಲಿ ಜನನ ಪ್ರಮಾಣ ಇಳಿಮುಖಗೊಂಡಿತ್ತು. 

ಇದು ಕಳೆದ 60 ವರ್ಷಗಳಲ್ಲೇ ಮೊದಲ ಬೆಳವಣಿಗೆಯಾಗಿತ್ತು. ಈ ಇಳಿಕೆ ಪ್ರಮಾಣ 2023ರಲ್ಲೂ ಮುಂದುವರೆದಿದೆ. 2022ರಲ್ಲಿ ಚೀನಾದಲ್ಲಿ ಒಟ್ಟಾರೆ 95.6 ಲಕ್ಷ ಜನನ ದಾಖಲಾಗಿದ್ದರೆ, 2023ರಲ್ಲಿ ಈ ಪ್ರಮಾಣ 90.2 ಲಕ್ಷಕ್ಕೆ ಇಳಿಮುಖವಾಗಿದೆ. 

ಅಂದರೆ ಜನನ ಪ್ರಮಾಣದಲ್ಲಿ ಶೇ.5.6ರಷ್ಟು ಇಳಿಕೆ ದಾಖಲಾಗಿದೆ. ಇನ್ನು ಕಳೆದ ವರ್ಷ ದೇಶದಲ್ಲಿ 1.11 ಕೋಟಿ ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ದೇಶದಲ್ಲಿ ಜನನ ಪ್ರಮಾಣ ದಾಖಲಾತಿ ಆರಂಭವಾದ 1949ರಲ್ಲಿ 1000 ಜನರಿಗೆ ತಲಾ 6.77 ಮಕ್ಕಳ ಜನನವಾಗುತ್ತಿದ್ದರೆ, 2022ರಲ್ಲಿ ಈ ಪ್ರಮಾಣ 6.39ಕ್ಕೆ ಇಳಿದಿದೆ. 

ಮುಂದಿನ ವರ್ಷಗಳಲ್ಲಿ ನವಜಾತ ಶಿಶುಗಳ ಜನನ ಪ್ರಮಾಣ ಇನ್ನಷ್ಟು ಇಳಿಕೆ ಕಾಣಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ಇಳಿಕೆಗೆ ಕಾರಣವೇನು?:ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕಲು ದಶಕಗಳ ಹಿಂದೆ ಕುಟುಂಬಕ್ಕೆ ಒಂದೇ ಮಗು ನೀತಿ ಕಡ್ಡಾಯವಾಗಿ ಜಾರಿಗೆ ತಂದಿದೆ. 

ಏರುತ್ತಿರುವ ಬೆಲೆ ಏರಿಕೆಯ ಪರಿಣಾಮ ನವ ದಂಪತಿ ಮಕ್ಕಳನ್ನು ಹೊಂದಲು ನಿರಾಕರಿಸುತ್ತಿರುವುದು, ಕೋವಿಡ್‌ ವೇಳೆ ಜಾರಿಗೊಳಿಸಿದ ಕಠಿಣ ನೀತಿ ಮತ್ತು ಆರ್ಥಿಕ ಸಂಕಷ್ಟ ದೇಶದಲ್ಲಿ ನವಜಾತ ಶಿಶುಗಳ ಜನನನ ಮೇಲೆ ಪರಿಣಾಮ ಬೀರಿದೆ.

ಕಳೆದ ಕೆಲ ವರ್ಷಗಳಿಂದ ಹೆಚ್ಚು ಮಕ್ಕಳನ್ನು ಹೆತ್ತ ಕುಟುಂಬಕ್ಕೆ ಹಣಕಾಸಿನ ನೆರವು ಸೇರಿದಂತೆ ನಾನಾ ಲಾಭಗಳನ್ನು ಸರ್ಕಾರ ಘೋಷಿಸಿದರೂ ಅದು ಹೆಚ್ಚು ಫಲ ಕೊಟ್ಟಿಲ್ಲ.

ಭಾರತ ನಂ.1: 142.86 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎಂಬ ದಾಖಲೆಗೆ ಕಳೆದ ವರ್ಷ ಭಾರತ ಪಾತ್ರವಾಗಿತ್ತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !