ಕೇದಾರ ಬಳಿ ಕಾಪ್ಟರ್‌ ಪತನ: 7 ಮಂದಿ ದುರ್ಮರಣ

KannadaprabhaNewsNetwork |  
Published : Jun 16, 2025, 01:38 AM ISTUpdated : Jun 16, 2025, 04:13 AM IST
ಕಾಪ್ಟರ್‌  | Kannada Prabha

ಸಾರಾಂಶ

ಅಹಮದಾಬಾದ್‌ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ವಾಯುದುರಂತ ಸಂಭವಿಸಿದೆ. ಉತ್ತರಾಖಂಡದ ಪವಿತ್ರ ಕೇದಾರನಾಥ ಯಾತ್ರೆ ಮುಗಿಸಿ ವಾಪಸು ತೆರಳುತ್ತಿದ್ದ ಯಾತ್ರಿಕರ ಹೆಲಿಕಾಪ್ಟರ್‌ ಪತನಗೊಂಡಿದೆ. ಘಟನೆಯಲ್ಲಿ ಕಾಪ್ಟರ್‌ನಲ್ಲಿದ್ದ ಪೈಲಟ್‌ ಸೇರಿದಂತೆ ಎಲ್ಲ 7 ಮಂದಿ ಸಾವನ್ನಪ್ಪಿದ್ದಾರೆ.

 ರುದ್ರಪ್ರಯಾಗ್ (ಉತ್ತರಾಖಂಡ) :  ಅಹಮದಾಬಾದ್‌ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ವಾಯುದುರಂತ ಸಂಭವಿಸಿದೆ. ಉತ್ತರಾಖಂಡದ ಪವಿತ್ರ ಕೇದಾರನಾಥ ಯಾತ್ರೆ ಮುಗಿಸಿ ವಾಪಸು ತೆರಳುತ್ತಿದ್ದ ಯಾತ್ರಿಕರ ಹೆಲಿಕಾಪ್ಟರ್‌ ಪತನಗೊಂಡಿದೆ. ಘಟನೆಯಲ್ಲಿ ಕಾಪ್ಟರ್‌ನಲ್ಲಿದ್ದ ಪೈಲಟ್‌ ಸೇರಿದಂತೆ ಎಲ್ಲ 7 ಮಂದಿ ಸಾವನ್ನಪ್ಪಿದ್ದಾರೆ.

ಚಾರ್‌ ಧಾಮ್‌ ಮಾರ್ಗದಲ್ಲಿ 40 ದಿನದಲ್ಲಿ ನಡೆದ 5ನೇ ವಾಯು ದುರಂತ ಇದಾಗಿದೆ. ಇದರ ಬೆನ್ನಲ್ಲೇ 2 ದಿನ ಮಟ್ಟಿಗೆ ಕಾಪ್ಟರ್‌ ಸಂಚಾರ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ, ಕಾಪ್ಟರ್‌ ಮಾಲೀಕ ಸಂಸ್ಥೆಯಾದ ಆರ್ಯನ್ ಏವಿಯೇಷನ್‌ ಕಾರ್ಯಾಚರಣೆ ಅಮಾನತಿಗೆ ಸೂಚನೆ ನೀಡಲಾಗಿದೆ.

‘ಕೇದಾರನಾಥದಿಂದ ಗುಪ್ತಕಾಶಿಗೆ 6 ಭಕ್ತರನ್ನು ಕರೆದೊಯ್ಯುತ್ತಿದ್ದ ಕಾಪ್ಟರ್‌ ಇಲ್ಲಿನ ಗೌರಿಕುಂಡ್‌ ಬಳಿ ಪ್ರತಿಕೂಲ ಹವಾಮಾನದಿಂದಾಗಿ ಪತನಗೊಂಡಿದೆ. ಆರ್ಯನ್ ಏವಿಯೇಷನ್ ಎನ್ನುವ ಖಾಸಗಿ ಸಂಸ್ಥೆಗೆ ಸೇರಿದ ಬೆಲ್‌ 407 ಕಾಪ್ಟರ್‌ ಕೇದರನಾಥದಲ್ಲಿ ಭಾನುವಾರ ಬೆಳಿಗ್ಗೆ ಟೇಕಾಫ್‌ ಆದ ಬಳಿಕ ಸಿಗ್ನಲ್ ಕಳೆದುಕೊಂಡಿತು .ಆ ಬಳಿಕ ಶೋಧ ನಡೆಸಿದಾಗ ಕಣಿವೆಯಲ್ಲಿ ಕಾಪ್ಟರ್‌ ಬೆಂಕಿ ಹತ್ತಿಕೊಂಡು ದುರಂತಕ್ಕೀಡಾಗಿರುವುದು ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.‘ಘಟನೆಯಲ್ಲಿ ಪೈಲಟ್‌, ಮಗು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರು ರಾಜಸ್ಥಾನ , ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮೂಲದವರು. ಘಟನೆಯಲ್ಲಿ ಸಾವನ್ನಪ್ಪಿದ್ದ ಕಾಪ್ಟರ್ ಪೈಲಟ್‌ ರಾಜವೀರ್ ಸಿಂಗ್‌ ಭಾರತೀಯ ಸೇನೆಯಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ವಿವಿಧ ಭೂಪ್ರದೇಶಗಳಲ್ಲಿ ಹಾರಾಟ ನಡೆಸಿರುವ ಅನುಭವ ಹೊಂದಿದ್ದರು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಯಾತ್ರೆ ಸ್ಥಗಿತ:

ಈ ನಡುವೆ ಸೋನ್‌ಪ್ರಯಾಗ್‌ ಮಾರ್ಗದಲ್ಲಿ ಭೂಕುಸಿತ ಉಂಟಾದ ಕಾರಣ ಒಬ್ಬರು ಬಲಿಯಾಗಿದ್ದಾರೆ. ಈ ಮಾರ್ಗದ ಮೂಲಕ ಕೇದಾರನಾಥ ಯಾತ್ರೆ ಸ್ಥಗಿತವಾಗಿದೆ.

40 ದಿನದಲ್ಲಿ 5ನೇ ದುರಂತ:ಭಾನುವಾರ ನಡೆದ ಈ ಕಾಪ್ಟರ್‌ ದುರಂತ ಚಾರ್‌ಧಾಮ್ ಮಾರ್ಗದಲ್ಲಿ 40 ದಿನದಲ್ಲಿ ನಡೆದ 5ನೇ ಅವಘಡವಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಅಪಘಾತ ತನಿಖಾ ಬ್ಯೂರೋಗೆ (ಎಎಐಬಿ) ಆದೇಶಿಸಿದೆ. ಇನ್ನು ಘಟನೆಗೆ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್ ಧಾಮಿ ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

2 ದಿನ ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್‌ ಸೇವೆ ಸ್ಥಗಿತ

ಡೆಹ್ರಾಡೂನ್: ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ 7 ಮಂದಿ ಸಾವಿನ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಪವಿತ್ರ ಚಾರ್‌ಧಾಮ್‌ ಯಾತ್ರೆಯ ಮಾರ್ಗದಲ್ಲಿ ಹೆಲಿಕಾಪ್ಟರ್‌ ಸೇವೆಯನ್ನು ಎರಡು ದಿನ ಸ್ಥಗಿತಗೊಳಿಸಿ ಆದೇಶಿಸಿದೆ.ಇನ್ನು ಕೇಂದ್ರ ಸರ್ಕಾರವು, ಪತನಕ್ಕಿಡಾದ ಕಾಪ್ಟರ್‌ನ ಮಾತೃ ಸಂಸ್ಥೆಯಾದ ಆರ್ಯನ್‌ ಏವಿಯೇಷನ್‌ ಕಾರ್ಯಾಚರಣೆಯನ್ನು ತಕ್ಷಣಕ್ಕೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ ಹಾಗೂ ಇಬ್ಬರು ಪೈಲಟ್ ಮೇಲೆ 6 ತಿಂಗಳು ನಿರ್ಬಂಧ ವಿಧಿಸಿದೆ.

ಕಳೆದ 40 ದಿನದಲ್ಲಿ ಕೇದಾರ ವ್ಯಾಪ್ತಿಯಲ್ಲಿ 5 ಹೆಲಿಕಾಪ್ಟರ್‌ ಅವಘಡ ಸಂಭವಿಸಿದ ಕಾರಣ ಈ ಕ್ರಮ ಜರುಗಿಸಲಾಗಿದೆ.ಚಾರ್‌ ಧಾಮಗಳಾದ ಗಂಗೋತ್ರಿ, ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥಗಳ ನಡುವೆ ಯಾತ್ರೆಗೆ ಹೆಲಿಕಾಪ್ಟರ್‌ ಕಾರ್ಯಾಚರಣೆ ನಡೆಯುತ್ತದೆ.

ಸಿಎಂ ಖಡಕ್‌ ಸೂಚನೆ:ದುರಂತದ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್ ಧಾಮಿ ತುರ್ತು ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಸದ್ಯ ಚಾರ್‌ಧಾಮ್ ಮಾರ್ಗದಲ್ಲಿ ಹವಾಮಾನ ಪರಿಸ್ಥಿತಿ ಕೆಟ್ಟದಾಗಿದ್ದು, ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಪ್ಟರ್‌ ಸೇವೆಯನ್ನು ಎರಡು ದಿನಗಳ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಇನ್ನು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವ ಸಿಎಂ ಕಾಪ್ಟರ್‌ಗಳ ಕಾರ್ಯಾಚರಣೆಗಳ ಬಗ್ಗೆ ಪ್ರಮಾಣಿತ ಕಾರ್ಯಾಚರಣ ವಿಧಾನ ( ಎಸ್‌ಒಪಿ) ಕಠಿಣ ಆದೇಶ ಹೊರಡಿಸಬೇಕು. ಜೊತೆಗೆ ನಿರ್ವಹಣೆ ಕಾರಣಕ್ಕೆ ನಿಯಂತ್ರಣ ಮತ್ತು ಕಮಾಂಡ್‌ ಸೆಂಟರ್‌ಗಳನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇದಾರ ಕಾಪ್ಟರ್‌ ದುರಂತಕ್ಕೆ ಒಂದೇ ಕುಟುಂಬದ 3 ಬಲಿ

 ರುದ್ರಪ್ರಯಾಗ್: ಕೇದಾರನಾಥ ಸಮೀಪದಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ 4 ರಾಜ್ಯಗಳ 7 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದೇ ಕುಟುಂಬದ ಮೂವರು, ಕೇದರಾನಾಥ ದೇವಸ್ಥಾನದ ಉದ್ಯೋಗಿ, ಕಾಪ್ಟರ್‌ನ ಪೈಲಟ್‌ ಇದ್ದಾರೆ.

ಕಾಪ್ಟರ್‌ ಪತನ ದುರಂತದಲ್ಲಿ ಮಹಾರಾಷ್ಟ್ರದ ಯವತ್ಮಾಳ್‌ ಮೂಲದ ದಂಪತಿ ಮತ್ತು ಅವರ 2 ವರ್ಷದ ಮಗಳು ಕೂಡ ಬಲಿಯಾಗಿದ್ದಾರೆ. ಸಾರಿಗೆ ಉದ್ಯಮಿ ರಾಜ್‌ ಕುಮಾರ್‌ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ ಮತ್ತು ಮಗಳು ಕಾಶಿ ಸಾವನ್ನಪ್ಪಿದ್ದಾರೆ. ಅವರು ಜೂ.12 ರಂದು ಮಹಾರಾಷ್ಟ್ರದಿಂದ ಕೇದಾರನಾಥಕ್ಕೆ ತೆರಳಿದ್ದರು. ಆದರೆ ಅದೃಷ್ಟವಶಾತ್‌ ದಂಪತಿಯ ಮಗ ವಿವಾನ್ ಕಾಪ್ಟರ್‌ನಲ್ಲಿ ತೆರಳದೆ ತನ್ನ ಅಜ್ಜನ ಬಳಿಯೇ ಉಳಿದ ಕಾರಣ ದುರಂತದಲ್ಲಿ ಬಚಾವ್ ಆಗಿದ್ದಾರೆ.

ಇನ್ನು ಉಳಿದಂತೆ ಘಟನೆಯಲ್ಲಿ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಉದ್ಯೋಗಿ, ಉತ್ತರಾಖಂಡದ ಉಖಿಮಠದ ವಿಕ್ರಮ್ ರಾವತ್, ಉತ್ತರ ಪ್ರದೇಶದ ವಿನೋದ್‌ ದೇವಿ, ತ್ರಿಷ್ಟಿ ಸಿಂಗ್, ಜೈಪುರ ಮೂಲದ ಪೈಲಟ್‌ ಕ್ಯಾಪ್ಟರ್‌ ರಾಜ್‌ಬೀರ್‌ ಸಿಂಗ್ ಚೌಹಾಣ್‌ ಬಲಿಗಿದ್ದಾರೆ. ಚೌಹಾಣ್‌ 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾಪ್ಟರ್‌ ಪೈಲಟ್ ಆಗಿ ಸಾಕಷ್ಟು ಅನುಭವ ಹೊಂದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ