ಪಾಕ್‌ ಸೇನೆಗೆ ಪಾಕ್‌ನ ಮುಸ್ಲಿಂ ಪ್ರಮುಖರಿಂದಲೇ ವಿರೋಧ

KannadaprabhaNewsNetwork | Updated : May 06 2025, 05:17 AM IST

ಸಾರಾಂಶ

ಧರ್ಮದ ಹೆಸರಲ್ಲಿ ಭಾರತದ ಜತೆಗೆ ಕಾಲುಕೆದರಿ ಸಂಘರ್ಷಕ್ಕೆ ನಿಂತಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ಗೆ ಇದೀಗ ಅಲ್ಲಿನ ಮುಸ್ಲಿಮ್‌ ಧರ್ಮದ ಪ್ರಮುಖರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

 ಇಸ್ಲಾಮಾಬಾದ್‌: ಧರ್ಮದ ಹೆಸರಲ್ಲಿ ಭಾರತದ ಜತೆಗೆ ಕಾಲುಕೆದರಿ ಸಂಘರ್ಷಕ್ಕೆ ನಿಂತಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ಗೆ ಇದೀಗ ಅಲ್ಲಿನ ಮುಸ್ಲಿಮ್‌ ಧರ್ಮದ ಪ್ರಮುಖರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ದಬ್ಬಾಳಿಕೆ ನಡೆಸುತ್ತಿದೆ. ಕನಿಷ್ಠ ಪಕ್ಷ ಭಾರತವು ಇಸ್ಲಾಮಾಬಾದ್‌ನ ಲಾಲ್‌ ಮಸೀದಿ ಅಥವಾ ವಜೀರಿಸ್ತಾನದ ಮೇಲೆ ಯಾವುದೇ ಬಾಂಬ್‌ ಹಾಕಿಲ್ಲ ಎಂದು ಪ್ರಭಾವಿ ದೇವೋಬಂದಿ ಧರ್ಮಗುರು ಮೌಲಾನ ಅಬ್ದುಲ್‌ ಅಜೀಜ್‌ ಘಾಜಿ ಅಸಮಾಧಾನ ಹೊರಹಾಕಿದ್ದಾರೆ.

ಘಾಜಿ ಅವರ ಈ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಪಾಕಿಸ್ತಾನದ ಮಿಲಿಟರಿ ಆಡಳಿತ ಮತ್ತು ಜನರ ನಡುವೆ ಹೆಚ್ಚುತ್ತಿರುವ ಕಂದಕ ಈ ಹೇಳಿಕೆಯಿಂದ ಬಹಿರಂಗವಾಗಿದೆ.

ಯುದ್ಧಕ್ಕೆ ಯಾರೂ ಕೈಎತ್ತಲಿಲ್ಲ:

ಇಸ್ಲಾಮಾಬಾದ್‌ನ ಲಾಲ್‌ ಮಸೀದಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ, ಭಾರತದ ಜತೆಗೆ ಯುದ್ಧವಾದರೆ ಯಾರೆಲ್ಲ ಪಾಕಿಸ್ತಾನ ಬೆಂಬಲಿಸುತ್ತೀರೋ ಅವರೆಲ್ಲ ಕೈ ಎತ್ತಿ ಎಂದು ಮೌಲಾನಾ ಘಾಜಿ ಕೇಳಿದರು. ಆಗ ಅಲ್ಲಿ ನೆರೆದಿದ್ದ ಯಾವೊಬ್ಬನೂ ಕೈ ಎತ್ತಲಿಲ್ಲ. ಬಳಿಕ ಮಾತು ಮುಂದುವರಿಸಿದ ಮೌಲಾನಾ ಅವರು, ಪಾಕಿಸ್ತಾನದ ಮಿಲಿಟರಿ ಆಡಳಿತ ಮತ್ತು ಅಧಿಕಾರದಲ್ಲಿರುವ ಶ್ರೀಮಂತ ಅಧಿಕಾರಿಶಾಹಿ ವಿರುದ್ಧ ಕಿಡಿಕಾರಿದರು. ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ದಬ್ಬಾಳಿಕೆ ಮಾಡುತ್ತದೆ. ಕನಿಷ್ಠ ಭಾರತವು ಲಾಲ್‌ ಮಸೀದಿ ಅಥವಾ ವಜೀರಿಸ್ತಾನಕ್ಕೆ ಬಾಂಬ್‌ ದಾಳಿ ನಡೆಸಿಲ್ಲ ಎಂದು ಹೇಳಿದರು.

ಪಶ್ತೂನಿಗರಿಂದ ಭಾರತಕ್ಕೆ ಬೆಂಬಲ:

ಮೌಲಾನಾ ಘಾಜಿ ಅವರ ರೀತಿಯಲ್ಲೇ ಇತ್ತೀಚೆಗೆ ಖೈಬರ್‌ ಪಕ್ತೂನ್‌ಖ್ವಾದ ಇಸ್ಲಾಮಿಕ್‌ ಪ್ರಚಾರಕರೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ‘ಪಶ್ತೂನ್‌ ಪ್ರಜೆಗಳ ಮೇಲೆ ಪಾಕ್‌ ಸೇನೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದ ಅವರು, ‘ಒಂದು ವೇಳೆ ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಪಶ್ತೂನಿಗರು ಭಾರತಕ್ಕೆ ಬೆಂಬಲ ನೀಡಲಿದ್ದಾರೆ. ಪಶ್ತೂನಿಗರ ವಿರುದ್ಧ ಪಾಕ್ ಸೇನೆ ಸಾಕಷ್ಟು ಅನ್ಯಾಯ ಮಾಡಿದೆ. ಹಾಗಿದ್ದಾಗ ನಾವು ಪಾಕಿಸ್ತಾನ್ ಜಿಂದಾಬಾದ್‌ ಎಂದು ಹೇಳುತ್ತೇವೆ ಅಂದುಕೊಂಡಿದ್ದೀರಾ? ಖಂಡಿತಾ ಇಲ್ಲ’ ಎಂದು ಹೇಳಿದ್ದಾರೆ.

ಉಗ್ರ ಹಫೀಜ್ ಪ್ರೇರಿತ ರಾಜಕೀಯ ಪಕ್ಷದಿಂದ ಭಾರತ ವಿರೋಧಿ ರ್‍ಯಾಲಿ

ಲಾಹೋರ್: ಭಾರತ ಪಾಕಿಸ್ತಾನದ ವಿರುದ್ಧ ಜಲ ಒಪ್ಪಂದ ರದ್ದತಿಯಂಥ ಕಠಿಣ ಕ್ರಮ ಕೈಗೊಂಡಿದ್ದನ್ನು ವಿರೋಧಿಸಿ, ಉಗ್ರ ಹಫೀಜ್‌ ಸಯೀದ್‌ ಪ್ರೇರಿತ ಪಕ್ಷ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಲಾಹೋರ್‌ನಲ್ಲಿ ಭಾರತ ವಿರೋಧಿ ರ್‍ಯಾಲಿ ನಡೆಸಿದೆ.‘ಕಾಶ್ಮೀರ ಪಾಕಿಸ್ತಾನದ ಕಂಠನಾಳ. ಕಾಶ್ಮೀರವನ್ನು ಸ್ವತಂತ್ರಗೊಳಿಸುವ ಪ್ರತಿಜ್ಞೆ ಮಾಡುತ್ತೇವೆ. ಭಾರತ ಸಿಂಧು ನದಿ ನೀರನ್ನು ತಡೆಹಿಡಿದರೆ ನಾವು ಮೌನವಾಗಿರುವುದಿಲ್ಲ’ ಎಂದು ಪಿಎಂಎಂಎಲ್ ಅಧ್ಯಕ್ಷ ಖಾಲಿದ್ ಮಸೂದ್ ಹೇಳಿದ್ದಾನೆ.ಪಿಎಂಎಂಎಲ್ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್‌ ಸ್ಥಾಪಿಸಿದ ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ರಾಜಕೀಯ ಶಾಖೆಯಾಗಿದ್ದು, ಪಹಲ್ಗಾಂ ದಾಳಿ ಬಳಿಕ ದೇಶಾದ್ಯಂತ ಭಾರತವಿರೋಧಿ ರ್‍ಯಾಲಿಗಳನ್ನು ಪ್ರಾರಂಭಿಸಿದೆ.

Share this article