ಜಿರಳೆ ಪಾರ್ಟಿ ಸ್ಥಾಪಕ ದೀಪ್ಕೆಯಿಂದ ಕೂಡ ಉಪವಾಸ ಶುರು

KannadaprabhaNewsNetwork |  
Published : Jul 19, 2026, 02:45 AM ISTUpdated : Jul 19, 2026, 07:10 AM IST
Abhijeet Dipke

ಸಾರಾಂಶ

ಉಪವಾಸನಿರತ ಸೋನಂ ವಾಂಗ್ಚುಕ್‌ರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಕೂಡಾ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.

 ನವದೆಹಲಿ :  ಉಪವಾಸನಿರತ ಸೋನಂ ವಾಂಗ್ಚುಕ್‌ರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಕೂಡಾ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.  

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಾನು ಇದೀಗ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ’ ಎಂದು ಘೋಷಿಸಿದ್ದಾರೆ. ಕಳೆದ 21 ದಿನಗಳಿಂದ ಉಪವಾಸ ನಡೆಸುತ್ತಿದ್ದ ವಾಂಗ್ಚುಕ್‌ರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಸಾಗಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ಮೋದಿ ರಾಜೀನಾಮೆಗೆ ಆಗ್ರಹ:

ಇದುವರೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸುತ್ತಿದ್ದ ಸಿಜೆಪಿ, ಇದೀಗ ಮೋದಿ ರಾಜೀನಾಮೆಯ ಆಗ್ರಹ ಮುಂದಿಟ್ಟಿದೆ. ‘ಪ್ರತಿಭಟನಾ ಸ್ಥಳದಿಂದ ವಾಂಗ್ಚುಕ್‌ರನ್ನು ಸ್ಥಳಾಂತರಿಸಿದ ಹೊರತಾಗಿಯೂ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರಧಾನಿ ಮೋದಿ ರಾಜೀನಾಮೆ ಕೊಡಲೇಬೇಕು’ ಎಂದು ಟ್ವೀಟ್‌ ಮಾಡಿದೆ.

ಪ್ರತಿಭಟನಾಕಾರರು ಪಾಕಿಗಳೇ?: ದೀಪ್ಕೆ ಪೋಷಕರ ಆಕ್ರೋಶ

ಛತ್ರಪತಿ ಸಂಭಾಜಿ ನಗರ: ಸಿಜೆಪಿ ಪಕ್ಷದ ಸ್ಥಾಪಕ ಅಭಿಜೀತ್‌ ದೀಪ್ಕೆ ಉಪವಾಸ ಆರಂಭಿಸಿರುವ ಬಗ್ಗೆ ಅವರ ಪೋಷಕರು ಕಳವಳ ವ್ಯಕ್ತಪಡಿಸಿದ್ದು, ವಿದ್ಯಾರ್ಥಿ ಪ್ರತಿಭಟನೆಯತ್ತ ಗಮನ ಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅಭಿಜೀತ್‌ ತಂದೆ ಭಗವಾನ್‌ ದೀಪ್ಕೆ ಮಾತನಾಡಿದ್ದು, ‘ದೇಶದ ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ನಿರಾಹಾರ ಹೋರಾಟಕ್ಕಿಳಿಸಿದ್ದರೂ ಸರ್ಕಾರ ಅವರ ಪ್ರತಿ ಇಷ್ಟು ಕಠೋರವಾಗಿ ವರ್ತಿಸಲು ಹೇಗೆ ಸಾಧ್ಯ?  

ಅವರೇನು ಪಾಕಿಸ್ತಾನಿಗಳೇ? ಯಾರಾದರೂ ಸಾಯಲಿ ಎಂದು ಸರ್ಕಾರ ಕಾಯುತ್ತಿದೆಯೇ? ಗದ್ದುಗೆಯೇರಿ ಕುಳಿತಿರುವ ಪ್ರಧಾನಿ ಮೋದಿಗೆ ಮಕ್ಕಳ ಕೂಗು ಕೇಳಿಸಿಕೊಳ್ಳುವ ಸದ್ಬುದ್ಧಿಯನ್ನು ದೇವರು ಕರುಣಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನಾಹಾರ ತೊರೆದ ಪುತ್ರನನ್ನು ನೆನೆಯುತ್ತಾ, ತಾವೂ ಅವರೊಂದಿಗೆ ಉಪವಾಸ ಕೂರುವುದಾಗಿಯೂ ಎಚ್ಚರಿಸಿದ್ದಾರೆ.

ನಾಳೆ ಜಿರಳೆ ಪಾರ್ಟಿಯಿಂದ ‘ಸಂಸತ್‌ ಚಲೋ’ಗೆ ಸಿದ್ಧತೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ, ಸೋಮವಾರ ‘ಸಂಸತ್‌ ಚಲೋ’ಗೆ ಕರೆ ನೀಡಿದೆ.ಸಂಸತ್‌ ಮುಂಗಾರು ಅಧಿವೇಶನದ ಮೊದಲ ದಿನವೇ ಈ ಬೃಹತ್‌ ಮೆರವಣಿಗೆ ನಡೆಯಲಿದ್ದು, ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಆದರೆ ಇದುವರೆಗೂ ಸಿಜೆಪಿ ಅನುಮತಿ ಕೇಳಿಲ್ಲ. ಅಧಿವೇಶನದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿರುವುದರಿಂದ, ಮೆರವಣಿಗೆಗೆ ಅನುಮತಿ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ ದೆಹಲಿಯಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ದೆಹಲಿ ಪ್ರವೇಶಿಸುವ ಪ್ರತಿ ವಾಹನವನ್ನೂ ತೀವ್ರ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.

ಗೋಡೆ ಮೇಲೆ ವಾಂಗ್ಚುಕ್‌ ಚಿತ್ರ ಬಿಡಿಸಿದವರ ಬಂಧನ

ಗುವಾಹಟಿ: ನಗರದ ಸಾರ್ವಜನಿಕ ಗೋಡೆಯೊಂದರ ಮೇಲೆ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರ ಚಿತ್ರವನ್ನು ಬಿಡಿಸಿದ ಇಬ್ಬರು ಯುವಕರನ್ನು ‘ಗೋಡೆ ವಿರೂಪ’ ಮಾಡಿದ ಆರೋಪ ಹೊರಿಸಿ ಬಂಧಿಸಲಾಗಿದೆ.ಗಸ್ತು ತಿರುಗುತ್ತಿದ್ದ ವೇಳೆ ಇವರಿಬ್ಬರು ಗೋಡೆಗೆ ಪೇಂಟ್‌ ಮಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಸೋನಂರ ಚಿತ್ರ ಬಿಡಿಸುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಕೂಡಲೇ ಬಂಧಿಸಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಅತ್ತ ಬಸಿಷ್ಠ ಮೇಲ್ಸೇತುವೆಯ ಕಂಬಗಳ ಮೇಲೂ ಚಿತ್ರ ಬಿಡಿಸಲಾಗಿದ್ದು, ಅದನ್ನು ರಚಿಸಿದವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಪೂರ್ವಾನುಮತಿ ಪಡೆಯದೆ ಸರ್ಕಾರಿ ಮೂಲಸೌಕರ್ಯಗಳ ಮೇಲೆ ಚಿತ್ರಗಳನ್ನು ಬಿಡಿಸಬಾರದು ಎಂದು ಜು.10ರಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಆದೇಶಿಸಿದ್ದರು ಹಾಗೂ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಚಿಕಿತ್ಸೆ ಬಗ್ಗೆ ವಾಂಗ್ಚುಕ್‌ ಪತ್ನಿ-ಆಸ್ಪತ್ರೆ ಜಟಾಪಟಿ 

 ನವದೆಹಲಿ : ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಾಗಿರುವ ಸೋನಂ ವಾಂಗ್ಚುಕ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆ ಹಾಗೂ ವಾಂಗ್ಚುಕ್‌ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಮಧ್ಯೆ ವಾಕ್ಸಮರ ನಡೆದಿದೆ.‘ವಾಂಗ್ಚುಕ್‌ ಚಿಕಿತ್ಸೆಗೆ ಸಂಬಂಧಿಸಿದ ವರದಿಯ ಪ್ರತಿಗಳನ್ನು ನೀಡಲು ಆಸ್ಪತ್ರೆ ನಿರಾಕರಿಸಿದೆ.  

ಇದು ಚಿಕಿತ್ಸಾ ವಿಧಾನದ ಬಗ್ಗೆ ಅನುಮಾನ ಮೂಡಿಸುವಂತಿದೆ. ನನ್ನ ಅನುಮತಿಯಿಲ್ಲದೇ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡಕೂಡದು. ಬಾಯಿ ಅಥವಾ ರಕ್ತನಾಳದ ಮೂಲಕ ಯಾವುದೇ ಔಷಧ ಅಥವಾ ದ್ರವವನ್ನು ಹಾಕಬಾರದು’ ಎಂದು ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ತಾಕೀತು ಮಾಡಿದ್ದಾರೆ.

ಆದರೆ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿ ಇದಕ್ಕೆ ಉತ್ತರಿಸಿದ್ದು, ‘ವಾಂಗ್ಚುಕ್‌ ಅವರ ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆಗಾಗಿ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಸಲಹೆ ನೀಡಲಾಗುತ್ತಿದೆ. ಆದರೆ ರೋಗಿಯು ದ್ರವ ಅಥವಾ ಯಾವುದೇ ಇತರ ಔಷಧಿಗಳನ್ನು ನಿರಾಕರಿಸಿದ್ದಾರೆ. ಅವರ ಕುಟುಂಬಸ್ಥರು ಚಿಕಿತ್ಸೆಗೆ ಅನುಮತಿ ನೀಡಬೇಕು. ಇಲ್ಲದೇ ಹೋದರೆ ಸ್ಥಿತಿ ವಿಷಮಿಸುವ ಆತಂಕವಿದೆ’ ಎಂದಿದೆ.ಉಪವಾಸ ಸತ್ಯಾಗ್ರಹ ಆರಂಭವಾದಾಗಿನಿಂದ ಅವರ ತೂಕ 9.5 ಕೆಜಿಯಷ್ಟು ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

84ರಲ್ಲಿ ಉಪವಾಸ ನಡೆಸಿದ್ದ ವಾಂಗ್ಚುಕ್‌ ತಂದೆ

ನವದೆಹಲಿ: 20 ದಿನಗಳ ನಿರಶನದ ಮೂಲಕ ದೇಶದ ಗಮನವನ್ನು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯತ್ತ ಸೆಳೆದಿರು/ವ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರ ತಂದೆ ಸೋನಂ ವಾಂಗ್ಯಾಲ್‌, ಲಡಾಖ್‌ ಜನರಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡಬೇಕೆಂದು ಆಗ್ರಹಿಸಿ 1984ರಲ್ಲಿ ಉಪವಾಸ ಕುಳಿತಿದ್ದರು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಖುದ್ದಾಗಿ ಬಂದು ಅವರನ್ನು ಭೇಟಿ ಆಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು. 

ತಮ್ಮ ಹುಟ್ಟೂರಾದ ಲಡಾಖ್‌ ಜನರಿಗೆ ಸಾಂವಿಧಾನಿಕವಾಗಿ ಪರಿಶಿಷ್ಟ ಪಂಗಡದ ಸ್ಥಾನ ನೀಡಬೇಕೆಂದು ಆಗ್ರಹಿಸಿ 1984ರಲ್ಲಿ ವಾಂಗ್ಯಾಲ್‌ ಅವರು ಲೇಹ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಘೋಷಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗಾಗಮಿಸಿದ್ದ ಇಂದಿರಾ, ಅವರ ಬೇಡಿಕೆಯನ್ನು ಪರಿಶೀಲಿಸುವ ಭರವಸೆ ನೀಡಿದ್ದರು ಹಾಗೂ ಉಪವಾಸ ನಿಲ್ಲಿಸುವಂತೆ ಆಗ್ರಹ ಮಾಡಿದ್ದರು. ಇಂದಿರಾ ಹತ್ಯೆಯ ಬಳಿಕ ಪ್ರಧಾನಿಯಾದ ರಾಜೀವ್‌ ಗಾಂಧಿ ಅವರ ಸರ್ಕಾರ 1989ರಲ್ಲಿ ಪರಿಶಿಷ್ಟ ಪಂಗಡದ ಸ್ಥಾನ ನೀಡುವ ಮೂಲಕ ವಾಂಗ್ಯಾಲ್‌ ಅವರ ಆಸೆಯನ್ನು ಈಡೇರಿಸಿತ್ತು.

ಅಭಿಜೀತ್‌ ದೀಪ್ಕೆ ಮೇಲೆ ಶಾಯಿ ಎರಚಿದ ಮಹಿಳೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಜಿರಳೆ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಮಹಿಳೆಯೊಬ್ಬಳು ಶಾಯಿ ಎರಚಿದ ಘಟನೆ ಶನಿವಾರ ನಡೆದಿದೆ. ಶಾಯಿ ಎರಚಿದ ಈಕೆ ‘ಜೈ ಶ್ರೀರಾಂ’ ಘೋಷಣೆ ಕೂಗಿದ್ದು, ಆಕೆಯನ್ನು ವಶಕ್ಕೆ ಪಡೆಯಲಾಗಿದೆ.ಸೋನಂ ವಾಂಗ್ಚುಕ್‌ರನ್ನು ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಹೊತ್ತೊಯ್ದ ಕೆಲವೇ ಗಂಟೆಗಳ ನಂತರ ದೀಪ್ಕೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆಗ ಏಕಾಏಕಿ ಮಹಿಳೆಯೊಬ್ಬಳು ಅವರ ಮೇಲೆ ಶಾಯಿ ಎರಚಿದಳು. ತಕ್ಷಣ ಪ್ರತಿಭಟನಾಕಾರರು ವೇದಿಕೆಯತ್ತ ನುಗ್ಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಗುರುತು ಮತ್ತು ಕೃತ್ಯದ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನ ವಿದ್ಯುತ್‌, ನೀರು ಶುದ್ಧೀಕರಣ ಘಟಕ ಧ್ವಂಸ
ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ