ಎಚ್‌ಎಎಲ್‌ ವಿಮಾನ ಫ್ಯಾಕ್ಟರಿ ಬೆಂಗ್ಳೂರಿಂದ ಒಯ್ಯಲು ಲಾಬಿ

KannadaprabhaNewsNetwork | Updated : May 26 2025, 05:06 AM IST

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಹೇಳಿ, ಎಚ್‌ಎಎಲ್‌ನ ಯುದ್ಧ ವಿಮಾನ ತಯಾರಿಕಾ ಘಟಕವನ್ನೇ ತಮ್ಮ ರಾಜ್ಯಕ್ಕೆ ವರ್ಗಾಯಿಸುವಂತೆ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದ್ದಾರೆ.

Follow Us

 ನವದೆಹಲಿ : ಕಳೆದ ವರ್ಷ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದು ಐಟಿ ಉದ್ಯಮಗಳು ಆಕ್ರೋಶ ವ್ಯಕ್ತಪಡಿಸಿದಾಗ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ನಾಯಕ ನಾ.ರಾ. ಲೋಕೇಶ್‌, ಬೆಂಗಳೂರಿನ ಐಟಿ ಕಂಪನಿಗಳಿಗೆ ಆಂಧ್ರಕ್ಕೆ ಬರುವಂತೆ ಆಹ್ವಾನಿಸಿದ್ದರು. ಇದೀಗ ಲೋಕೇಶ್‌ ಅವರ ತಂದೆ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಹೇಳಿ, ಎಚ್‌ಎಎಲ್‌ನ ಯುದ್ಧ ವಿಮಾನ ತಯಾರಿಕಾ ಘಟಕವನ್ನೇ ತಮ್ಮ ರಾಜ್ಯಕ್ಕೆ ವರ್ಗಾಯಿಸುವಂತೆ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದ್ದಾರೆ.

ನೀತಿ ಆಯೋಗದ ಸಭೆ ಮತ್ತು ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸಲು ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿರುವ ಚಂದ್ರಬಾಬು ನಾಯ್ಡು, ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರೀ ಲಾಬಿ:

ಶನಿವಾರ ರಾಜನಾಥ್‌ ಸಿಂಗ್‌ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ ಸಿಎಂ ನಾಯ್ಡು, ‘ಎಚ್‌ಎಎಲ್‌ 2026-27ರ ವೇಳೆಗೆ 2.5 ಲಕ್ಷ ಕೋಟಿ ರು. ಮೊತ್ತದ ಉತ್ಪನ್ನಗಳನ್ನು ಪೂರೈಸಬೇಕಿದೆ. ಇದರಲ್ಲಿ ಎಲ್‌ಸಿಎ ತೇಜಸ್‌ ಮತ್ತು ಲಘು ಯುದ್ಧ ವಿಮಾನ ಕೂಡ ಸೇರಿವೆ. ಈ ಉತ್ಪಾದನೆ ಹೆಚ್ಚಿಸಲು ಅಗತ್ಯ ನೆರವು ನೀಡಲು ಆಂಧ್ರ ಸರ್ಕಾರ ಸಹಾಯ ಮಾಡಲು ಸಿದ್ಧವಿದೆ ಎಂದು ನಾಯ್ಡು ಹೇಳಿದ್ದಾರೆ’ ಎನ್ನಲಾಗಿದೆ.

ಮಡಕಶಿರದಲ್ಲಿ ಜಾಗದ ಆಫರ್‌:

ಬೆಂಗಳೂರಿನಲ್ಲಿರುವ ಎಚ್‌ಎಎಲ್‌ನಲ್ಲಿ ಎಲ್‌ಸಿಎ ತೇಜಸ್‌ ಮತ್ತು ಎಎಂಸಿಎ ಸ್ಟೆಲ್ತ್‌ ಯುದ್ಧ ವಿಮಾನ ತಯಾರಿಕೆಗೆ ಸ್ಥಳಾವಕಾಶ ಸೇರಿ ಅನೇಕ ಮೂಲಭೂತ ಸೌಕರ್ಯದ ಕೊರತೆ ಎದುರಾಗುತ್ತಿದೆ. ಇದನ್ನು ನೀಗಿಸಲು ಬೆಂಗಳೂರಿನಿಂದ ಕೇವಲ 2 ತಾಸು ದೂರದಲ್ಲಿರುವ ಲೇಪಾಕ್ಷಿ - ಮಡಕಶಿರ ಬಳಿ 10,000 ಎಕರೆ ಭೂಮಿಯನ್ನು ಕೊಡಲು ಆಂಧ್ರ ಸಿದ್ಧವಿದೆ ಎಂಬ ಪ್ರಸ್ತಾವವನ್ನು ನಾಯ್ಡು ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ರಕ್ಷಣಾ ಕೈಗಾರಿಕಾ ಹಬ್‌:

ಇದೇ ವೇಳೆ ಉತ್ತರ ಪ್ರದೇಶ, ತಮಿಳುನಾಡು ಬಳಿಕ ದೇಶದ ಮೂರನೇ ರಕ್ಷಣಾ ಕೈಗಾರಿಕಾ ಕಾರಿಡಾರ್‌ ಅನ್ನು ಆಂಧ್ರ ಪ್ರದೇಶದಲ್ಲಿ ತೆರೆಯುವ ಯೋಜನೆಯನ್ನು ನಾಯ್ಡು ಅವರು ರಾಜನಾಥ್‌ ಸಿಂಗ್‌ ಅವರ ಮುಂದಿಟ್ಟಿದ್ದಾರೆ. ಈ ಯೋಜನೆಗೆ ಆಂಧ್ರದಲ್ಲಿ 23,000 ಎಕರೆಯ ವಿಸ್ತೀರ್ಣವನ್ನು ಸರ್ಕಾರ ಗುರುತಿಸಿದ್ದು, 5 ಹಬ್‌ಗಳು ಇದರಲ್ಲಿ ಇರಲಿದೆ.

1. ಲೇಪಾಕ್ಷಿ - ಮಡಕಶಿರ ಹಬ್‌:

ಇದು 10,000 ಎಕರೆ ವಿಸ್ತೀರ್ಣ ಇರಲಿದ್ದು, ಎಲ್‌ಸಿಎ ತೇಜಸ್‌, ಎಲ್‌ಎಂಸಿಎ 5ನೇ ತಲೆಮಾರಿನ ಸ್ಟೆಲ್ತ್‌ ಯುದ್ಧ ವಿಮಾನಗಳನ್ನು ಉತ್ಪಾದಿಸಲು ಬಳಸಿಕೊಳ್ಳಲು ಯೋಜಿಸಲಾಗಿದೆ.

2. ವಿಶಾಖಪಟ್ಟಣ - ಅನಕಪಲ್ಲಿ ಹಬ್‌:

3000 ಎಕರೆಯ ಈ ಪ್ರದೇಶದಲ್ಲಿ ನೌಕಾಪಡೆಯ ಉತ್ಪನ್ನಗಳು ಮತ್ತು ಶಸ್ತಾಸ್ತ್ರ ಪರೀಕ್ಷೆ, ಮತ್ತು ಮರೈನ್‌ ಮತ್ತು ಅಂಡರ್‌ವಾಟರ್‌ ಎಸ್‌ಇಝಡ್‌ ಆಗಿ ಪರಿವರ್ತಿಸಲು ಯೋಜಿಸಲಾಗಿದೆ.

3. ಜಗ್ಗಿಯಾಪೇಟ್‌ - ಡೊನಕೊಂಡಾ ಹಬ್‌: ಡೊನಕೊಂಡಾದಲ್ಲಿ ಈಗಾಗಲೇ ಗುರುತಿಸಿರುವ 6,000 ಎಕರೆ ವಿಸ್ತೀರ್ಣದಲ್ಲಿ ಏರ್‌ಫೋರ್ಸ್‌ ಸ್ಟೇಷನ್‌ ತೆರೆಯಲು ಪ್ರಸ್ತಾವವಿದೆ. ಇಲ್ಲಿ ಸೇನಾ ಲಾಜಿಸ್ಟಿಕ್‌ ಕೇಂದ್ರ, ಸಿಬ್ಬಂದಿ ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ತೆರೆಯಲು ಯೋಜಿಸಲಾಗಿದೆ.

4. ಕರ್ನೂಲ್‌- ಒರಾವಕಲ್‌ ಹಬ್‌:

4000 ಎಕರೆ ಪ್ರದೇಶವನ್ನು ಸೇನಾ ಡ್ರೋನ್‌, ರೋಬಾಟಿಕ್ಸ್‌, ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳನ್ನು ತಯಾರಿಸಲು ನಿಗದಿಪಡಿಸಲಾಗಿದೆ.

5. ತಿರುಪತಿ ಹಬ್‌:

ಇಲ್ಲಿ ಸೇನಾ ನಾವೀನ್ಯತಾ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ನಿಗದಿಪಡಿಸಲಾಗಿದೆ.

ನಾಯ್ಡು ವಾದ ಏನು?

- ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಕಂಪನಿ ಮುಂದಿನ ವರ್ಷದ ವೇಳೆಗೆ 2.5 ಲಕ್ಷ ಕೋಟಿ ರು. ಉತ್ಪನ್ನ ಪೂರೈಸಬೇಕು- ಆದರೆ ಬೆಂಗಳೂರಿನಲ್ಲಿರುವ ಎಚ್‌ಎಎಲ್‌ ಘಟಕದಲ್ಲಿ ತೇಜಸ್‌, ಎಎಂಸಿಎ ಯುದ್ಧ ವಿಮಾನ ತಯಾರಿಕೆಗೆ ಸೌಕರ್ಯದ ಕೊರತೆ- ಬೆಂಗಳೂರಿನಿಂದ 2 ತಾಸು ದೂರದಲ್ಲಿರುವ ಲೇಪಾಕ್ಷಿ-ಮಡಕಶಿರ ಬಳಿ 10 ಸಾವಿರ ಎಕರೆಯನ್ನು ನಾವು ಕೊಡಲು ಸಿದ್ಧ ಇದ್ದೇವೆ- ಎಚ್‌ಎಎಲ್‌ ಉತ್ಪಾದನೆ ಹೆಚ್ಚಿಸಲು ನಾವು ನೆರವಾಗುತ್ತೇವೆ. ನಮಗೆ ಘಟಕ ಕೊಡಿ ಎಂದು ರಾಜನಾಥ್‌ ಬಳಿ ಭರ್ಜರಿ ಲಾಬಿ

Read more Articles on