;Resize=(412,232))
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಎದ್ದಿರುವ ದಿತ್ವಾ ಚಂಡಮಾರುತದ ಪ್ರಭಾವ ರಾಜ್ಯಕ್ಕೂ ತಟ್ಟಿದ್ದು, ರಾಜ್ಯದ ಹಲವೆಡೆ, ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಶೀತ ಗಾಳಿ, ಆಗಾಗ ಹಿಮದಂತೆ ಸುರಿಯುವ ಸೋನೆ ಮಳೆ, ಮೈ ಕೊರೆಯುವ ಚಳಿ ಸಾಮಾನ್ಯವಾಗಿದೆ. ಶೀತಗಾಳಿಗೆ ಜನ ತತ್ತರಿಸುತ್ತಿದ್ದು, ಸಾಮಾಜ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ರಾಜಧಾನಿ ಬೆಂಗಳೂರು, ಪಕ್ಕದ ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಸೇರಿ ಹಳೆ ಮೈಸೂರು ಭಾಗದ ಹಲವೆಡೆ ಭಾನುವಾರವಿಡೀ ಜಿಟಿಜಿಟಿ ಮಳೆ ಸುರಿಯಿತು ಮತ್ತು ಮೈಕೊರೆಯುವ ಚಳಿ ಜನರನ್ನು ಬಾಧಿಸಿತು.
ಶನಿವಾರ ಸಂಜೆಯಿಂದಲೇ ಶುರುವಾದ ತುಂತುರು ಮಳೆ ಭಾನುವಾರ ಸಂಜೆಯವರೆಗೂ ಸುರಿಯುತ್ತಲೇ ಇತ್ತು. ಹೀಗಾಗಿ, ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಚಳಿಯಿಂದ ರಕ್ಷಣೆ ಪಡೆಯಲು ಜನರು ಟೋಪಿ, ಸೈಟರ್, ಜರ್ಕಿನ್‌ಗಳ ಮೊರೆ ಹೋದರು. ಚಳಿಗೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ಶೀತದ ನಾನಾ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ, ಔಷಧಗಳನ್ನು ಸೇವಿಸುವುದರ ಪ್ರಮಾಣ ಕೂಡ ಹೆಚ್ಚಾಗಿ ಕಂಡು ಬಂತು.
ನಂದಿಗಿರಿಧಾಮ, ಈಶಾ ಕೇಂದ್ರ ಸೇರಿ ಬೆಂಗಳೂರು ಸುತ್ತಮುತ್ತಲ ಪ್ರವಾಸಿಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಪ್ರವಾಸಿತಾಣಗಳಲ್ಲಿ ಎಂದಿನಂತೆ ವೀಕೆಂಡ್ ರಶ್ ಕಂಡು ಬರಲಿಲ್ಲ. ಈ ಮಧ್ಯೆ, ರಾಜ್ಯದಲ್ಲಿಯೇ ಅತಿ ಕಡಿಮೆ ತಾಪಮಾನ 12.5 ಡಿಗ್ರಿ ಸೆಂಟಿಗ್ರೇಡ್ ವಿಜಯಪುರ ಹಾಗೂ ಧಾರವಾಡಗಳಲ್ಲಿ ದಾಖಲಾಗಿತ್ತು.